ಕೇರಳ ಸರ್ಕಾರದ ನಿರ್ಲಕ್ಷ್ಯವೇ ನೂರಾರು ಸಾವು ನೋವುಗಳಿಗೆ ಕಾರಣ: ಅಮಿತ್ ಶಾ
ನವದೆಹಲಿ: ನಾವು ನೀಡಿದ ಎಚ್ಚರಿಕೆಯನ್ನು ಕೇರಳ ಸರ್ಕಾರ ನಿರ್ಲಕ್ಷ್ಯ ಮಾಡಿದ್ದೇ ನೂರಾರು ಸಾವು ನೋವುಗಳಿಗೆ ಕಾರಣ ಎಂದು ಕೇರಳ ಸರ್ಕಾರದ ವಿರುದ್ಧ ಗೃಹ ಸಚಿವ ಅಮಿತ್ ಶಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇರಳದ ವಯನಾಡ್ ನಲ್ಲಿ ಪರ್ವತ ಪ್ರವಾಹ ಘಟನೆಯಿಂದಾಗಿ ಇನ್ನೂರಕ್ಕೂ ಅಧಿಕ ಜನರು ಸಾವನ್ನಪ್ಪಿದ ವಿಚಾರಕ್ಕೆ ಸಂಬಂಧಿಸಿದಂತೆ ಲೋಕಸಭೆಯಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ದುರಂತದಲ್ಲಿ ಮೃತಪಟ್ಟ ಕುಟುಂಬಗಳಿಗೆ ಸಂತಾಪ ಸೂಚಿಸಿ, ಭೂಕುಸಿತದಿಂದ ನೂರಾರು ಜನ ಜೀವ ಕಳೆದುಕೊಂಡ ಕುರಿತು ಸ್ಪಷ್ಟನೆ ನೀಡಿದರು.
ಜುಲೈ 23 ರಂದು ಅಂದರೆ ಘಟನೆ ನಡೆಯುವ 7 ದಿನಗಳಿಗೂ ಮುನ್ನ ಕೇರಳ ಸರ್ಕಾರಕ್ಕೆ ಅಲರ್ಟ್ ನೀಡಲಾಗಿತ್ತು. ಆದರೆ ಸರ್ಕಾರ ಜನರನ್ನು ಬೇರೆಡೆಗೆ ಸ್ಥಳಾಂತರ ಮಾಡಿರಲಿಲ್ಲ, ಯಾಕೆ ಸ್ಥಳಾಂತರ ಮಾಡಿಲ್ಲ ಎನ್ನುವುದು ತಿಳಿದಿಲ್ಲ ಎಂದು ಅವರು ಹೇಳಿದರು.
ಜುಲೈ 26ರಂದು ಈ ಬಗ್ಗೆ ಮತ್ತೊಮ್ಮೆ ವಾರ್ನಿಂಗ್ ನೀಡಲಾಗಿತ್ತು. ಇದನ್ನೂ ಕೂಡ ಅವರು ಪರಿಗಣಿಸಲಿಲ್ಲ. ಸರ್ಕಾರದ ವಿಳಂಬ ಧೋರಣೆಯಿಂದ ದುರಂತ ಸಂಭವಿಸಿ ಹೆಚ್ಚಿನ ಸಾವು- ನೋವಿಗೆ ಕಾರಣವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಭೂಕುಸಿತದ ಮಾಹಿತಿ ತಿಳಿಯುತ್ತಿದ್ದಂತೆ ಜುಲೈ 23 ರಂದೇ 9 ಎನ್‌ಡಿಆರ್ಎಫ್ ತಂಡಗಳನ್ನು ರಕ್ಷಣೆಗಾಗಿ ಕಳಿಸಲಾಗಿದೆ. ಕೇಂದ್ರದ ರಾಜ್ಯ ಖಾತೆ ಸಚಿವರಾದ ಜಾರ್ಜ್ ಕುರಿಯನ್ ಅವರು ಘಟನಾ ಸ್ಥಳದಲ್ಲಿದ್ದಾರೆ. ಸಾಧ್ಯವಿರುವ ಎಲ್ಲಾ ನೆರವನ್ನು ಕೇಂದ್ರ ಸರ್ಕಾರ ನೀಡುತ್ತಿದೆ. ಪ್ರಧಾನಿ ಮೋದಿ ಕೂಡ ಪರಿಸ್ಥಿತಿಯನ್ನು ಮಾನಿಟರ್ ಮಾಡುತ್ತಿದ್ದಾರೆ. ಭಾರತ ಸೇನೆಯ 4 ತುಕಡಿಗಳನ್ನು ಈಗಾಗಲೇ ಕಳಿಸಲಾಗಿದೆ ಎಂದು ಅವರು ಹೇಳಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth