ನನ್ನನ್ನು ಯಾರೂ ಒಪ್ಪುತ್ತಿಲ್ಲ, ನನಗೆ ಮದುವೆ ಮಾಡಿಸಿ | ಪೊಲೀಸರ ಮೊರೆ ಹೋದ ಯುವಕ
ಲಕ್ನೋ: ತನಗೆ ಮದುವೆ ಮಾಡುವಂತೆ ಕೋರಿ ವ್ಯಕ್ತಿಯೊಬ್ಬರು ಪೊಲೀಸ್ ಠಾಣೆಯ ಮೆಟ್ಟಿಲೇರಿದ ಘಟನೆ ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ ನಡೆದಿದ್ದು, ತನ್ನನ್ನು ಯಾವುದೇ ಹುಡುಗಿ ಮದುವೆಯಾಗಲು ಒಪ್ಪುತ್ತಿಲ್ಲ. ಹಾಗಾಗಿ ತನಗೆ ನೀವೇ ಮದುವೆ ಮಾಡಿಸಬೇಕು ಎಂದು ಪೊಲೀಸರ ಮೊರೆ ಹೋಗಿದ್ದಾರೆ.
26 ವರ್ಷ ವಯಸ್ಸಿನ ಅಜೀಮ್ ಮನ್ಸೂರಿ ಮದುವೆಯಾಗಲು ತನಗೆ ಹುಡುಗಿ ಹುಡುಕಿ ಕೊಡುವಂತೆ ಪೊಲೀಸರ ಮೊರೆ ಹೋದ ಯುವಕನಾಗಿದ್ದು, ತನಗೆ ಯಾವುದೇ ಜಾತಿ, ಮತ, ಬಣ್ಣ ಅಥವಾ ಧರ್ಮದವಳಾದರೂ ಪರವಾಗಿಲ್ಲ. ಓದಿರುವ ಹುಡುಗಿಯಾದರೆ ಸಾಕು. ತನಗೆ ಮದುವೆ ಮಾಡಿಸಿ ಎಂದು ಪೊಲೀಸರಿಗೆ ಮನವಿ ಮಾಡಿದ್ದಾರೆ.
ಅಜೀಮ್ 3 ಅಡಿ 2 ಇಂಚು ಎತ್ತರ ಇದ್ದು, ಹೀಗಾಗಿ ಯಾವುದೇ ಹುಡುಗಿಯೂ ಅಜೀಮ್ ರನ್ನು ಮದುವೆಯಾಗಲು ಒಪ್ಪುತ್ತಿಲ್ಲ. ತನ್ನ ದೇಹ ತನ್ನ ಮದುವೆಯ ಕನಸಿಗೆ ಅಡ್ಡಿಯಾಗಿದೆ. ನನ್ನ ಮದುವೆಯ ಕನಸು ಕನಸಾಗಿಯೇ ಉಳಿಯಬಹುದು ಎನ್ನುವ ಭಯದಿಂದ ತಾನು ಪೊಲೀಸರ ಮೊರೆ ಹೋಗಿರುವುದಾಗಿ ಅಜೀಮ್ ಹೇಳಿದ್ದಾರೆ.
ಅಜೀಮ್ ಅವರ ಸಂಕಷ್ಟವನ್ನು ಅರ್ಥ ಮಾಡಿಕೊಂಡಿರುವ ಮನ್ಸೂರಿ ಕೈರಾನಾ ಪೊಲೀಸರು ಸಿಎಂ ಯೋಗಿ ಆದಿತ್ಯನಾಥ್ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಜೊತೆಗೆ ಅಜೀಮ್ ಮದುವೆಯನ್ನು ಹೇಗಾದರೂ ಮಾಡಿಸ ಬೇಕು ಎಂದು ನಿರಂತರ ಪ್ರಯತ್ನ ಮಾಡುತ್ತಿದ್ದಾರೆ.