ವಯನಾಡು ಭೂಕುಸಿತ –ಕೆಲವು ವೈಜ್ಞಾನಿಕ ಕಾರಣಗಳು | ನಾ ದಿವಾಕರ - Mahanayaka
7:46 PM Thursday 26 - December 2024

ವಯನಾಡು ಭೂಕುಸಿತ –ಕೆಲವು ವೈಜ್ಞಾನಿಕ ಕಾರಣಗಳು | ನಾ ದಿವಾಕರ

wayanad
06/08/2024

ಪಶ್ಚಿಮ ಘಟ್ಟಗಳು ನೈಸರ್ಗಿಕ ವಿಕೋಪಕ್ಕೆ ತುತ್ತಾದಾಗಲೆಲ್ಲಾ ವಿಜ್ಞಾನಿಗಳು, ಭೂಗರ್ಭಶಾಸ್ತ್ರಜ್ಞರು, ಇಕಾಲಜಿ ತಜ್ಞರು ಎಚ್ಚರಿಕೆ ನೀಡುವುದು ಅನಿರ್ಬಂಧಿತ ಗಣಿಗಾರಿಕೆಯ ಬಗ್ಗೆ ಮತ್ತು ವಿಶ್ವದ ಎಂಟನೆ ಅತಿ ದೊಡ್ಡ ಜೀವವೈವಿಧ್ಯ ತಾಣವಾದ ಈ ಪ್ರದೇಶದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ನಿರ್ಮಾಣ ಕಾಮಗಾರಿಗಳ ಬಗ್ಗೆ. ಈ ಎಚ್ಚರಿಕೆಯ ಮಾತುಗಳನ್ನು ಉಲ್ಲೇಖಿಸುವಾಗೆಲ್ಲಾ ರಾಜಕೀಯ ಪಕ್ಷಗಳಿಗೆ, ಸಾಮಾಜಿಕ ಕಾರ್ಯಕರ್ತರಿಗೆ ನೆನಪಾಗುವುದು ವಿಜ್ಞಾನಿ-ಇಕಾಲಜಿ ತಜ್ಞ ಮಾಧವ್‌ ಗಾಡ್ಗಿಲ್‌ ಅವರ 2011ರ ವರದಿ. 1,40,000 ಚದರ ಕಿಲೋಮೀಟರ್‌ ವ್ಯಾಪ್ತಿಯ, 1600 ಕಿಲೋಮೀಟರ್‌ ಉದ್ದದ ಪಶ್ಚಿಮ ಘಟ್ಟಗಳ ಶ್ರೇಣಿಯು ಕೇರಳ, ತಮಿಳುನಾಡು, ಕರ್ನಾಟಕ, ಗೋವಾ, ಮಹಾರಾಷ್ಟ್ರ ಮತ್ತು ಗುಜರಾತ್‌ ರಾಜ್ಯಗಳನ್ನು ಒಳಗೊಂಡಿದೆ. ನಡುವೆ 30 ಕಿಲೋಮೀಟರ್‌ ವ್ಯಾಪ್ತಿಯ ಪಾಲ್‌ಘಾಟ್‌ ಪ್ರದೇಶ ಮಾತ್ರ ಸಮತಟ್ಟು ಪ್ರದೇಶವಾಗಿದೆ. ಈ ಘಟ್ಟ ಪ್ರದೇಶದಲ್ಲಿರುವ ಪರಿಸರ ಸೂಕ್ಷ್ಮ ಪ್ರದೇಶಗಳನ್ನು (Ecologically Sensitive Areas-ESA ) ಕಾಪಾಡಲು ಕಠಿಣ ಕ್ರಮ ಕೈಗೊಳ್ಳುವಂತೆ ವಿಜ್ಞಾನಿಗಳು ದಶಕಗಳಿಂದ ಆಗ್ರಹಿಸುತ್ತಲೇ ಇದ್ದಾರೆ.

