ಸಿದ್ದರಾಮಯ್ಯ ಜಗ್ಗೋದೂ ಇಲ್ಲ, ಬಗ್ಗೋದೂ ಇಲ್ಲ: ಸಿಎಂ ಪರ ನಿಂದ ರಾಜ್ಯ ಕಾಂಗ್ರೆಸ್ ಸಚಿವರು - Mahanayaka

ಸಿದ್ದರಾಮಯ್ಯ ಜಗ್ಗೋದೂ ಇಲ್ಲ, ಬಗ್ಗೋದೂ ಇಲ್ಲ: ಸಿಎಂ ಪರ ನಿಂದ ರಾಜ್ಯ ಕಾಂಗ್ರೆಸ್ ಸಚಿವರು

c m siddaramaiah
17/08/2024

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ) ಹಗರಣ ಪ್ರಕರಣದಲ್ಲಿ ರಾಜ್ಯಪಾಲ ಥಾವರ್ ಚಂದ್ ಪ್ರಾಸಿಕ್ಯೂಷನ್ ಗೆಹ್ಲೋಟ್ (Thawar Chand Gehlot) ಅನುಮತಿ ನೀಡಿದ್ದಾರೆ. ಈ ನಡುವೆ ಕಾಂಗ್ರೆಸ್ ಶಾಸಕರು ಹಾಗೂ ಸಚಿವರು ಸಿಎಂ ಸಿದ್ದರಾಮಯ್ಯ ಪರ ನಿಂತಿದ್ದಾರೆ.

ರಾಜ್ಯಪಾಲರ ವಜಾಕ್ಕೆ ಒತ್ತಾಯ

ಅರಣ್ಯ ಸಚಿವ ಈಶ್ವರ್ ಖಂಡ್ರೆ ಈ ಬಗ್ಗೆ ಎಕ್ಸ್ ನಲ್ಲಿ ಪ್ರತಿಕ್ರಿಯಿಸಿದ್ದು, ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ರಾಜಕೀಯ ಪ್ರೇರಿತವಾಗಿ ಮಾಡಿರುವ ಆರೋಪವನ್ನೇ ಆಧಾರವಾಗಿಟ್ಟುಕೊಂಡು ಪ್ರಾಸಿಕ್ಯೂಷನ್ ಗೆ ಅನುಮತಿ ಕೊಟ್ಟಿರುವುದು ಸರಿಯಲ್ಲ. ರಾಜ್ಯಪಾಲರು ಅನುಸರಿಸಿರುವ ಪಕ್ಷಪಾತ ಧೋರಣೆಗೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು, ಇಲ್ಲವೇ ಇವರನ್ನು ರಾಷ್ಟ್ರಪತಿಗಳು ವಜಾ ಮಾಡಬೇಕು ಎಂದು ಒತ್ತಾಯಿಸುತ್ತೇನೆ ಎಂದಿದ್ದಾರೆ.

ಸಿಎಂ ಬಗ್ಗೋದೂ ಇಲ್ಲ, ಜಗ್ಗೋದೂ ಇಲ್ಲ:

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಈ ಬಗ್ಗೆ ಮಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದು, ಇದು ಒಂದು ಷಡ್ಯಂತ್ರ ಅನ್ನೋದು ನಮಗೆ ಮೊದಲೇ ಗೊತ್ತಿತ್ತು. ಮೋದಿ ಸರ್ಕಾರ ಎಲ್ಲಾ ಸಂವಿಧಾನಿಕ ಹುದ್ದೆಗಳನ್ನ ಸರ್ವನಾಶ ಮಾಡ್ತಿದೆ ಎಂದರು. ರಾಜ್ಯಪಾಲರ ಕಚೇರಿ ಈಗ ಬಿಜೆಪಿ ಕಚೇರಿ ಆಗಿದೆ. ಗವರ್ನರ್ ತಪ್ಪೇ ಮಾಡದ ಸಿಎಂ ವಿರುದ್ದ ಅನುಮತಿ ಕೊಟ್ಟಿದ್ದಾರೆ. ನಾವು ಕಾನೂನಿನ ಹೋರಾಟ ಮಾಡುತ್ತಿದ್ದೇವೆ. ಸಿಎಂ ಜಗ್ಗೋದು ಇಲ್ಲ, ಬಗ್ಗೋದು ಇಲ್ಲ. ಚುನಾಯಿತ ಸರ್ಕಾರ ಅಸ್ಥಿರಗೊಳಿಸೋ ಕೆಲಸ ಮಾಡ್ತಿದಾರೆ, ಇದಕ್ಕೆ ಜನರು ಕೂಡ ತಕ್ಕ ಉತ್ತರ ಕೊಡುತ್ತಾರೆ ಎಂದರು.

ಪರಿಣಾಮ ಎದುರಿಸುತ್ತಾರೆ:

ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಎಂ.ಬಿ.ಪಾಟೀಲ್, ರಾಜ್ಯಪಾಲರಿಂದ ನಾವು ಇದನ್ನು ಅಪೇಕ್ಷೆ ಮಾಡಿರಲಿಲ್ಲ. ಸಿಎಂ ಸಿದ್ದರಾಮಯ್ಯ ರದ್ದು ಯಾವುದೇ ರೀತಿಯ ತಪ್ಪಿಲ್ಲ, ಗವರ್ನರ್ ಕೇಂದ್ರದ ಕೈಗೊಂಬೆಯಾಗಿ ಕೆಲಸ ಮಾಡ್ತಿದ್ದಾರೆ. ಬೇರೆ ಬೇರೆ ರಾಜ್ಯಗಳಲ್ಲಿ ಮುಂದುವರಿದ ಚಾಳಿಯಂತೆ ಇಲ್ಲೂ ಮಾಡ್ತಿದ್ದಾರೆ. ಸರ್ಕಾರವನ್ನು ದುರ್ಬಲಗೊಳಿಸುವ ಕೆಲಸ ಮಾಡ್ತಿದ್ದಾರೆ. ಕಾನೂನು ರೀತಿಯಲ್ಲಿ ಇದನ್ನು ಫೇಸ್ ಮಾಡುತ್ತೇವೆ. ಇದರ ಪರಿಣಾಮವನ್ನು ಗವರ್ನರ್ ಹಾಗೂ ಕೇಂದ್ರ ಸರ್ಕಾರ ಮುಂದೆ ಎದುರಿಸಬೇಕಾಗುತ್ತದೆ. ಸಿದ್ದರಾಮಯ್ಯ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ, ನಾವೆಲ್ಲ ಸಿಎಂ ಜೊತೆ ಇದ್ದೇವೆ ಎಂದು ಹೇಳಿದರು.


ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q

ಇತ್ತೀಚಿನ ಸುದ್ದಿ