ಇವರ ದುಡ್ಡಿನ ಅಹಂಕಾರ ನೋಡಿ: ತಾನೇ ಹಲ್ಲೆ ಮಾಡಿ ಫುಡ್ ಡೆಲಿವರಿ ಬಾಯ್ ಗೆ ದೂರು ಹಾಕಿದ ಯುವತಿ
ಬೆಂಗಳೂರು: ಫುಡ್ ಡೆಲಿವರಿ ಬಾಯ್ ಗಳ ಕಷ್ಟ ಅವರಿಗೆ ಮಾತ್ರವೇ ತಿಳಿದಿರಲು ಸಾಧ್ಯ. ನೂರಾರು ಸಂಕಷ್ಟಗಳ ನಡುವೆಯೂ ಅವರು ಆಹಾರವನ್ನು ತಂದು ಮನೆಗೆ ಒಪ್ಪಿಸುತ್ತಾರೆ. ಈ ರೀತಿಯ ಕೆಲಸ ಮಾಡುವಾಗ ಎಷ್ಟೋ ಜನರು ರಸ್ತೆ ಅಪಘಾತದಲ್ಲಿಯೂ ಮೃತಪಟ್ಟಿದ್ದಾರೆ. ಇಷ್ಟೊಂದು ರಿಸ್ಕ್ ತೆಗೆದುಕೊಂಡು ಕೆಲಸ ಮಾಡುವವರಿಗೆ ಸಂಸ್ಥೆ ನೀಡುವ ಸಂಬಳ ಕೂಡ ಕಡಿಮೆಯೇ ಇರುತ್ತದೆ. ಆದರೆ ಇದರ ನಡುವೆ ಗ್ರಾಹಕರು ಕೂಡ ಅವರಿಗೆ ಸಂಕಷ್ಟ ತಂದಿಡುತ್ತಿದ್ದಾರೆ.
ಬೆಂಗಳೂರಿನಲ್ಲಿ ಫುಡ್ ಡೆಲಿವರಿ ಬಾಯ್ ತನಗೆ ಹಲ್ಲೆ ನಡೆಸಿದ್ದಾನೆ ಎಂದು ಇನ್ಟಾ ಗ್ರಾಮ್ ನಲ್ಲಿ ಯುವತಿಯೋರ್ವಳು ಪೋಸ್ಟ್ ಹಾಕಿದ್ದಳು. ಇದಲ್ಲದೇ ಪೊಲೀಸರಿಗೂ ಆಕೆ ದೂರು ನೀಡಿದ್ದಳು. ಆದರೆ ಇದೀಗ ಫುಡ್ ಡೆಲಿವರಿ ಬಾಯ್ ಈ ಘಟನೆಯ ಬಗ್ಗೆ ವಿವರಿಸಿದ್ದಾರೆ.
ಹಿತೇಶಾ ಚಂದ್ರಾಣಿ ಎಂಬವರು ಫುಡ್ ಡೆಲಿವರಿ ಬಾಯ್ ವಿರುದ್ಧ ಹಲ್ಲೆ ಆರೋಪ ಮಾಡಿದ್ದಾರೆ. ಊಟ ತಂದುಕೊಡುವುದಕ್ಕೆ ತಡ ಮಾಡಿದ್ದಲ್ಲದೇ ಸ್ಪಷ್ಟನೆ ಕೇಳಿದ್ದಕ್ಕೆ ನನಗೆ ಬೈದು, ಮುಖಕ್ಕೆ ಪಂಚ್ ಮಾಡಿದ್ದಾನೆ ಎಂದು ಆರೋಪಿಸಿದ್ದರು.