ಮಾಧವ್ ಗಾಡ್ಗಿಲ್ ಸಮಿತಿಯ ಶಿಫಾರಸುಗಳೊಂದಿಗೇ ಪ್ರಸ್ತಾಪವಾಗುವ ಮತ್ತೊಂದು ವರದಿ ಎಂದರೆ ಕೆ. ಕಸ್ತೂರಿ ರಂಗನ್‌ ಅವರ 2013ರ ವರದಿ. 2011ರ ಗಾಡ್ಗಿಲ್‌ ವರದಿಯನ್ನು ತಿರಸ್ಕರಿಸಿದ ಕೇಂದ್ರ-ರಾಜ್ಯ ಸರ್ಕಾರಗಳು ಕಸ್ತೂರಿ ರಂಗನ್‌ ವರದಿಯ ಮೂಲಕ ಪರಿಸರ ಕಾಳಜಿ ಮತ್ತು ಅಭಿವೃದ್ಧಿ ಪ್ರಯೋಗಗಳ ಸಮತೋಲನ ಸಾಧಿಸಲು ಯತ್ನಿಸಿದ್ದನ್ನೂ ಗಮನಿಸಬೇಕಿದೆ. ವಿಡಂಬನೆ ಎಂದರೆ 2018ರಲ್ಲಿ ಕೇರಳದಲ್ಲಿ ಸಂಭವಿಸಿದ ಪ್ರವಾಹಗಳಂತೆಯೇ ಈಗ ಸಂಭವಿಸಿರುವ ದುರಂತಕ್ಕೂ ಕಾರಣ ಗಾಡ್ಗಿಲ್‌ ವರದಿಯನ್ನು ನಿರ್ಲಕ್ಷಿಸಿರುವುದೇ ಆಗಿದೆ. ಕೇರಳದ ಉತ್ತರ ಭಾಗದಲ್ಲಿ ಸಂಭವಿಸಿರುವ ನೈಸರ್ಗಿಕ ವಿಕೋಪದ ಹಾನಿಯನ್ನು ನಿಷ್ಕೃಷ್ಟವಾಗಿ ಮಾಪನ ಮಾಡಲು ಇನ್ನೂ ಕೆಲಕಾಲ ಬೇಕಾಗುತ್ತದೆ. ಆದರೆ ಗಾಡ್ಗಿಲ್‌ ವರದಿಯಲ್ಲಿ ಸೂಚಿಸಿದ ಅತಿಸೂಕ್ಷ್ಮ ಪ್ರದೇಶಗಳನ್ನು ಅಧಿಸೂಚನೆಯ ಮೂಲಕ ಗುರುತಿಸುವಲ್ಲಿ ಸರ್ಕಾರಗಳ ವೈಫಲ್ಯ ಕಣ್ಣಮುಂದೆಯೇ ಇದೆ. ರಾಜಕೀಯ ಇಚ್ಛಾಶಕ್ತಿಯ ಕೊರತೆ ಮತ್ತು ಅಭಿವೃದ್ಧಿ ಮಾದರಿಯ ಭಾಗಿದಾರರ ಹಿತಾಸಕ್ತಿಗಳೇ ಈ ದುರಂತಗಳಿಗೆ ಕಾರಣ ಎನ್ನುವುದಂತೂ ಸ್ಪಷ್ಟ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ಸಿಬ್ಬಂದಿ ಹಗಲುರಾತ್ರಿ ಶ್ರಮಪಡುತ್ತಿದ್ದು ದುರಂತಕ್ಕೀಡಾದ ಜನರನ್ನು ರಕ್ಷಿಸುತ್ತಿರುವುದು ಪ್ರಶಂಸಾರ್ಹ. ನಾಲ್ಕಾರು ಗ್ರಾಮಗಳೇ ನೆಲಸಮವಾಗಿರುವ ಈ ಪ್ರದೇಶದಲ್ಲಿ ದೊರೆಯುತ್ತಿರುವ ಶವಗಳು , ರುಂಡ-ಮುಂಡ ಬೇರ್ಪಟ್ಟ ಮೃತದೇಹಗಳು ದುರಂತದ ಭೀಕರತೆಗೆ ಸಾಕ್ಷಿಯಾಗಿದೆ. ಆದರೆ 1980ರಿಂದಲೇ ಪಶ್ಚಿಮ ಘಟ್ಟ ಶ್ರೇಣಿಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ವಿಜ್ಞಾನಿಗಳಿಗಾಗಲೀ, ಇಕಾಲಜಿ ತಜ್ಞರಿಗಾಗಲೀ ಈ ದುರಂತವು ಕೇವಲ ನೈಸರ್ಗಿಕ ವಿಕೋಪದ ಪರಿಣಾಮ ಎನಿಸುವುದಿಲ್ಲ. ಬದಲಾಗಿ ಈ ಭೀಕರ ದುರಂತಗಳು ಸಂಭವಿಸುವುದನ್ನು ಈ ಪರಿಸರತಜ್ಞರು ನಿರೀಕ್ಷಿಸುತ್ತಲೇ ಇರುತ್ತಾರೆ. ಏಕೆಂದರೆ ನೈಸರ್ಗಿಕ ವಿಕೋಪಗಳು ವಾಸ್ತವಿಕವಾಗಿ ನೈಸರ್ಗಿಕ ಅಲ್ಲ, ಬದಲಾಗಿ ಇವು ಮಾನವ ನಿರ್ಮಿತ ದುರಂತಗಳು ಎಂದು ವಿಜ್ಞಾನಿಗಳು ಹೇಳುತ್ತಲೇ ಇದ್ದಾರೆ.

ಪಶ್ಚಿಮ ಘಟ್ಟಗಳ ಜೀವವೈವಿಧ್ಯತೆ

ಸರ್ಕಾರಗಳು ಕಸ್ತೂರಿ ರಂಗನ್‌ ವರದಿಯಲ್ಲಿ ಶಿಫಾರಸು ಮಾಡಿರುವಂತೆ ಪಶ್ಚಿಮ ಘಟ್ಟಗಳ 60 ಸಾವಿರ ಚದರ ಕಿಲೋಮೀಟರ್‌ ಪ್ರದೇಶವನ್ನು ಮಾತ್ರ ಪರಿಸರ ಸೂಕ್ಷ್ಮ ಎಂದು ಪರಿಗಣಿಸುವ ಬದಲು, ಮಾಧವ ಗಾಡ್ಗಿಲ್‌ ವರದಿಯಲ್ಲಿ ಹೇಳಿರುವಂತೆ ಇಡೀ ಘಟ್ಟ ಶ್ರೇಣಿಯನ್ನು ಸೂಕ್ಷ್ಮ ಪ್ರದೇಶ ಎಂದು ಅಧಿಸೂಚನೆ ಹೊರಡಿಸಬೇಕಿದೆ ಎನ್ನುತ್ತಾರೆ ಕೇರಳದ ಪರಿಸರ ಕಾರ್ಯಕರ್ತ ಅಮೀರ್‌ ಶಾಹುಲ್.‌ ಈ ದುರ್ಬಲ-ಸೂಕ್ಷ್ಮ ವಲಯಗಳಲ್ಲಿ ಗಣಿಗಾರಿಕೆಯ ಕಾಮಗಾರಿಗಳನ್ನು 2016ರ ವೇಳೆಗೇ ಕೊನೆಗೊಳಿಸಬೇಕು ಎಂಬ ಗಾಡ್ಗಿಲ್‌ ವರದಿಯ ಶಿಫಾರಸುಗಳನ್ನು ನಿರ್ಲಕ್ಷಿಸಿರುವುದೇ ಇತ್ತೀಚಿನ ಭೀಕರ ದುರಂತಕ್ಕೆ ಕಾರಣ ಎಂದು ಶಾಹುಲ್‌ ಹೇಳುತ್ತಾರೆ. ರಾಜ್ಯ ಸರ್ಕಾರವು ಸ್ಥಳೀಯ ಸಂಸ್ಥೆಗಳ ಸಮನ್ವಯದೊಂದಿಗೆ, 45 ಡಿಗ್ರಿ ಅಥವಾ ಅದಕ್ಕಿಂತ ಹೆಚ್ಚಿನ ಏರಿಳಿತಗಳನ್ನು ಹೊಂದಿರುವ ಇಳಿಜಾರುಗಳಲ್ಲಿ ನಿರ್ಮಾಣ ಚಟುವಟಿಕೆಗಳ ಮೇಲೆ ಕಟ್ಟುನಿಟ್ಟಿನ ನಿಷೇಧವನ್ನು ಜಾರಿಗೊಳಿಸಬೇಕು ಮತ್ತು ಭೂಕುಸಿತ ಪೀಡಿತ ಪ್ರದೇಶಗಳಿಂದ ಮಾನವ ವಸಾಹತುಗಳನ್ನು ಸಂಪೂರ್ಣವಾಗಿ ಸ್ಥಳಾಂತರಿಸುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಶಾಹುಲ್‌ ಆಗ್ರಹಿಸುತ್ತಾರೆ.

ಪಶ್ಚಿಮ ಘಟ್ಟಗಳ ಶ್ರೇಣಿಯು ಭವಿಷ್ಯಕ್ಕಾಗಿ ಕಾಪಾಡಲೇಬೇಕಾದ ಅಮೂಲ್ಯ ಭಂಡಾರ ಎಂದು ಯುನೆಸ್ಕೋ ತನ್ನ ವರದಿಯೊಂದರಲ್ಲಿ ಹೇಳಿದೆ. “ಪಶ್ಚಿಮ ಘಟ್ಟಗಳ ಒಂದು ಗಮನಾರ್ಹ ಲಕ್ಷಣವೆಂದರೆ ಅಸಾಧಾರಣವಾದ ಉನ್ನತ ಮಟ್ಟದ ಜೈವಿಕ ವೈವಿಧ್ಯತೆ ಮತ್ತು ಅಂತರ್ಗತತೆಯಾಗಿದೆ. ಪಶ್ಚಿಮ ಘಟ್ಟಗಳ ಕಾಡುಗಳು ವಿಶ್ವದ ಸಮಭಾಜಕವಲ್ಲದ ಉಷ್ಣವಲಯದ ನಿತ್ಯಹರಿದ್ವರ್ಣ ಕಾಡುಗಳ ಕೆಲವು ಅತ್ಯುತ್ತಮ ಪ್ರದೇಶಗಳನ್ನು ಒಳಗೊಂಡಿವೆ. ಜಾಗತಿಕವಾಗಿ ಅಳಿವಿನಂಚಿನಲ್ಲಿರುವ ಕನಿಷ್ಠ 325 ಪ್ರಭೇದಗಳು ಪಶ್ಚಿಮ ಘಟ್ಟಗಳಲ್ಲಿ ವಾಸಿಸುತ್ತಿವೆ. ಪಶ್ಚಿಮ ಘಟ್ಟಗಳಲ್ಲಿ ಜಾಗತಿಕವಾಗಿ ಅಳಿವಿನಂಚಿನಲ್ಲಿರುವ 229 ಸಸ್ಯ ಪ್ರಭೇದಗಳು, 31 ಸಸ್ತನಿ ಪ್ರಭೇದಗಳು, 15 ಪಕ್ಷಿ ಪ್ರಭೇದಗಳು, 43 ಉಭಯಚರ ಪ್ರಭೇದಗಳು, 5 ಸರೀಸೃಪ ಜಾತಿಗಳು ಮತ್ತು 1 ಮೀನು ಪ್ರಭೇದಗಳನ್ನು ಗುರುತಿಸಲಾಗಿದೆ. ಪಶ್ಚಿಮ ಘಟ್ಟಗಳಲ್ಲಿ ಈ ಒಟ್ಟು 325 ಪ್ರಭೇದಗಳಲ್ಲಿ 129 ದುರ್ಬಲ, 145 ಅಳಿವಿನಂಚಿನಲ್ಲಿರುವ ಮತ್ತು 51 ಗಂಭೀರ ಅಳಿವಿನಂಚಿನಲ್ಲಿರುವ ಪ್ರಭೇದಗಳು ಎಂದು ವರ್ಗೀಕರಿಸಲಾಗಿದೆ ” ಎಂದು ಯುನೆಸ್ಕೋ ವರದಿಯಲ್ಲಿ ಹೇಳಲಾಗಿದೆ.

ಇಂತಹ ಜೀವ ವೈವಿಧ್ಯತೆಯ ನೈಸರ್ಗಿಕ ತಾಣವನ್ನು ಕಾಪಾಡುವ ನಿಟ್ಟಿನಲ್ಲಿ ಸರ್ಕಾರಗಳು ಮತ್ತು ಆಡಳಿತ ವ್ಯವಸ್ಥೆಯು ಕಟ್ಟೆಚ್ಚರ ವಹಿಸುವುದೇ ಅಲ್ಲದೆ, ಹವಾಮಾನ ಬದಲಾವಣೆಯಿಂದ ಉಂಟಾಗುವ ವೈಪರೀತ್ಯಗಳನ್ನು ಎದುರಿಸಲೂ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಹೇಳುವ ಪರಿಸರ ವಿಜ್ಞಾನಿಗಳು, ಸರ್ಕಾರಗಳ ಸಂಕುಚಿತ ದೃಷ್ಟಿಕೋನವೇ ಇಂತಹ ನೈಸರ್ಗಿಕ ವಿಕೋಪಗಳಿಗೆ ಕಾರಣ ಎಂದು ಹೇಳುತ್ತಾರೆ. ಸರ್ಕಾರಗಳು ತಮ್ಮ ಅಭಿವೃದ್ಧಿಯ ಆದ್ಯತೆಗಳನ್ನು ಬದಿಗೊತ್ತಿ ವಿಜ್ಞಾನಿಗಳ ಮಾತಿಗೆ ಕಿವಿಗೊಡಲು ಇನ್ನಾದರೂ ಮುಂದಾಗಬೇಕಿದೆ. ಇಂತಹ ಸೂಕ್ಷ್ಮ-ದುರ್ಬಲ ಘಟ್ಟ ಶ್ರೇಣಿಗಳಲ್ಲಿ ಹವಾಮಾನ ಬದಲಾವಣೆಯನ್ನು ತಡೆದುಕೊಳ್ಳುವಂತಹ ಮೂಲ ಸೌಕರ್ಯಗಳ ನಿರ್ಮಾಣವನ್ನು ಕೈಗೊಳ್ಳಬೇಕಾಗಿದೆ. ಇಲ್ಲವಾದರೆ ಈ ರೀತಿಯ ಭೀಕರ ದುರಂತಗಳು ಸಂಭವಿಸುತ್ತಲೇ ಇರುತ್ತವೆ, ಜೀವ ಹಾನಿ ಆಗುತ್ತಲೇ ಇರುತ್ತದೆ ಎಂದು ಪರಿಸರ ವಿಜ್ಞಾನಿಗಳು ಎಚ್ಚರಿಸುತ್ತಾರೆ. ವಯನಾಡ್‌ನಲ್ಲಿ ನಡೆದಿರುವಂತಹ ನೈಸರ್ಗಿಕ ವಿಕೋಪ ಸಂಪೂರ್ಣವಾಗಿ ನೈಸರ್ಗಿಕವೇ ಆಗಿರುವುದಿಲ್ಲ ಅದು ಮಾನವ ನಿರ್ಮಿತವೂ ಆಗಿದೆ ಎನ್ನುವುದಕ್ಕೆ ಹೆಚ್ಚಿನ ವೈಜ್ಞಾನಿಕ ಪುರಾವೆಗಳೇ ಬೇಕಿಲ್ಲ ಎಂದು ವಿಜ್ಞಾನಿಗಳು ಹೇಳುತ್ತಾರೆ.

ದುರಂತದ ಪ್ರಮುಖ ಕಾರಣಗಳೇನು ?

ವಯನಾಡು ದುರಂತಕ್ಕೆ ಎರಡು ಪ್ರಮುಖ ಕಾರಣಗಳನ್ನು ಗುರುತಿಸುವ ಲೇಖಕ ಬಿ. ವಿಜು ಇದನ್ನು ಈವರೆಗೆ ಸಂಭವಿಸಿರುವ ದುರಂತಗಳಲ್ಲಿ ಅತ್ಯಂತ ಭೀಕರವಾದುದು ಎಂದು ಹೇಳುತ್ತಾರೆ ವಿಜು ಅವರ ಅಭಿಪ್ರಾಯದಲ್ಲಿ ಇತ್ತೀಚಿನ ವಿಕೋಪಕ್ಕೆ ಮೊದಲ ಕಾರಣ ವಯನಾಡು ಮತ್ತು ಇಡುಕ್ಕಿ ಪ್ರದೇಶದಲ್ಲಿ ಅತಿಯಾದ ಮಳೆಯಾಗಿರುವುದು. ಇದಕ್ಕೆ ಹವಾಮಾನ ಬದಲಾವಣೆಯೂ ಒಂದು ಕಾರಣವಾಗಿದೆ. ಎರಡನೆಯದಾಗಿ ಅನಿರ್ಬಂಧಿತ ಅಭಿವೃದ್ಧಿ ಕಾಮಗಾರಿಗಳು. ಕುತೂಹಲಕಾರಿ ಅಂಶವೆಂದರೆ ರಾಜ್ಯ ಸರ್ಕಾರವು ಈಗ ಭೂಕುಸಿತ ಸಂಭವಿಸಿರುವ ಪ್ರದೇಶಕ್ಕೆ ಸಮೀಪದಲ್ಲೇ ಸುರಂಗ ನಿರ್ಮಾಣಕ್ಕಾಗಿ 2000 ಕೋಟಿ ರೂಗಳ ಯೋಜನೆಗೆ ಅನುಮೋದನೆ ನೀಡಿದೆ. ಈ ಬೃಹತ್‌ ಯೋಜನೆಗಳನ್ನು ಮರುಪರಿಷ್ಕರಣೆ ಮಾಡುವುದೇ ಅಲ್ಲದೆ ದುರಂತಕ್ಕೀಡಾಗುವ ಸಂಭವ ಇರುವ ಪ್ರದೇಶಗಳಲ್ಲಿರುವ ಜನರ ಸೂಕ್ತ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಬೇಕಿದೆ ಎಂದು ವಿಜು ಹೇಳುತ್ತಾರೆ. 2019ರಲ್ಲಿ ಪತ್ತನಂತಿಟ್ಟ ಜಿಲ್ಲೆಯಲ್ಲಿ ಭೂಕುಸಿತ ಸಂಭವಿಸಿದ ನಂತರ ತಜ್ಞರ ಸಮಿತಿಯೊಂದು ಅಲ್ಲಿದ್ದ 4000 ಮನೆಗಳನ್ನು ಸ್ಥಳಾಂತರಗೊಳಿಸಲು ಶಿಫಾರಸು ಮಾಡಿತ್ತು. ಇದನ್ನು ಪೂರೈಸಿದ್ದಲ್ಲಿ ಈ ಬಾರಿಯ ಜೀವ ಹಾನಿ ಕಡಿಮೆಯಾಗುತ್ತಿತ್ತು ಎಂದು ವಿಷಾದದಿಂದ ಹೇಳುತ್ತಾರೆ ಲೇಖಕ ಬಿ. ವಿಜು.

ಜುಲೈ 30 ರಂದು ವಯನಾಡಿನ ವೆಲ್ಲರಿಮಾಲಾದಲ್ಲಿ ಭೂ ಕುಸಿತ ಸಂಭವಿಸಿದ ಬೆನ್ನಲ್ಲೇ ಕುಸಿದ ಗುಡ್ಡಗಳು, ಕಲ್ಲು ಬಂಡೆಗಳು ಹಾಗೂ ಅಪಾರ ಪ್ರಮಾಣದ ಮಣ್ಣು ವಿನಾಶಕಾರಿಯಾಗಿ ಹರಿಯಲಾರಂಭಿಸಿದ್ದು ಇನ್ನೂ ಹೆಚ್ಚಿನ ಹಾನಿಗೆ ಕಾರಣವಾಗಿದ್ದು ಮುಂಡಕ್ಕೈ ಮತ್ತು ಚೂರಲ್‌ಮಲಾ ಗ್ರಾಮಗಳು ಸಂಪೂರ್ಣವಾಗಿ ನೆಲಸಮವಾಗಿವೆ. ಈ ಕುರಿತು ಪ್ರತಿಕ್ರಿಯಿಸಿದ ಪರಿಸರ ತಜ್ಞ ಡಾ. ಕೆ. ಸೋಮನ್‌ “ ನೀರಿಗೂ ನೆನಪುಗಳಿರುತ್ತವೆ, ಒಂದು ಕಾಲದಲ್ಲಿ ತಾನು ಹರಿದು ಹೋಗಿದ್ದ ಹಾದಿಯನ್ನು ನೆನಪಿಟ್ಟುಕೊಳ್ಳುತ್ತದೆ ” ಎಂದು ಹೇಳುತ್ತಾರೆ. ಭೂವಿಜ್ಞಾನ ಅಧ್ಯಯನದ ರಾಷ್ಟ್ರೀಯ ಕೇಂದ್ರದ ಸಂಪನ್ಮೂಲ ವಿಶ್ಲೇಷಣೆ ವಿಭಾಗದ ಮುಖ್ಯಸ್ಥರಾಗಿರುವ ನಿವೃತ ವಿಜ್ಞಾನಿ ಕೆ. ಸೋಮನ್‌ ಇತ್ತೀಚಿನ ಭೂಕುಸಿತದ ಹಿಂದಿನ ಭೂಕುಸಿತಕ್ಕೆ ಕಾರಣವಾದ ಭೌಗೋಳಿಕ ಅಂಶಗಳು ಮತ್ತು ಅದರ ಪರಿಣಾಮವನ್ನು ಉಲ್ಬಣಗೊಳಿಸಿದ ಭೂ ಬಳಕೆಯ ಮಾದರಿಗಳನ್ನು ವಿವರಿಸುತ್ತಾರೆ.

ಭೂಕುಸಿತದ ಸಂದರ್ಭದಲ್ಲಿ ಹಲವಾರು ಅಂಶಗಳನ್ನು ಪರಿಗಣಿಸಬೇಕಾಗುತ್ತದೆ. ಭೂಮಿಯ ಇಳಿಜಾರು, ಮಣ್ಣಿನ ಗಾತ್ರ , ಮಣ್ಣು ಮತ್ತು ಬಂಡೆಗಳ ಸ್ವಭಾವ ಮತ್ತು ಮಳೆಯ ಪ್ರಮಾಣ ಇವೆಲ್ಲವೂ ಪಾತ್ರವಹಿಸುತ್ತವೆ ಎಂದು ಹೇಳುವ ಶ್ರೀಯುತ ಸೋಮನ್‌, ಮಣ್ಣಿನ ಸ್ವಭಾವ ಮತ್ತು ಬಂಡೆಗಳ ರಚನೆಗಳಲ್ಲಿನ ವ್ಯತ್ಯಾಸಗಳು ಭೂಕುಸಿತಕ್ಕೆ ಕಾರಣವಾಗುವ ಅಂಶಗಳು ವಿಭಿನ್ನ ಸ್ಥಳಗಳಲ್ಲಿ ವಿಭಿನ್ನವಾಗಿ ಕಂಡುಬರುತ್ತವೆ ಎಂದು ಹೇಳುತ್ತಾರೆ. “ ಮಣ್ಣಿನ ಕೊಳವೆಗಳು (ಮೇಲ್ಮೈ ಮಣ್ಣಿನ ಸವೆತದಿಂದಾಗಿ ಭೂಗತ ಸುರಂಗಗಳ ರಚನೆ) ಭೂಕುಸಿತಕ್ಕೆ ಕಾರಣವಾಗುವ ಪ್ರಧಾನ ಅಂಶಗಳಲ್ಲೊಂದು ಎಂದು ಹೇಳಲಾಗುತ್ತದೆ. ಆದರೆ ಇದು ಹಿಮಾಲಯದಂತಹ Alkaline ಮಣ್ಣು ಇರುವ ಸ್ಥಳಗಳಲ್ಲಿ ಅನ್ವಯಿಸುತ್ತದೆ, Acidic ಮಣ್ಣನ್ನು ಹೊಂದಿರುವ ಕೇರಳದಲ್ಲಿ ಅಲ್ಲ̤ ಬದಲಾಗಿ, ವಯನಾಡಿನ ಭೂಕುಸಿತಕ್ಕೆ ಪಶ್ಚಿಮ ಘಟ್ಟಗಳ ಉದ್ದಕ್ಕೂ ಶಿಲೆಗಳು-ಬಂಡೆಗಳು ಮುರಿದಿರುವುದು ಕಾರಣ ಎನ್ನಬಹುದು ಎಂದು ಸೋಮನ್‌ ಹೇಳುತ್ತಾರೆ.

