ಚಾರ್ಮಾಡಿ ಘಾಟಿ: ಪಾನಮತ್ತ ಪ್ರವಾಸಿಗರ ಹುಚ್ಚಾಟ, ಸ್ಥಳೀಯರ ಮೇಲೆ ಹಲ್ಲೆ!: ಸಮಾಜ ಸೇವಕ ಆರಿಫ್ ಗೆ ಗಾಯ
ಕೊಟ್ಟಿಗೆಹಾರ: ಪಾನಮತ್ತರಾಗಿದ್ದ ಪ್ರವಾಸಿಗರು ಚಾಲನೆ ಮಾಡುತ್ತಿದ್ದ ಕಾರೊಂದು ನಿಂತಿದ್ದ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಿದ್ದು, ಆಸ್ಪತ್ರೆಗೆ ಕರೆದೊಯ್ಯಲು ಬಂದ ಆಂಬುಲೆನ್ಸ್ ಚಾಲಕ ಸೇರಿ ಸ್ಥಳೀಯರ ಮೇಲೆ ಹಲ್ಲೆ ನಡೆಸಿ ಹುಚ್ವಾಟ ನಡೆಸಿದ್ದಾರೆ.
ಕೊಟ್ಟಿಗೆಹಾರದ ಚಾರ್ಮಾಡಿ ಘಾಟಿ ಆರಂಭದಲ್ಲಿನ ತೇಜಸ್ವಿ ಪ್ರತಿಷ್ಠಾನದ ಸಮೀಪ ನಿಂತಿದ್ದ ಕಾರಿಗೆ ಚಾರ್ಮಾಡಿ ಘಾಟಿ ಕಡೆಯಿಂದ ಬಂದ ಬೆಂಗಳೂರು ಮೂಲದ ಪ್ರವಾಸಿಗರಿದ್ದ ಕಾರು ಡಿಕ್ಕಿ ಹೊಡೆಯಿತು. ಕಾರಿನಲ್ಲಿದ್ದ ಇಬ್ಬರಿಗೆ ಗಾಯಗಳಾಗಿವೆ.
ಸುದ್ದಿ ತಿಳಿದು ಸ್ಥಳದಲ್ಲಿದ್ದ ಸ್ಥಳೀಯರು ಆಂಬುಲೆನ್ಸ್ ಕರೆಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಮುಂದಾದರು. ಈ ಸಂದರ್ಭದಲ್ಲಿ ಪಾನಮತ್ತರಾಗಿ ವಾಹನ ಚಾಲನೆ ಮಾಡಿ ಅಪಘಾತ ಮಾಡಿದ ಪ್ರವಾಸಿಗರನ್ನು ಸ್ಥಳೀಯರು ಪ್ರಶ್ನೆ ಮಾಡಿದರು.
ಇದರಿಂದ ಕುಪಿತಗೊಂಡ ಐವರು ಪ್ರವಾಸಿಗರ ಗುಂಪು ಪೊಲೀಸರ ಎದುರೇ ಸ್ಥಳೀಯರು ಮತ್ತು ಆಂಬುಲೆನ್ಸ್ ಚಾಲಕನ ಮೇಲೆ ಹಲ್ಲೆ ನಡೆಸಿದ್ದು, ಈ ದೃಶ್ಯವನ್ನು ಅನ್ಯ ಪ್ರವಾಸಿಗರು ಮೊಬೈಲ್ ಫೋನ್ ನಲ್ಲಿ ಸೆರೆ ಹಿಡಿದಿದ್ದಾರೆ.
ಆಂಬುಲೆನ್ಸ್ ಚಾಲಕ ಆರಿಫ್ ಮೂಳೆ ಮುರಿದಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೀಫ್ ಅವರು ಚಾರ್ಮಾಡಿ ಘಾಟಿಯಲ್ಲಿ ಯಾವುದೇ ಅಪಘಾತ ನಡೆದರೂ ಸ್ಥಳಕ್ಕೆ ಧಾವಿಸಿ ನೆರವಿಗೆ ನಿಲ್ಲುವುದು ಸಾಮಾನ್ಯ. ಪ್ರಪಾತಕ್ಕೆ ಬಿದ್ದ ವಾಹನಗಳನ್ನು ಮೇಲೆತ್ತಲು, ಶವಗಳನ್ನು ಮೇಲೆತ್ತಲು ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಮೇಲೆಯೇ ಹಲ್ಲೆ ನಡೆದಿರುವುದು ಬೇಸರದ ಸಂಗತಿ ಎಂದು ಸ್ಥಳೀಯರು ಹೇಳಿದರು.
ಹಲ್ಲೆ ನಡೆಸಿರುವ ಪಾನಮತ್ತ ಪ್ರವಾಸಿಗರ ವಿರುದ್ಧ ಮೂರು ಪ್ರಕರಣ(ಪಾನಮತ್ತ ಚಾಲನೆ, ಬೀದಿ ಜಗಳ, ಸಾರ್ವಜನಿಕರಿಗೆ ತೊಂದರೆ) ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: