ನನ್ನ ಸಿಡಿ ಕೂಡಲೇ ಬಿಡುಗಡೆ ಮಾಡಿ ಎಂದ ಮುನಿರತ್ನ!
07/03/2021
ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಬಿಡುಗಡೆಯಾದ ಪ್ರಕರಣ, ಹಾಗೂ 6 ಸಚಿವರು ಕೋರ್ಟ್ ಮೊರೆ ಹೋಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ಮುನಿರತ್ನ ಮಾತನಾಡಿದ್ದು, ನನ್ನ ಸಿಡಿ ಇದ್ದರೆ, ರಾಷ್ಟ್ರಮಟ್ಟದಲ್ಲಿ ಬಿಡುಗಡೆ ಮಾಡಿ, ಸಿಡಿ ಬಿಡುಗಡೆ ಮಾಡುವವರಿಗೆ ಸ್ವಾಗತ ಎಂದು ಅವರ ಹೇಳಿದ್ದಾರೆ.
ನಾನು ಕೋರ್ಟ್ ಮೆಟ್ಟಿಲು ಹತ್ತುವುದಿಲ್ಲ. ನನಗೆ ಯಾವುದೇ ಭಯವೂ ಇಲ್ಲ. ನನ್ನ ಸಿಡಿ ಇದ್ದರೆ, ರಾಷ್ಟ್ರಮಟ್ಟದಲ್ಲಿ ಬಿಡುಗಡೆ ಮಾಡಿ ಎಂದು ಮುನಿರತ್ನ ಸವಾಲು ಹಾಕಿದರು. ಯಾರಾದರೂ ನನ್ನ ಸಿಡಿ ಇದೆ ಎಂದು ಹೇಳಿದರೆ, ನಾನು ತಡೆಯಾಜ್ಞೆ ತರುವುದಿಲ್ಲ. ಕೂಡಲೇ ಅದನ್ನು ಬಿಡುಗಡೆ ಮಾಡಿ ಎಂದು ಅವರು ಸವಾಲು ಹಾಕಿದ್ದಾರೆ.
ನಾವೆಲ್ಲರೂ ಮುಂಬೈಯಲ್ಲಿ ಒಂದೇ ರೆಸಾರ್ಟ್ ನಲ್ಲಿದ್ದೆವು. ಅಲ್ಲಿ ನಮ್ಮನ್ನು ತೇಜೋವಧೆ ಮಾಡುವ ಕೆಲಸವನ್ನು ಯಾರೂ ಮಾಡಿಲ್ಲ. ಇದೊಂದು ವ್ಯವಸ್ಥಿತವಾದ ಸಂಚು. ಸಿಲುಕಿಸಲೇ ಬೇಕು ಎಂದು ಸಿಲುಕಿಸಿರುವ ಪ್ರಕರಣವಿದು. ಯಾರ ದೌರ್ಬಲ್ಯ ಅವರಿಗೆ ಗೊತ್ತಿತ್ತೋ, ಅದನ್ನು ಬಳಸಿಕೊಂಡು ಸಿಲುಕಿಸಲಾಗಿದೆ ಎಂದು ಅವರು ಹೇಳಿದರು.