ಭೂವೈಜ್ಞಾನಿಕ ಪರಿಣಾಮಗಳು

ಶಿಲೆಗಳ ಮುರಿತ ಅಥವಾ ಒಡೆಯುವಿಕೆಯು ನೈಸರ್ಗಿಕ ಭೂವೈಜ್ಞಾನಿಕ ವಿದ್ಯಮಾನವಾಗಿದ್ದು ಈ ಪ್ರಕ್ರಿಯೆಯ ಮೂಲಕ ಅವುಗಳು ಕೀಲುಗಳು ಅಥವಾ ಸಂದುಗಳಾಗಿ ಎರಡು ಅಥವಾ ಹೆಚ್ಚು ತುಂಡುಗಳಾಗಿ ವಿಂಗಡಿಸಲ್ಪಡುತ್ತದೆ. “ವೆಲ್ಲಾರಿಮಾಲಾದ ಸ್ಥಳ ವಿನ್ಯಾಸವನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ, ಭೂಕುಸಿತವು ಎತ್ತರದ ಎರಡು ಪ್ರದೇಶಗಳ ನಡುವಿನ ಅತಿ ಕೆಳಗಿನ ಬಿಂದುವಿನಿಂದ ಹುಟ್ಟಿಕೊಂಡಿದೆ ಎಂದು ಹೇಳಬಹುದು. ಇದನ್ನು Saddle ಅಥವಾ ಭೂತೊಟ್ಟಿಲು ಎನ್ನಲಾಗುತ್ತದೆ. ಇವುಗಳು ಒಡೆಯುವಿಕೆಯಿಂದ ಅಥವಾ ಸವೆತದಿಂದ ಉಂಟಾಗುತ್ತವೆ. ಸವೆತದಿಂದ ರೂಪುಗೊಂಡ ಸ್ಯಾಡಲ್‌ಗಳು ಸಾಮಾನ್ಯವಾಗಿ ಸುಣ್ಣದ ಕಲ್ಲುಗಳಲ್ಲಿ ಕಂಡುಬರುತ್ತವೆ, ಇದು ಈ ಸ್ಥಳದಲ್ಲಿ ಹಾಗಿಲ್ಲ. ವೆಲ್ಲಾರಿಮಾಲಾದಲ್ಲಿ ಸಂಭವಿಸಿದ ಭೂಕಂಪವು ಮುರಿತದಿಂದ ಅಥವಾ ಒಡೆಯುವಿಕೆಯಿಂದ ಸಂಭವಿಸಿದೆ ” ಎಂದು ಸೋಮನ್ ಹೇಳುತ್ತಾರೆ. ಸೋಮನ್‌ ಅವರ ಅಭಿಪ್ರಾಯದಲ್ಲಲಿ ಮುರಿದ ಬಂಡೆಗಳ ಸಂದುಗಳಲ್ಲಿ ನೀರು ಸಂಗ್ರಹವಾಗುತ್ತದೆ. ಮಣ್ಣು ತನ್ನ ಪೂರ್ಣ ಧಾರಣೆಯ ಸಾಮರ್ಥ್ಯದ ಮಟ್ಟವನ್ನು ತಲುಪಿದಾಗ ಅಲ್ಲಿ ನೀರು ಸ್ಫೋಟವಾಗುತ್ತದೆ. ಆಗ ತನ್ನೊಂದಿಗೇ ನೀರು ಮಣ್ಣು, ಬಂಡೆಗಳು, ಸಸ್ಯ-ವೃಕ್ಷಗಳನ್ನೂ ಸೆಳೆದುಕೊಂಡು ಮುನ್ನಡೆಯುತ್ತದೆ. ಮಳೆಯ ಪ್ರಮಾಣ ಅತಿಯಾದಾಗ ಅಲ್ಪ ಸಮಯದಲ್ಲೇ ಅತಿ ಹೆಚ್ಚು ನೀರು ಸಂಗ್ರಹವಾಗಿರುವ ಸಾಧ್ಯತೆಗಳಿವೆ, ಹಾಗಾಗಿ ವೆಲ್ಲಾರಿಮಾಲಾ ಭೂಕುಸಿತದಲ್ಲಿ ಈ ನೈಸರ್ಗಿಕ ಪ್ರಕ್ರಿಯೆಯನ್ನೂ ಗಮನಿಸಬೇಕಿದೆ ಎನ್ನುತ್ತಾರೆ.

