ಜಾಮೀನು ಆದೇಶಗಳನ್ನು ಸಾಮಾನ್ಯವಾಗಿ ತಡೆಯಬಾರದು: ಸುಪ್ರೀಂಕೋರ್ಟ್ ತೀರ್ಪು - Mahanayaka

ಜಾಮೀನು ಆದೇಶಗಳನ್ನು ಸಾಮಾನ್ಯವಾಗಿ ತಡೆಯಬಾರದು: ಸುಪ್ರೀಂಕೋರ್ಟ್ ತೀರ್ಪು

23/07/2024

ಮಂಗಳವಾರ ನೀಡಿದ ಮಹತ್ವದ ತೀರ್ಪೊಂದರಲ್ಲಿ ಸರ್ವೋಚ್ಚ ನ್ಯಾಯಾಲಯವು ಜಾಮೀನು ಆದೇಶಗಳನ್ನು ಸಾಮಾನ್ಯವಾಗಿ ತಡೆಯಬಾರದು ಎಂದು ಎತ್ತಿ ಹಿಡಿದಿದೆ. ಆರೋಪಿಯು ಭಯೋತ್ಪಾದಕನಾಗಿದ್ದರೆ, ದೇಶವಿರೋಧಿಯಾಗಿದ್ದರೆ, ಜಾಮೀನು ಆದೇಶವು ದೋಷಪೂರ್ಣವಾಗಿದ್ದರೆ ಅತ್ಯಂತ ಅಪರೂಪದ ಪ್ರಕರಣಗಳಲ್ಲಿ ಮಾತ್ರ ಜಾಮೀನನ್ನು ತಡೆಹಿಡಿಯಬಹುದು ಎಂದು ಒತ್ತಿ ಹೇಳಿದೆ.

ಅಕ್ರಮ ಹಣ ವರ್ಗಾವಣೆ ಪ್ರಕರಣವೊಂದರಲ್ಲಿ ಮಂಜೂರಾಗಿದ್ದ ಜಾಮೀನಿಗೆ ತಡೆಯಾಜ್ಞೆ ನೀಡಿದ್ದ ದಿಲ್ಲಿ ಉಚ್ಚ ನ್ಯಾಯಾಲಯದ ಆದೇಶವನ್ನು ತಳ್ಳಿ ಹಾಕಿದ ಸರ್ವೋಚ್ಚ ನ್ಯಾಯಾಲಯವು,ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ ಜಾಮೀನು ಆದೇಶಗಳಿಗೆ ತಡೆಯನ್ನು ನೀಡಬಹುದು ಎಂದು ಹೇಳಿತು.

ಜಾಮೀನಿಗೆ ತಡೆಯಾಜ್ಞೆ ನೀಡಲು ನ್ಯಾಯಾಲಯಕ್ಕೆ ಅಧಿಕಾರವಿರಬಹುದು,ಆದರೆ ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ ಅದನ್ನು ಮಾಡಬೇಕು. ಸಾಮಾನ್ಯವಾಗಿ ಜಾಮೀನು ಆದೇಶಗಳಿಗೆ ತಡೆ ನೀಡಬಾರದು ಎಂದು ತೀರ್ಪನ್ನು ಮೌಖಿಕವಾಗಿ ಪ್ರಕಟಿಸಿದ ನ್ಯಾ.ಎ.ಎಸ್. ಓಕಾ ಹೇಳಿದರು.

ಹಿಂದಿನ ವಿಚಾರಣೆ ಸಂದರ್ಭದಲ್ಲಿ,ಯಾವುದೇ ಕಾರಣಗಳನ್ನು ನೀಡದೇ ನಿಯಮಿತ ಜಾಮೀನು ಆದೇಶವನ್ನು ತಡೆಹಿಡಿದಿದ್ದ ದಿಲ್ಲಿ ಉಚ್ಚ ನ್ಯಾಯಾಲಯದ ನಿರ್ಧಾರದ ಬಗ್ಗೆ ಆಘಾತ ವ್ಯಕ್ತಪಡಿಸಿದ ನ್ಯಾಯಮೂರ್ತಿ ಓಕಾ ,,‘ದಯವಿಟ್ಟು ಪರಿಣಾಮಗಳನ್ನು ಪರಿಗಣಿಸಿ.

ಜಾಮೀನು ಮಂಜೂರಾಗಿದೆ ಮತ್ತು ವಿಷಯವನ್ನು ಪರಿಶೀಲಿಸದೆ ನ್ಯಾಯಾಲಯವು ಅದಕ್ಕೆ ತಡೆ ನೀಡುತ್ತದೆ ಹಾಗೂ ಒಂದು ವರ್ಷದ ಬಳಿಕ ನೀವು ರಿಟ್ ಅರ್ಜಿಯನ್ನು ವಜಾಗೊಳಿಸಲಾದ ಸನ್ನಿವೇಶ ಎದುರಿಸುತ್ತೀರಿ. ಒಂದು ವರ್ಷ ಕಾಲ ವ್ಯಕ್ತಿಯು ಯಾವುದೇ ಕಾರಣವಿಲ್ಲದೆ ಜೈಲಿನಲ್ಲಿ ಕೊಳೆಯುವುದು ಮುಂದುವರಿಯುತ್ತದೆ. ಇಲ್ಲಿ ಸ್ವಾತಂತ್ರ್ಯದ ಅಂಶದ ಬಗ್ಗೆ ನಾವು ಚಿಂತಿತರಾಗಿದ್ದೇವೆ ಎಂದು ಹೇಳಿದ್ರು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