ಸಿಡಿ ಹಿಂದೆ ಅತೃಪ್ತರ ಕೈವಾಡ ಇದೆಯೇ? | ಡಿಕೆಶಿ ಜೊತೆ ಬಾಲಚಂದ್ರ ಮಾತನಾಡಿದ್ದೇನು?
ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ವಿಚಾರವಾಗಿ ಸದ್ಯ ದೇಶಾದ್ಯಂತ ಚರ್ಚೆಗಳು ನಡೆಯುತ್ತಿದೆ. ಇದೇ ಸಂದರ್ಭದಲ್ಲಿ ನಿನ್ನೆ ರಮೇಶ್ ಜಾರಕಿಹೊಳಿ ಸಹೋದರರಾಗಿರುವ ಸತೀಶ್ ಜಾರಕಿಹೊಳಿ ಕೂಡ ಸದನಕ್ಕೆ ಗೈರಾಗಿದ್ದಾರೆ. ಇತ್ತ ಇನ್ನೋರ್ವ ಸಹೋದರ ಬಾಲಕಚಂದ್ರ ಜಾರಕಿಹೊಳಿ ಸದನದಲ್ಲಿ ಡಿ.ಕೆ.ಶಿವಕುಮಾರ್ ಅವರ ಜೊತೆಗೆ ಮಾತನಾಡುತ್ತಿರುವುದು ಕಂಡು ಬಂತು.
ರಮೇಶ್ ಜಾರಕಿಹೊಳಿ ಸಿಡಿ ಬಿಡುಗಡೆಯ ಹಿಂದೆ ಡಿ.ಕೆ.ಶಿವಕುಮಾರ್ ಕೈವಾಡ ಇದೆ ಎಂದು ಆರಂಭದಲ್ಲಿ ಬಿಂಬಿಸಲಾಗಿತ್ತು. ಜೊತೆಗೆ ಕಾಂಗ್ರೆಸ್ ನಾಯಕರೇ ಈ ಸಿಡಿ ಹಿಂದೆ ಇದ್ದಾರೆ ಎನ್ನುವ ಮಾತುಗಳೂ ಕೇಳಿ ಬಂದಿದ್ದವು ಆದರೆ, ಇದೀಗ ಸಿಡಿ ಬಿಡುಗಡೆಯ ಹಿಂದೆ ಬಿಜೆಪಿಯ ಅತೃಪ್ತ ಶಾಸಕರು ಇರುವ ಸಾಧ್ಯತೆಗಳು ಹೆಚ್ಚಿವೆ ಎಂದು ವಿಮರ್ಶಿಸಲಾಗುತ್ತಿದೆ.
ನಿನ್ನೆ ಬಜೆಟ್ ಅಧಿವೇಶನ ಆರಂಭವಾಗಿದೆ. ಸಿಡಿ ಬಿಡುಗಡೆಯ ಬಳಿಕ ಮಾಧ್ಯಮವೊಂದಕ್ಕೆ ರಮೇಶ್ ಜಾರಕಿಹೊಳಿ ಒಂದು ಬಾರಿ ಮಾತ್ರವೇ ಪ್ರತಿಕ್ರಿಯೆ ನೀಡಿದ್ದಾರೆ. ಆ ಬಳಿಕ ಅವರು ಎಲ್ಲಿದ್ದಾರೆ ಎಂಬ ಬಗ್ಗೆ ಯಾರಿಗೂ ಯಾವುದೇ ಮಾಹಿತಿ ಇಲ್ಲ. ಇನ್ನೂ ರಮೇಶ್ ಜಾರಕಿಹೊಳಿ ಅವರ ಸಹೋದರ ಸತೀಶ್ ಜಾರಕಿಹೊಳಿ ಅವರು ಈ ಘಟನೆಯಿಂದ ತೀವ್ರವಾಗಿ ನೊಂದಿದ್ದಾರೆ ಎಂದು ಹೇಳಲಾಗುತ್ತಿದ್ದು, ಅವರು ಕೂಡ ನಿನ್ನೆ ಸದನಕ್ಕೆ ಹಾಜರಾಗಿಲ್ಲ.
ಇದೊಂದು ಸಿಡಿ ಪ್ರಕರಣ ಎನ್ನುವುದಕ್ಕಿಂತಲೂ ಹನಿಟ್ರ್ಯಾಪ್ ಪ್ರಕರಣವಾಗಿ ಇದೀಗ ಮಾರ್ಪಾಡಾಗುತ್ತಿದೆ. ರಮೇಶ್ ಜಾರಕಿಹೊಳಿಯವರನ್ನು ನಂಬಿಸಿ ಕೆಡ್ಡಕ್ಕೆ ಬೀಳಿಸಲಾಗಿದೆ ಎಂದು ಚರ್ಚೆಗಳಾಗುತ್ತಿದೆ. ಇನ್ನೊಂದೆಡೆ ಪ್ರಭಾವಿ ವ್ಯಕ್ತಿಯ ಖಾಸಗಿ ಜೀವನವನ್ನು ಬಹಿರಂಗಗೊಳಿಸಿ ಚಾರಿತ್ರ್ಯವಧೆ ಮಾಡಲು ಪ್ರಯತ್ನಗಳಾಗುತ್ತಿವೆ ಎನ್ನುವ ಮಾತುಗಳೂ ಕೇಳಿ ಬಂದಿವೆ.