ಇದಲ್ಲದೆ, ಭೂಕುಸಿತದ ಉಗಮ ಸ್ಥಾನವಾದ ವೆಲ್ಲಾರಿಮಾಲಾ ಮತ್ತು ಅದು ನಾಶಪಡಿಸಿದ ಪಟ್ಟಣಗಳ ನಡುವಿನ ಎತ್ತರದಲ್ಲಿನ ವ್ಯತ್ಯಾಸವು ಅವಶೇಷಗಳ ಹರಿವಿನ ಪರಿಣಾಮವನ್ನು ಹೆಚ್ಚಿಸಿದೆ ಎಂದು ಹೇಳುವ ಕೆ. ಸೋಮನ್‌, ವೆಲ್ಲಾರಿಮಾಲಾ ಸಮುದ್ರ ಮಟ್ಟದಿಂದ ಸುಮಾರು 2,000 ಮೀಟರ್ ಎತ್ತರದಲ್ಲಿದ್ದರೆ, ಮುಂಡಕ್ಕೈ ಮತ್ತು ಚೂರಲ್‌ಮಲಾ ಸರಾಸರಿ ಸಮುದ್ರ ಮಟ್ಟದಿಂದ 900-1,000 ಮೀಟರ್ ಎತ್ತರದಲ್ಲಿದೆ. ಅಂದರೆ ಸುಮಾರು 1,000 ಮೀಟರ್‌ಗಳಷ್ಟು ಕುಸಿತವು ಕೆಲವೇ ಕಿಲೋಮೀಟರ್‌ಗಳ ಬಹಳ ಕಡಿಮೆ ಅಂತರದಲ್ಲಿ ಸಂಭವಿಸಿದೆ. ಇದರರ್ಥ ಭೂಕುಸಿತದ ಅವಶೇಷಗಳು ಮುಂಡಕ್ಕೈ ಮತ್ತು ಚೂರಲ್‌ಮಲಾದ ಮೇಲೆ ಒಂದು ಹಂತದಲ್ಲಿ ಭಾರಿ ಶಕ್ತಿಯಿಂದ ಇಳಿದಿರುವುದರಿಂದ ಅದರ ಹಾದಿಯಲ್ಲಿ ಸಿಕ್ಕ ಎಲ್ಲವನ್ನೂ ಕೊಚ್ಚಿಕೊಂಡು ಹೋಗಿದೆ ಎಂದು ಹೇಳುತ್ತಾರೆ. ಜುಲೈ 16 ರಂದು ಕರ್ನಾಟಕದ ಶಿರೂರಿನಲ್ಲಿ ಸಂಭವಿಸಿದ ಭೂಕುಸಿತದಿಂದ ವಯನಾಡ್ ಭೂಕುಸಿತವನ್ನು ಪ್ರತ್ಯೇಕಿಸಿಯೇ ನೋಡುವ ಸೋಮನ್‌ ಅವರು “ಶಿರೂರು ಭೂಕುಸಿತವು ಮಾನವ ಚಟುವಟಿಕೆಯಿಂದ ಮಾತ್ರ ಸಂಭವಿಸಿದೆ. ಹೆದ್ದಾರಿಯ ಅವೈಜ್ಞಾನಿಕ ನಿರ್ಮಾಣವೇ ಇದಕ್ಕೆ ಕಾರಣ” ಎಂದು ಖಚಿತವಾಗಿ ಹೇಳುತ್ತಾರೆ.

ಅದೇ ವೇಳೆ ಮುಂಡಕ್ಕೈ ಮತ್ತು ಚೂರಲ್‌ಮಲಾದಲ್ಲಿ ಸಂಭವಿಸಿದ ದೊಡ್ಡ ಪ್ರಮಾಣದ ವಿನಾಶಕ್ಕೆ ಮಿತಿಮೀರಿದ ಮಾನವ ಚಟುವಟಿಕೆ ಕಾರಣ ಎಂದು ಸೋಮನ್ ಆರೋಪಿಸುತ್ತಾರೆ. ವಯನಾಡ್ ದುರಂತದ ಪ್ರಮಾಣವು ಪೀಡಿತ ಪ್ರದೇಶಗಳಲ್ಲಿನ ಅವೈಜ್ಞಾನಿಕ ಭೂ ಬಳಕೆಯ ಮಾದರಿಗಳ ನೇರ ಪರಿಣಾಮವಾಗಿದೆ ಎಂದು ಹೇಳುವ ಸೋಮನ್‌ ದುರಂತದಲ್ಲಿ ಚಹಾ ತೋಟಗಳ ವಹಿಸುವ ಪಾತ್ರವನ್ನು ಉಲ್ಲೇಖಿಸುತ್ತಾರೆ. “ಬ್ರಿಟಿಷರು ಎತ್ತರದ ಪ್ರದೇಶಗಳಲ್ಲಿ ಚಹಾ ತೋಟಗಳನ್ನು ಸ್ಥಾಪಿಸಿದಾಗ, ಅವರು ನೀರು ಕೆಳಕ್ಕೆ ಹರಿಯುವ ಸಣ್ಣ ಗಲ್ಲಿಗಳನ್ನು ಸಮತಟ್ಟುಗೊಳಿಸಿದರು ಮತ್ತು ತಮ್ಮ ಕಾರ್ಮಿಕರನ್ನು ನದಿಯ ಟೆರೇಸ್‌ಗಳ ಉದ್ದಕ್ಕೂ, ಅಂದರೆ ನದಿಯಿಂದ ಸಂಗ್ರಹವಾದ ಕೆಸರುಗಳಿಂದ ರೂಪುಗೊಂಡ ಸಮತಟ್ಟಾದ ಮೇಲ್ಮೈಗಳ ಉದ್ದಕ್ಕೂ, ನೆಲೆಸಿದರು. ನಂತರ, ಈ ಪ್ರದೇಶಗಳಲ್ಲಿ ಪಟ್ಟಣಗಳು ಅಭಿವೃದ್ಧಿ ಹೊಂದಿದವು.” ಎಂದು ಹೇಳುತ್ತಾರೆ. ಮುಂಡಕ್ಕೈನ ವೆಲ್ಲಾರಿಮಾಲಾ ಮತ್ತು ಚೂರಲ್‌ಮಲಾದಿಂದ ಕೆಳಭಾಗದಲ್ಲಿ ಹೆಚ್ಚಿನ ನಷ್ಟ ಸಂಭವಿಸಿದೆ. ಎರಡೂ ಸ್ಥಳಗಳಲ್ಲಿ ಮನೆಗಳು ಮತ್ತು ಕಟ್ಟಡಗಳು ನದಿಯ ಟೆರೇಸ್‌ನಲ್ಲಿದ್ದವು. ನೆಲಸಮವಾಗಿರುವ ವೆಲ್ಲರ್‌ಮಾಲಾದ GVHSS ಶಾಲಾ ಕಟ್ಟಡವೂ ಸಹ ನದಿಯ ಹರಿವಿನ ತಿರುವಿನಿಂದ ರೂಪುಗೊಂಡ ಅಂತಹ ಒಂದು ನದಿಯ ಟೆರೇಸ್‌ನಲ್ಲಿ ನಿಂತಿತ್ತು ಎನ್ನುತ್ತಾರೆ. ನದಿಗಳು ಕಾಲಕಾಲಕ್ಕೆ ಹರಿವಿನ ದಿಕ್ಕು ಬದಲಿಸಿದರೂ ಸಹ ಶತಮಾನಗಳ ನಂತರ ಮತ್ತೆ ಅದೇ ಹಾದಿಯನ್ನು ಕ್ರಮಿಸುವ ಸಾಧ್ಯತೆಗಳಿರುತ್ತವೆ. ಹಾಗಾಗಿ ಆ ಬತ್ತಿದ ಪ್ರದೇಶವನ್ನು ಆಕ್ರಮಿಸುವುದು ಅಪಾಯಕಾರಿಯಾಗುವ ಸಾಧ್ಯತೆಗಳಿವೆ ಎನ್ನುತ್ತಾರೆ ಸೋಮನ್.

