ಅಸ್ಪೃಶ್ಯತೆಯಿಂದ ಮುಕ್ತಿ ನೀಡುವ ಡ್ರೆಸ್ ಕೋಡ್ - Mahanayaka

ಅಸ್ಪೃಶ್ಯತೆಯಿಂದ ಮುಕ್ತಿ ನೀಡುವ ಡ್ರೆಸ್ ಕೋಡ್

07/03/2021

ಮೊನ್ನೆ ಒಂದು ಮದುವೆ ಸಮಾರಂಭಕ್ಕೆ ನನ್ನ ಶ್ರೀಮತಿಯವರು ಹೊಸ ಚಿನ್ನದ ಸರವೊಂದನ್ನು ಮಾಡಿಸಿ ಹಾಕಿಕೊಂಡು “ಹೇಗಿದೆ?” ಎಂದರು. ನಾನು “ಸೂಪರ್” ಎಂದೇ. ಹಾಗೆಯೇ ಅವರಿಗೆ ತಕ್ಕನಾಗಿ ನಾನು ಕೂಡ ಒಂದು ಬ್ಲೇಜರ್, ಶೂ ಧರಿಸಿ ಮದುವೆಗೆ ತಯಾರಾದೆ. ಮಕ್ಕಳು ಅಷ್ಟೇ, ಅಷ್ಟೇ ಗ್ರ್ಯಾಂಡ್ ಆಗಿರುವ ಬಟ್ಟೆಗಳನ್ನು ತೊಟ್ಟು ಮದುವೆಗೆ ಸಿದ್ಧರಾದರು. ನಾವೊಬ್ಬರೆ ಅಲ್ಲ, ನಮ್ಮ ಅಕ್ಕಪಕ್ಕದ ಮನೆಯವರು ಹಾಗೆ ಸಹಜವಾಗಿ ಸಿದ್ಧರಾರದು.

ಅರೆ, ಇದೇನಿದು ಮದುವೆ ತಯಾರಿ ಕತೆ, ಹೊಸದೇನಿದೆ ಎಂದಿರಾ? ಇದೆ. ಹಾಗೆ ಸಿದ್ಧನಾಗಿ ಕುಳಿತಾಗ ಟೈಮ್ಸ್ ಆಫ್ ಇಂಡಿಯಾ ವೆಬ್ ಸೈಟ್ ನಲ್ಲಿ “ಗುಜರಾತ್ ನಲ್ಲಿ ಮದುವೆಗೆ ಪೇಟ ಧರಿಸಿದ್ದ ದಲಿತನ ಮೇಲೆ so called (we are not calling!) ಮೇಲ್ಜಾತಿ ಜನರಿಂದ ಹಲ್ಲೆ ಎಂಬ ಸುದ್ದಿ ಇತ್ತು. ಅಂದಹಾಗೆ ಇಂತಹ ಸುದ್ದಿ ಗುಜರಾತ್, ರಾಜಸ್ಥಾನಗಳಲ್ಲಿ ಈಗಲೂ ಕಾಮನ್ನು. ದಲಿತರು ಮೀಸೆ ಬಿಟ್ಟಿದ್ದಕ್ಕೆ ಹಲ್ಲೆ, ದಲಿತರು ವಾದ್ಯ ಸಮೇತ ಕುದುರೆ ಮೇಲೆ ಮದುವೆ ಮೆರವಣಿಗೆ ಮಾಡಿದ್ದಕ್ಕೆ ಹಲ್ಲೆ.. ಹೀಗೆ.

ಬಾಬಾಸಾಹೇಬ್ ಅಂಬೇಡ್ಕರರು ಕೂಡ ತಮ್ಮ “ಅನ್ನಿಹಿಲೇಷನ್ ಆಫ್ ಕ್ಯಾಸ್ಟ್ ” ಕೃತಿ(Ambedkar writings, Vol.1, Pp.39) ಯಲ್ಲಿ ಈ ಥರದ ಅಂಶಗಳನ್ನು ಉಲ್ಲೇಖಿಸುತ್ತಾರೆ. 1928 ರ ಜನವರಿ ತಿಂಗಳ “ಟೈಮ್ಸ್ ಆಫ್ ಇಂಡಿಯಾ” ಪತ್ರಿಕೆ ವರದಿ ಉಲ್ಲೇಖಿಸುವ ಅಂಬೇಡ್ಕರರು “ಇಂಧೋರ್ ರಾಜ್ಯದ ಮೇಲ್ಜಾತಿ ಹಿಂದೂಗಳು ಈ ಕೆಳಕಂಡ ಕಂಡೀಷನ್ ಗಳಿಗೆ ಬದ್ಧರಾದರೆ ಮಾತ್ರ ತಮ್ಮ ಜೊತೆ ಬಲಾಯಿ ಎಂಬ ಅಸ್ಪೃಶ್ಯ ವರ್ಗದವರು ಇರಲು ಅರ್ಹರು” ಎಂದಿರುವುದನ್ನು ದಾಖಲಿಸುತ್ತಾರೆ.

ಹಿಂದೂಗಳು ಬಲಾಯಿಗಳ ಮೇಲೆ ಹಾಕುವ ಅಂತಹ ಕೆಲವು ಕಂಡೀಷನ್ ಗಳೆಂದರೆ

ಬಲಾಯಿಗಳು ಚಿನ್ನ ಲೇಪಿತ ರೇಷ್ಮೆ ಪೇಟಗಳನ್ನು ಧರಿಸುವ ಹಾಗಿಲ್ಲ.

ಬಲಾಯಿಗಳು ಬಣ್ಣದ ಅಥವಾ ಫ್ಯಾನ್ಷಿ ಇರುವ ಪಂಚೆ ಅಥವಾ ಧೋತಿಯನ್ಬು ಧರಿಸುವ ಹಾಗಿಲ್ಲ.

ಬಲಾಯಿ ಮಹಿಳೆಯರು ಚಿನ್ನದ ಆಭರಣಗಳನ್ನು ಧರಿಸುವ ಹಾಗಿಲ್ಲ. ಹಾಗೆಯೇ ಅವರು ಫ್ಯಾನ್ಷಿ ಗೌನ್ ಗಳನ್ನು ಮತ್ತು ಮೇಲ್ ಹೊದಿಕೆಗಳನ್ನು (jacket) ಧರಿಸುವ ಹಾಗಿಲ್ಲ.

 

ಹೀಗೆ….

ನಿಜ, ಬಾಬಾಸಾಹೇಬ್ ಅಂಬೇಡ್ಕರರು ಅಂದು ಉಲ್ಲೇಖಿಸಿರುವ ಈ ದಾಖಲೆಗಳನ್ನು ಓದಿದರೆ ಯಾರಿಗಾದರೂ “ಅರೆ, ಇದೇನಿದು? ಹೀಗೂ ಉಂಟಾ? ಎನಿಸದಿರದು. ಆದರೆ ದುರಂತದ ವಾಸ್ತವವೆಂದರೆ 2021 ರ ಈ ಸಂದರ್ಭದಲ್ಲೂ ಅದೇ ಮದ್ಯ ಪ್ರದೇಶ, ರಾಜಸ್ಥಾನ ಮತ್ತು ಗುಜರಾತ್ ರಾಜ್ಯಗಳಿಂದ ಇಂತಹ ಸುದ್ದಿಗಳನ್ನು ನಾವು ಈಗಲೂ ಕಾಣುತ್ತೇವೆ. ಅಂದಹಾಗೆ ಕರ್ನಾಟಕದಲ್ಲಿ ಇಂತಹ ಪರಿಸ್ಥಿತಿಗಳು ಅದೆಂದೋ ಮಾಯವಾಗಿವೆ. ವಯಕ್ತಿಕವಾಗಿ ತಿಳಿದಿರುವಂತೆ “ನಮ್ಮ ಅಪ್ಪ ಅಮ್ಮನ ಮದುವೆ 50 ವರ್ಷಗಳ ಹಿಂದೆ ನಡೆದಾಗ ಅವರಿಬ್ಬರ ಮದುವೆ ಮೆರವಣಿಗೆ ಕುದುರೆ ಮೇಲೆ ನಡೆದದ್ದನ್ನು” ನಮ್ಮಪ್ಪ ಆಗಾಗ ನನಗೆ ಹೇಳುತ್ತಿದ್ದ. ಇನ್ನು ಚಿಕ್ಕವನಿದ್ದಾಗ ನಮ್ಮೂರಲ್ಲಿ ನಮ್ಮವರ ಅನೇಕ ಮದುವೆ ಮೆರವಣಿಗೆಗಳು ಜೀಪ್ ಮೇಲೆ ನಡೆದಿದ್ದನ್ನು ನಾನೇ ನೋಡಿರುವೆ. ಅಂದರೆ ನಮ್ಮ ಕರ್ನಾಟಕದಲ್ಲಿ ಅಂತಹ ಪರಿಸ್ಥಿತಿ ಅದೆಷ್ಟೋ ಸುಧಾರಿಸಿದೆ. ಆದರೆ ದೇಶದ ಕೆಲವು ಭಾಗಗಳಲ್ಲಿ ಅಲ್ಲಲ್ಲಿ ಈಗಲೂ ಅಂತಹ ಪರಿಸ್ಥಿತಿ ಇದೆ.

ಈ ನಿಟ್ಟಿನಲ್ಲಿ ನಾವು ಶೋಷಿತ ಸಮುದಾಯಗಳು ತಿಳಿಯಬೇಕಾದ್ದೆಂದರೆ ನಾವು ನಮ್ಮ ಡ್ರೆಸ್ ಮತ್ತು ವೇಷಭೂಷಣಗಳ ಬಗ್ಗೆ ಒಂದು ವಿಶೇಷ ಗಮನ ಕೊಡಲೇಬೇಕು. ಬಾಬಾಸಾಹೇಬ್ ಅಂಬೇಡ್ಕರರು “ಒಬ್ಬ ವ್ಯಕ್ತಿ ಒಂದು ತೂಕವಾದರೆ ಆತ ಹಾಕುವ ಬಟ್ಟೆ ನೂರು ತೂಕ ಇರಬೇಕು” ಎಂದು ಸದಾ ಹೇಳುತ್ತಿದ್ದರು. ಅದರಂತೆ ಬಾಬಾಸಾಹೇಬರು ಸದಾ ತಮ್ಮ ಡ್ರೆಸ್ ಬಗ್ಗೆ ವಿಶೇಷ ಗಮನ ಕೊಡುತ್ತಿದ್ದರು. ಅದನ್ನು ನಾವೂ ಕಲಿಯಬೇಕು. ಕೋಟು, ಬೂಟು, ಟೈ… ಮಹಿಳೆಯರು ರೇಷ್ಮೆ, ಚಿನ್ನದ ಆಭರಣಗಳು.. ಹೀಗೆ ಡ್ರೆಸ್ ಕೋಡ್ ಬೆಳೆಸಿಕೊಳ್ಳಬೇಕು. ಯಾಕೆಂದರೆ ಅಸ್ಪೃಶ್ಯತೆ ತನ್ನ ಪಾಡಿಗೆ ತಾನು ಅದು ಹೋಗುವುದಿಲ್ಲ. ನಾವು ಅದನ್ನು ತೊಲಗಿಸಬೇಕು, ಒದ್ದೋಡಿಸಬೇಕು. ಇನ್ನೆಂದೂ ನಮ್ಮ ಕಣ್ಣ ಮುಂದೆ ಅದು ಬಾರದಂತೆ ನೋಡಿಕೊಳ್ಳಬೇಕು.

-ರಘೋತ್ತಮ ಹೊ.ಬ

 

ಇತ್ತೀಚಿನ ಸುದ್ದಿ