ಪ್ರೀತಿಗಾಗಿ ಜೊತೆ ಬಂದವಳನ್ನು ಕೊಂದು ಹೂತು ಹಾಕಿದ ಪಾಪಿ! - Mahanayaka
6:24 AM Thursday 19 - September 2024

ಪ್ರೀತಿಗಾಗಿ ಜೊತೆ ಬಂದವಳನ್ನು ಕೊಂದು ಹೂತು ಹಾಕಿದ ಪಾಪಿ!

sowmya
25/07/2024

ಶಿವಮೊಗ್ಗ: ಪ್ರೀತಿಗಾಗಿ ಜೊತೆಗೆ ಬಂದವಳನ್ನು ಯುವಕನೊಬ್ಬ ಕೊಂದು ಹೂತು ಹಾಕಿರುವ ಅಮಾನವೀಯ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಮುಂಬಾಳು ಗ್ರಾಮದಲ್ಲಿ ನಡೆದಿದೆ.

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಮೂಲದ ಸೌಮ್ಯ ಮೃತಪಟ್ಟ ಯುವತಿಯಾಗಿದ್ದು, ಸಾಗರ ಮೂಲದ ಆರೋಪಿ ಸೃಜನ್ ಹತ್ಯೆ ನಡೆಸಿದ ಆರೋಪಿಯಾಗಿದ್ದಾನೆ. ಸದ್ಯ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಸಾಗರ ತಾಲ್ಲೂಕಿನ ಮುಂಬಾಳು ಮೂಲದ ಸೃಜನ್ ತೀರ್ಥಹಳ್ಳಿಯಲ್ಲಿ ಫೈನಾನ್ಸ್ ಕಂಪನಿವೊಂದರಲ್ಲಿ ಕೆಲಸ ಮಾಡುತ್ತಿದ್ದಾಗ ಹಣ ವಸೂಲಿಗೆಂದು ಕೊಪ್ಪಗೆ ಹೋಗುತ್ತಿದ್ದಾಗ ಅಲ್ಲಿ ನರ್ಸಿಂಗ್ ವ್ಯಾಸಂಗ ಮಾಡ್ತಿದ್ದ ಯುವತಿ ಸೌಮ್ಯ ಪರಿಚಯವಾಗಿದ್ದಳು ಎನ್ನಲಾಗಿದೆ. ಎರಡೂವರೆ ವರ್ಷಗಳಿಂದ ಇಬ್ಬರೂ ಪ್ರೀತಿಸುತ್ತಿದ್ದರು. ನಮ್ಮ ಸಂಬಂಧ ಬರೇ ಪ್ರೀತಿಗೆ ಸೀಮಿತವಾಗಬಾರದು, ಮದುವೆಯಾಗೋಣ ಎಂದು ಸೌಮ್ಯ ಹೇಳುತ್ತಿದ್ದಂತೆಯೇ ಸೃಜನ್ ನ ನಿಜ ಸ್ವರೂಪ ಬಯಲಾಗಿದೆ.


Provided by

ನಾವಿಬ್ಬರೂ ಬೇರೆ ಜಾತಿಯವರು ಮನೆಯಲ್ಲಿ ಮದುವೆಗೆ ಒಪ್ಪುತ್ತಿಲ್ಲ ಎಂದು ಸೌಮ್ಯಳಿಂದ ಅಂತರ ಕಾಪಾಡಲು ಸೃಜನ್ ಯತ್ನಿಸಿದ್ದಾನೆ. ಸೃಜನ್ ಮೋಸ ಮಾಡುತ್ತಿದ್ದಾನೆ ಎನ್ನುವುದು ತಿಳಿಯುತ್ತಿದ್ದಂತೆಯೇ ಸೌಮ್ಯಾ ಮದುವೆಯಾಗುವಂತೆ ಒತ್ತಡ ಹಾಕಲು ಆರಂಭಿಸಿದ್ದಳು.

ಜುಲೈ 2ರಂದು‌ ಕೊಪ್ಪದಿಂದ ಸೌಮ್ಯಾ ಹೊರಟು ಬಂದಿದ್ದಳು. ಈ ಸಂದರ್ಭದಲ್ಲಿ ಯುವಕನ‌ ಬಳಿ ತನ್ನನ್ನು ಮನೆಗೆ ‌ಕರೆದುಕೊಂಡು‌ ಹೋಗುವಂತೆ ‌ಒತ್ತಡ ಹಾಕಿದ್ದಾಳೆ. ನಮ್ಮ ಮನೆಗೆ ಈಗ ಬರಬೇಡ ನಿಮ್ಮ ಮನೆಗೆ ವಾಪಸ್ ಹೋಗು ಎಂದು ಸೃಜನ್ ಹೇಳಿದ್ದನಂತೆ. ಇದಾದ ಬಳಿಕ ಯುವತಿ ಸೃಜನ್ ಜೊತೆಗೆ ತೀರ್ಥಹಳ್ಳಿಯಿಂದ ಹೆದ್ದಾರಿಪುರಕ್ಕೆ ಬಂದಿದ್ದಾಳೆ ಅಲ್ಲಿ ಮತ್ತೆ ಜಗಳ ಆರಂಭವಾಗಿದೆ. ಈ ವೇಳೆ ಸೃಜನ್, ಸೌಮ್ಯಾ  ಮೇಲೆ ಬಲವಾಗಿ ಹಲ್ಲೆ ಮಾಡಿದ್ದಾನೆ ಪರಿಣಾಮ ಯುವತಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಬಳಿಕ ಆರೋಪಿ ಸೃಜನ್ ಯುವತಿಯ ಶವವನ್ನು ಮುಂಬಾಳು ಬಳಿ ಹೂತಿಟ್ಟಿರುವುದಾಗಿ ಒಪ್ಪಿಕೊಂಡಿದ್ದಾನೆ.

ದೂರು ನೀಡಿದ್ದ ಸೌಮ್ಯಾ ಪೋಷಕರು:

ಮನೆಯಿಂದ ಹೊರಟು ಹೋಗಿದ್ದ ನಮ್ಮ ಮಗಳು ನಾಪತ್ತೆಯಾಗಿದ್ದಾಳೆ ಎಂದು ಸೌಮ್ಯಾ ಪೋಷಕರು ಕೊಪ್ಪ ಪೊಲೀಸರಿಗೆ ದೂರು ನೀಡಿದ್ದರು. ಈ ಪ್ರಕರಣ ಕೈಗೆತ್ತಿಕೊಂಡು ಪೊಲೀಸರು ತನಿಖೆ ನಡೆಸಿದ ವೇಳೆ ಘಟನೆ ಬೆಳಕಿಗೆ ಬಂದಿದೆ.

ಪ್ರೀತಿಸಲು ಜಾತಿ ಬೇಡ, ಮದುವೆಗೆ ಬೇಕೆ?

ಪ್ರೀತಿಸುವ ವೇಳೆ ಯಾವ ಜಾತಿ ಎಂದು ಕೇಳಿ ಪ್ರೀತಿಸದವರು ಮದುವೆ ಸಂದರ್ಭದಲ್ಲಿ ಬೇರೆ ಬೇರೆ ಜಾತಿ ಹಾಗಾಗಿ ಮದುವೆ ಬೇಡ ಎಂದು ಅಂತರ ಕಾಯ್ದುಕೊಂಡು ಮೋಸ ಮಾಡುವವರೇ ಹೆಚ್ಚು. ಪ್ರೀತಿಸಲು ಜಾತಿ ಅಡ್ಡಿಯಿಲ್ಲ, ಮದುವೆಯಾಗಲು ಮಾತ್ರವೇ ಜಾತಿ ಅಡ್ಡಿ… ಮನುಷ್ಯರೆಲ್ಲ ಒಂದೇ ಜಾತಿ ಅಂತ ತಿಳಿದುಕೊಳ್ಳುವ ಕಾಲ ಯಾವಾಗ ಬರುತ್ತೋ ಕಾದು ನೋಡಬೇಕಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