ಚೂರಲ್‌ಮಲಾ ಮತ್ತು ಮುಂಡಕ್ಕೈ ಮಾನವ ವಾಸಕ್ಕೆ ಸೂಕ್ತವಲ್ಲ ಎಂಬುದಕ್ಕೆ ಸೋಮನ್ ಮತ್ತೊಂದು ಕಾರಣವನ್ನು ತೋರಿಸುತ್ತಾರೆ. ಈ ಪ್ರದೇಶವು 1984 ಮತ್ತು 2020 ರಲ್ಲಿ ಕಡಿಮೆ ತೀವ್ರತೆಯ ಭೂಕುಸಿತವನ್ನು ಅನುಭವಿಸಿತ್ತು. ಇಲ್ಲಿ ಕಾಣುವ ಕೋನದ ಆಕಾರ ಇರುವ ಬಂಡೆಗಳು ( Angular rocks) ಕಳೆದ ಶತಮಾನದಲ್ಲಿ ಅಥವಾ ಅದಕ್ಕೂ ಮೊದಲು ಇತರ ಭೂಕುಸಿತಗಳು ಸಂಭವಿಸಿದ ಸಾಧ್ಯತೆಯನ್ನು ಸೂಚಿಸುತ್ತವೆ ಇತ್ತೀಚಿನ ಭೂಕುಸಿತದ ನಂತರ ಚೂರಲ್‌ಮಲಾ ನದಿಯ ದಡದಲ್ಲಿ ಕೋನೀಯ ಬಂಡೆಯ ( Angular rocks) ರಾಶಿಗಳು ಗೋಚರಿಸಿದೆ. ಈ ಬಂಡೆಗಳು ಹಿಂದೆ ಸಂಭವಿಸಿದ ಭೂಕುಸಿತದಿಂದ ಮಾತ್ರ ಅಲ್ಲಿಗೆ ಬಂದು ತಲುಪಿರಲು ಸಾಧ್ಯ ಎಂದು ಸೋಮನ್‌ ಹೇಳುತ್ತಾರೆ. ಹಾಗಾಗಿ ಈ ಸ್ಥಳದಲ್ಲಿ ಭೂಕುಸಿತಗಳು ಸಂಭವಿಸುವ ಪೂರ್ವನಿದರ್ಶನದ ಹೊರತಾಗಿಯೂ, ಈ ಎರಡು ದುರಂತ ಪೀಡಿತ ಪ್ರದೇಶಗಳಲ್ಲಿ ಜನರಿಗೆ ವಾಸಿಸಲು ಇನ್ನೂ ಅವಕಾಶ ನೀಡಿರುವುದು ದುರದೃಷ್ಟಕರ ಎಂದು ವಿಷಾದ ವ್ಯಕ್ತಪಡಿಸುತ್ತಾರೆ.
ಈ ವೈಜ್ಞಾನಿಕ ಕಾರಣಗಳನ್ನು ಭೂವಿಜ್ಞಾನಿಗಳು, ಪರಿಸರತಜ್ಞರು, ಇಕಾಲಜಿ ತಜ್ಞರು ಆಗಿಂದ್ದಾಗ್ಗೆ ನಮ್ಮ ಸರ್ಕಾರಗಳಿಗೆ ತಿಳಿಯಪಡಿಸುತ್ತಿದ್ದರೂ, ಪ್ರವಾಸೋದ್ಯಮ-ಮೂಲ ಸೌಕರ್ಯಗಳನ್ನೇ ಅವಲಂಬಿಸುವ ಬಂಡವಾಳಶಾಹಿ ಅಭಿವೃದ್ಧಿ ಪಥದಲ್ಲಿ ಈ ಸಲಹೆಗಳನ್ನು ನಿರ್ಲಕ್ಷಿಸುತ್ತಲೇ ಬರಲಾಗಿದೆ. ಇದರ ಪರಿಣಾಮವನ್ನು ಸಾಮಾನ್ಯ ಜನರು ಈಗ ಅನುಭವಿಸುವಂತಾಗಿದೆ.

(ಈ ಲೇಖನಕ್ಕೆ ಆಧಾರ :
ನಿವೃತ್ತ ವಿಜ್ಞಾನಿ ಕೆ. ಸೋಮನ್ ಅವರ The river reclaimed its course’: Geologist explains Wayanad landslide- The News minute ಹಾಗೂ
ಎನ್.ಪಿ. ಉಲ್ಲೇಖ್ ಅವರ Lessons from Wayanad – Open ವೆಬ್‌ ಪತ್ರಿಕೆ )


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