ಇನ್ನೂ ಈ ಸಂಬಂಧ ಪೊಲೀಸರಿಗೆ ಮಾಹಿತಿ ನೀಡಿರುವ ಡೆಲಿವರಿ ಬಾಯ್ ಕಾಮರಾಜ್, ತಾನು 45-50 ನಿಮಿಷ ತಡವಾಗಿ ಹೋಗಿದ್ದೆ. ಈ ವಿಚಾರವಾಗಿ ಅವರ ಬಳಿ ಕ್ಷಮೆಯಾಚಿಸಲು ಮುಂದಾಗುವ ಮೊದಲೇ ಅವರು ಬೈಯಲು ಆರಂಭಿಸಿದ್ದಾರೆ. ನನ್ನಿಂದ ಊಟ ಪಡೆದುಕೊಂಡು ಹಣ ನೀಡಲು ನಿರಾಕರಿಸಿದರು. ಊಟ ವಾಪಸ್ ಕೊಡಿ ಎಂದು ಕೇಳಿದೆ. ಆದರೆ ಅದಕ್ಕೆ ಒಪ್ಪದ ಅವರು ನನ್ನನ್ನು ಕೆಲಸದ ಆಳು ಎಂದು ನಿಂದಿಸಿದರು. ಏನು ಬೇಕಾದರೂ ಮಾಡಿಕೋ ಹೋಗು ಎಂದು ಕೂಗಿದ್ದಾರೆ ಎಂದು ಕಾಮರಾಜ್ ಹೇಳಿದ್ದಾರೆ.
ದುಡ್ಡು ಸಿಗುವುದಿಲ್ಲ ಎನ್ನುವುದು ತಿಳಿಯುತ್ತಿದ್ದಂತೆಯೇ ನಾನು ವಾಪಸ್ ಹೋಗಲು ಲಿಫ್ಟ್ ಬಳಿ ಹೊರಟೆ. ಆಗ ನನ್ನ ಮೇಲೆ ಚಪ್ಪಲಿಯಲ್ಲಿ ಎಸೆದರು. ಅದರಿಂದ ತಪ್ಪಿಸಲು ಯತ್ನಿಸುತ್ತಿದ್ದಾಗಲೇ ನನಗೆ ಹೊಡೆಯಲು ಬಂದಿದ್ದಾರೆ. ಈ ವೇಳೆ ಅವರ ಹೊಡೆತದಿಂದ ನಾನು ತಪ್ಪಿಸಿಕೊಳ್ಳುವ ವೇಳೆ ನನ್ನ ಕೈ ಅವರಿಗೆ ತಾಗಿದೆ. ಈ ವೇಳೆ ಅವರ ಮೂಗಿಗೆ ಅವರದ್ದೇ ಕೈಯಲ್ಲಿದ್ದ ಉಂಗುರ ತಾಗಿ ಗಾಯವಾಗಿದೆ ಎಂದು ಕಾಮರಾಜ್ ಘಟನೆಯನ್ನು ವಿವರಿಸಿದ್ದಾರೆ.
ಮುಖಕ್ಕೆ ಪಂಚ್ ಮಾಡಿದ್ದರೆ, ಯುವತಿಯ ಸ್ಥಿತಿಯೇ ಬೇರೆಯಾಗಿರಬೇಕಿತ್ತು. ಕಾಮರಾಜ್ ಹೇಳುತ್ತಿರುವುದು ಸತ್ಯ ಎಂದು ಹೇಳಲಾಗುತ್ತಿದೆ. ಇದರ ಜೊತೆಗೆ ಅಲ್ಲಿ ಸಿಸಿ ಕ್ಯಾಮರ ಇತ್ತು. ಅದರ ದೃಶ್ಯಗಳನ್ನು ನೋಡಿದರೆ, ನಿಮಗೆ ಸತ್ಯ ತಿಳಿಯುತ್ತದೆ ಎಂದು ಕಾಮರಾಜ್ ಆತ್ಮ ವಿಶ್ವಾಸದಿಂದ ಹೇಳುತ್ತಿದ್ದಾರೆ.
ದುಡ್ಡಿನ ಅಹಂಕಾರವನ್ನು ಕಷ್ಟಪಟ್ಟು ದುಡಿಯುತ್ತಿರುವವರ ಮೇಲೆ ತೋರಿಸುವುದಲ್ಲ. ಫುಡ್ ಡೆಲಿವರಿ ಬಾಯ್ಸ್ ಕೂಡ ಮನುಷ್ಯರೇ ಆಗಿದ್ದಾರೆ. ಅವರು ಕೂಡ ಬದುಕುವುದಕ್ಕಾಗಿಯೇ ದುಡಿಯುತ್ತಿದ್ದಾರೆ. ಅವರ ವಿನಯತೆಯನ್ನು ದುರುಪಯೋಗ ಪಡಿಸಿಕೊಂಡು ದರ್ಪ ತೋರಿಸುವವರ ವಿರುದ್ಧ ಪೊಲೀಸರು ಸರಿಯಾದ ಕ್ರಮವನ್ನು ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.