ರೇಣುಕಾಸ್ವಾಮಿ ಮನೆಗೆ ನಟ ವಿನೋದ್ ರಾಜ್ ಭೇಟಿ: ಕುಟುಂಬಸ್ಥರಿಗೆ ಸಾಂತ್ವನ, ಆರ್ಥಿಕ ನೆರವು - Mahanayaka

ರೇಣುಕಾಸ್ವಾಮಿ ಮನೆಗೆ ನಟ ವಿನೋದ್ ರಾಜ್ ಭೇಟಿ: ಕುಟುಂಬಸ್ಥರಿಗೆ ಸಾಂತ್ವನ, ಆರ್ಥಿಕ ನೆರವು

vinod raj
26/07/2024

ಚಿತ್ರದುರ್ಗ: ಚಿತ್ರದುರ್ಗದ ರೇಣುಕಾಸ್ವಾಮಿ ಮನೆಗೆ ನಟ ವಿನೋದ್ ರಾಜ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದು, ಬಳಿಕ 1 ಲಕ್ಷ ರೂಪಾಯಿಗಳ ಆರ್ಥಿಕ ನೆರವು ನೀಡಿದರು.

ಚಿತ್ರರಂಗದ ಕೆಲ ನಿರ್ದೇಶಕರ ಜೊತೆ ಬೆಳಗ್ಗೆ ಚಿತ್ರದುರ್ಗಕ್ಕೆ ಆಗಮಿಸಿದ ವಿನೋದ್ ರಾಜ್,  ವಿಆರ್ ಎಸ್ ಬಡಾವಣೆಯಲ್ಲಿರುವ ರೇಣುಕಾಸ್ವಾಮಿ ಮನೆಗೆ ಭೇಟಿ ನೀಡಿದರು. ಇದೇ ವೇಳೆ ಸ್ವಾಮಿ ತಂದೆ-ತಾಯಿ ಪತ್ನಿ , ಪೋಷಕರಿಗೆ ಆತ್ಮಸ್ಥೈರ್ಯ ತುಂಬಿದರು.

ರೇಣುಕಾಸ್ವಾಮಿ ಮನೆಗೆ ಭೇಟಿ ನೀಡಿದ ಬಳಿಕ ಮಾಧ್ಯಮಗಳ ಪ್ರಶ್ನೆಗೆ ುತ್ತರಿಸಿದ ವಿನೋದ್ ರಾಜ್, ರೇಣುಕಾಸ್ವಾಮಿ ಕುಟುಂಬದವರನ್ನು ಭೇಟಿ ಮಾಡಿದ್ದೇನೆ. ಮನೆಗೆ ಆಧಾರವಾಗಿದ್ದ ಮಗನ ಕಳೆದುಕೊಂಡು ನೋವಿನಲ್ಲಿದ್ದಾರೆ, ಇಂತಹ ಘಟನೆ ನಡೆದು ಹೋಗಬಾರದಿತ್ತು. ಒಂದು ಜೀವ ತೆಗೆಯಲು ಯಾರಿಗೂ ಹಕ್ಕು ಇಲ್ಲ. ಮಾನವೀಯತೆ ಎಲ್ಲಿ ಹೋಗಿದೆ ಅನ್ನೋದು ಪ್ರಶ್ನೆ, ಕಲಾವಿದರನ್ನು ನೋಡಿ ಜನ ಅನುಕರಣೆ ಮಾಡ್ತಾರೆ. ಕಲಾವಿದರು ಒಳ್ಳೆಯದನ್ನೇ ಜನರಿಗೆ ಕೊಡುವ ಕೆಲಸ ಮಾಡ್ಬೇಕು. ಕಲಾವಿದರು ಎಂಬ ಪಟ್ಟ ಕೊಟ್ಟು ಜವಾಬ್ದಾರಿ ಕೊಟ್ಟಿದ್ದಾರೆ ಜನ, ನಾವು ಏನು ಮಾಡಿದರೂ ಜನ ನೋಡ್ತಾರೆ. ನಾವು ವಿವೇಕದಿಂದ ಮಾತಾಡಬೇಕು, ಒಳ್ಳೆ ಕೆಲಸ ಮಾಡ್ಬೇಕು ಎಂದು ಹೇಳಿದರು.

ವಿನೋದ್ ರಾಜ್ ಭೇಟಿಯ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ರೇಣುಕಾಸ್ವಾಮಿ ತಂದೆ ಶಿವನಗೌಡ,  ಮಗನ ಕಳೆದುಕೊಂಡು ಕರಳು ಕಿತ್ತು ಬರುತ್ತಿದೆ. ಈ ಪ್ರಕರಣದಿಂದ ನಾವು ನೊಂದಿದ್ದೇವೆ. ನಮ್ಮ ಕುಟುಂಬ ಸಂಕಷ್ಟದಲ್ಲಿದೆ. ಮಗನ ಕೊಂದವರು ಯಾರು ಎಂಬುದು ನಮಗೆ ಗೊತ್ತಿಲ್ಲ. ಆದರೆ ಅವರಿಗೆ ತಕ್ಕ ಶಿಕ್ಷೆಯಾಗಬೇಕು. ನಟಿ ಲೀಲಾವತಿ ಅವರ ಬಗ್ಗೆ ತುಂಬಾ ಕೇಳಿದ್ದೇನೆ. ಇದೀಗ ಅವರ ಮಗ ವಿನೋದ್ ರಾಜ್ ನಮ್ಮ ಮನೆಗೆ ಭೇಟಿ ನೀಡಿದ್ದು, ಸಮಾಧಾನ ತಂದಿದೆ ಎಂದರು.

ಜುಲೈ 23ರಂದು ವಿಜಯಲಕ್ಷ್ಮೀ ಕುಟುಂಬದ ಜೊತೆ ದರ್ಶನ್‌ ರನ್ನು ಜೈಲಿನಲ್ಲಿ ವಿನೋದ್‌ ರಾಜ್ ಭೇಟಿಯಾಗಿದ್ದರು.‌ ನನ್ನ ನೋಡಿ ಭಾವುಕರಾಗಿ ದರ್ಶನ್ ಕಣ್ಣೀರು ಹಾಕಿದ್ದರು ಎಂದು ವಿನೋದ್ ರಾಜ್ ಹೇಳಿದ್ದರು.

ದರ್ಶನ್ ಒಂದು ರೀತಿಯ ನೋವಾದರೆ ಇವರ ಕುಟುಂಬದವರದ್ದು ಭಯಂಕರ ನೋವು. ಮನೆಯಲ್ಲಿನ ಕಷ್ಟಗಳನ್ನು ನೋಡಿ ಕಣ್ಣೀರು ಬಂತು ನನಗೆ ಎಂದು ಮಾತನಾಡುತ್ತಾ ಭಾವುಕರಾಗಿ ಕಣ್ಣೀರಿಟ್ಟರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