ಮಹಾದುರಂತದಿಂದ ಪಾರಾಗಿ ಬಂದಾಗ ಎದುರಾಗಿದ್ದು ಬೃಹತ್ ಕಾಡಾನೆ: ಬೆಳಗ್ಗಿನವರೆಗೂ ಆನೆಯ ಬಳಿ ಮಲಗಿದ ಕುಟುಂಬ
ವಯನಾಡು: ಕೇರಳದ ವಯನಾಡಿನಲ್ಲಿ ನಡೆದ ದುರಂತದಲ್ಲಿ ಮಡಿದವರ ಕಥೆ ಹೇಳಲು ಯಾರೂ ಇಲ್ಲ. ಆದರೂ ಬದುಕಿ ಬಂದವರ ಕಥೆಯಂತೂ ಒಂದಕ್ಕಿಂತ ಒಂದು ಕರುಣಾಜನಕವಾಗಿದೆ.
ಈ ಪೈಕಿ ಸುಜಾತಾ ಮಹಿಳೆಯೊಬ್ಬರು ತಾವು ಈ ದುರಂತದಿಂದ ಹೇಗೆ ತಪ್ಪಿಸಿಕೊಂಡಿರೋದು ಅಂತ ಎಳೆಎಳೆಯಾಗಿ ಬಿಡಿಸಿ ಹೇಳಿದ್ದಾರೆ. ಈ ಘಟನೆ ನಿಜಕ್ಕೂ ಅಚ್ಚರಿಯಾಗಿದೆ. ಈಗ ಸಾಮಾಜಿಕ ಜಾಲತಾಣಗಳಲ್ಲಿ ಈ ಮಹಿಳೆ ಹೇಳಿದ ಘಟನೆ ಸಾರ್ವಜನಿಕರನ್ನು ಮೂಕವಿಸ್ಮಿತಗೊಳಿಸಿದ್ದು, ಜನ ತಮಗರಿವಿಲ್ಲದೆಯೇ ಕಣ್ಣೀರಾಗುತ್ತಾರೆ.
ದುರಂತ ನಡೆದ ದಿನ ರಾತ್ರಿ 1:15ರ ವೇಳೆ ದೊಡ್ಡ ಶಬ್ದ ಕೇಳಿತು. ಇದರಿಂದಾಗಿ ನಮಗೆ ಎಚ್ಚರವಾಯಿತು. ಶಬ್ದ ಕೇಳಿಸಿದ ಬೆನ್ನಲ್ಲೇ ಮನೆಗೆ ನೀರು ಕೂಡ ನುಗ್ಗಿತು. ಎಲ್ಲರೂ ಎದ್ದು ಹಾಸಿಗೆ ಮೇಲೆ ಕುಳಿತುಕೊಂಡೆವು, ನಮ್ಮ ಮನೆಗೆ ನೀರು, ಮಣ್ಣು, ಕಲ್ಲುಗಳು ಮರಗಳು ಬಂದು ಬಡಿಯುತ್ತಿದ್ದವು. ಇದೇ ವೇಳೆ ನಮ್ಮ ಮನೆಯ ಮೇಲ್ಛಾವಣಿ ಕುಸಿದು ಬಿತ್ತು.
ಇದರಿಂದ ನನ್ನ ಮಗಳಿಗೆ ಗಂಭೀರವಾಗಿ ಗಾಯವಾಯಿತು. ಮನೆ ಉರುಳಿ ಬಿದ್ದ ವೇಳೆ ಮನೆಯ ಚಿಮಿಣಿಯಲ್ಲಿ ಸ್ವಲ್ಪ ಜಾಗ ಕಾಣಿಸಿಕೊಂಡಿತು. ಅದರ ಮೂಲಕ ಜಾಗ ಮಾಡಿಕೊಂಡು ಮಗಳು, ಮೊಮ್ಮಗಳು, ಅಳಿಯ ಎಲ್ಲರೂ ಹೊರ ಬಂದು ಬೆಟ್ಟದ ಬಳಿ ಓಡಿದೆವು. ಅಪಾಯದಿಂದ ಪಾರಾದೆವು ಅಂತ ತಿಳಿದುಕೊಳ್ಳುವ ಹೊತ್ತಿಗೆ ನಾವು ಬಂದಿದ್ದ ಸ್ಥಳದಲ್ಲಿ ದೊಡ್ಡ ಕಾಡಾನೆ ನಿಂತಿತ್ತು.
ನಮಗೆ ತುಂಬಾ ಭಯವಾಯಿತು. ನಾನು ಕಾಡಾನೆಗೆ ಹೇಳಿದೆ, ನಾವು ದೊಡ್ಡ ದುರಂತದಿಂದ ತಪ್ಪಿಸಿಕೊಂಡು ಬಂದಿದ್ದೇವೆ. ಇನ್ನು ನಮ್ಮಿಂದ ಓಡಲು ಸಾಧ್ಯವಿಲ್ಲ. ನಮಗೇನೂ ತೊಂದರೆ ಮಾಡಬೇಡ ಅಂತ ಕಣ್ಣೀರು ಹಾಕಿದೆ. ಆಗ ಆ ಆನೆ ಕಣ್ಣೀರು ಹಾಕಿತು. ರಾತ್ರಿ ಪೂರ್ತಿ ಆನೆಯ ಕಾಲಿನ ಬಳಿಯೇ ಕಾಲ ಕಳೆದೆವು. ಬೆಳಗ್ಗೆ 6 ಗಂಟೆಯಾದಾಗ ಎಲ್ಲಿಂದಲೋ ಜನರು ಬಂದರು. ನಮ್ಮನ್ನು ಕಾಪಾಡಲು ಊರಿನವರು ಯಾರೂ ಬದುಕಿರಲಿಲ್ಲ, ದೂರದ ಊರಿನಿಂದ ಬಂದವರು. ನಮ್ಮನ್ನು ಕಾಪಾಡಿ ಸುರಕ್ಷಿತ ಜಾಗಕ್ಕೆ ತಲುಪಿಸಿದರು ಎಂದು ಸುಜಾತಾ ಹೇಳಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth