ಅತ್ಯಾಚಾರದ ಬಗ್ಗೆ ದೂರು ದಾಖಲಿಸಿದ ಮರುದಿನವೇ ಟ್ರಕ್ ಹರಿಸಿ ಸಂತ್ರಸ್ತೆಯ ತಂದೆಯ ಬರ್ಬರ ಹತ್ಯೆ?
ಕಾನ್ಪುರ: 13 ವರ್ಷ ವಯಸ್ಸಿನ ಬಾಲಕಿಯ ಮೇಲೆ ಮೂವರು ಸಾಮೂಹಿಕವಾಗಿ ಅತ್ಯಾಚಾರ ನಡೆಸಿದ ಘಟನೆಯ ಬಗ್ಗೆ ದೂರು ನೀಡಿದ ಮರುದಿನವೇ ಸಂತ್ರಸ್ತೆಯ ತಂದೆ ಅಪಘಾತದಲ್ಲಿ ಮೃತಪಟ್ಟಿದ್ದು, ಇದೊಂದು ವ್ಯವಸ್ಥಿತ ಕೊಲೆ ಎಂಬ ಅನುಮಾನಗಳಿಗೆ ಕಾರಣವಾಗಿದೆ.
ಅತ್ಯಾಚಾರ ಪ್ರಕರಣದ ಆರೋಪಿಗಳು ಪ್ರಭಾವಿಗಳಾಗಿದ್ದಾರೆ. ಕನೌಜ್ ನ ಎಸ್ ಪಿ ಗೋಲು ಯಾದವ್ ನ ಪುತ್ರ ಈ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ. ಹೀಗಾಗಿ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯ ತಂದೆಯನ್ನು ಅಪಘಾತದಲ್ಲಿ ಮುಗಿಸಲಾಗಿದೆ ಎಂಬ ಅನುಮಾನಗಳು ಇದೀಗ ಸೃಷ್ಟಿಯಾಗಿದೆ.
ದೂರು ದಾಖಲಿಸಿದ ಮರುಕ್ಷಣದಿಂದಲೇ ಸಂತ್ರಸ್ತೆಯ ಕುಟುಂಬಕ್ಕೆ ಆರೋಪಿಗಳ ಕಡೆಯವರು ಬೆದರಿಕೆ ಹಾಕಿದ್ದರು ಎಂದು ಕುಟುಂಬ ಆರೋಪಿಸಿತ್ತು. ಆದರೆ, ಇದನ್ನು ಯೋಗಿ ಸರ್ಕಾರ ನಿರ್ಲಕ್ಷಿಸಿತ್ತು.
ಇಂದು ಬೆಳಗ್ಗೆ ಸಂತ್ರಸ್ತೆ ವೈದ್ಯಕೀಯ ತಪಾಸಣೆಗೆ ಆಸ್ಪತ್ರೆಗೆ ತೆರಳಿದ್ದ ಸಂದರ್ಭದಲ್ಲಿ ತಂದೆ ಚಹಾ ಕುಡಿಯಲೆಂದು ಹೊರಗೆ ಬಂದಿದ್ದಾರೆ. ಈ ವೇಳೆ ಟ್ರಕ್ ವೊಂದನ್ನು ಏಕಾಏಕಿ ಮುನ್ನುಗ್ಗಿಸಿ ಹತ್ಯೆ ಮಾಡಲಾಗಿದೆ ಎಂದು ಹೇಳಲಾಗಿದೆ.