ದರ್ಶನ್ ಬೆರಳು ಚುಚ್ಚಬಾರದ ಜಾಗಕ್ಕೆ ಚುಚ್ಚಿತೇ? | ಇವರೇನೂ ನ್ಯೂಸ್ ಆ್ಯಂಕರ್ ಗಳೋ, ಟ್ರೋಲರ್ಸೋ?
ಬೆಂಗಳೂರು: ನಟ ದರ್ಶನ್ ಕೇಸ್ ಆರಂಭಗೊಂಡಂದಿನಿಂದ ಕನ್ನಡದ ಸುದ್ದಿವಾಹಿನಿಗಳ ನಡತೆಯ ಬಗ್ಗೆ ಸಾರ್ವಜನಿಕರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಇಡೀ ದಿನ ನೋಡಿದರೂ ದರ್ಶನ್ ಗೆ ಸಂಬಂಧಪಟ್ಟ ವಿಚಾರಗಳೇ ಮಾಧ್ಯಮಗಳಲ್ಲಿ ಚರ್ಚೆ ನಡೆಸಲಾಗುತ್ತಿದೆ. ರಾಜ್ಯದ ಯಾವುದೇ ಪ್ರಮುಖ ವಿಚಾರಗಳ ಬಗ್ಗೆ ಮಾಧ್ಯಮಗಳು ತಲೆಕೆಡಿಸಿಕೊಳ್ಳುತ್ತಾ ಇಲ್ಲ. ಗಂಟೆಗಟ್ಟಲೆ ಚರ್ಚೆಯಾಗಬೇಕಿದ್ದ ರಾಜ್ಯದ ಸಮಸ್ಯೆಗಳು ಚರ್ಚೆಯಾಗುತ್ತಿಲ್ಲ. ಕೇವಲ ದರ್ಶನ್, ಇಲ್ಲವೇ ಕೋಮುಗಲಭೆ ವಿಚಾರ ಮಾತ್ರವೇ ಪ್ರಸಾರವಾಗುತ್ತಿದೆ ಎನ್ನುವ ಆರೋಪಗಳು ವ್ಯಾಪಕವಾಗಿ ಕೇಳಿ ಬರುತ್ತಿವೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ಇದ್ದಾಗಲೂ ಜೈಲಿನ ಗೇಟ್ ಮುಂದೆ ಸುದ್ದಿವಾಹಿನಿಗಳ ಕ್ಯಾಮರಾ ಇದ್ದವು. ಇರಲಿ, ಅದರಲ್ಲೇನೂ ತಪ್ಪಿಲ್ಲ ಅದು ಅವರ ಕರ್ತವ್ಯ. ಆದ್ರೆ ದರ್ಶನ್ ನನ್ನು ಭೇಟಿಯಾಗಲು ಬರುತ್ತಿದ್ದವರನ್ನು ಉದ್ದೇಶಪೂರ್ವಕವಾಗಿ ಕೆಣಕುವ ಕೆಲಸ ಮಾಡುತ್ತಿರುವುದೇ ಇದೀಗ ಆಕ್ರೋಶಕ್ಕೆ ಕಾರಣವಾಗ್ತಿದೆ.
ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ಆದ ನಂತರವೂ ಅಲ್ಲಿಯೂ ಗೇಟ್ ಮುಂಭಾಗದಲ್ಲಿ ಮಾಧ್ಯಮಗಳು ಕಾಯುತ್ತಿವೆ. ಅದರಲ್ಲಿ ತಪ್ಪಿಲ್ಲ. ಆದರೆ, ದರ್ಶನ್ ಅವರನ್ನು ಭೇಟಿಯಾಗಲು ಬರುವ ಕುಟುಂಬಸ್ಥರನ್ನು ಅಡ್ಡಗಟ್ಟಿ, ಕಾರಿನೊಳಗೆ ಕ್ಯಾಮರಾ ತೆಗೆದುಕೊಂಡು ಹೋಗುವುದು. ಅವರು ಏನೋ ಕ್ರೈಮ್ ಮಾಡ್ತಾ ಇದ್ದಾರೆ ಎನ್ನುವಂತೆ ಅವರಿಗೆ ಮಾನಸಿಕ ಹಿಂಸೆ ನೀಡುತ್ತಿರುವುದು ಎಷ್ಟು ಸರಿ ಅಂತ ಪ್ರಜ್ಞಾವಂತರು ಪ್ರಶ್ನಿಸುತ್ತಿದ್ದಾರೆ.
ಬೆರಳು ಚುಚ್ಚಬಾರದ ಜಾಗಕ್ಕೆ ಚುಚ್ಚಿತೇ?
ನಟ ದರ್ಶನ್ ಬಗ್ಗೆ ದಿನದ 24 ಗಂಟೆಯೂ ಸುದ್ದಿವಾಹಿನಿಗಳು ತಮಗೆ ತೋಚಿದಂತೆಲ್ಲ ಮಾತನಾಡಿದ್ದರು. ಹೈವಾನ, ದನ ಇದ್ದಂಗಿದ್ದಾನೆ. ಅವನು, ಇವನು, ಪೊರ್ಕಿ, ರಾಕ್ಷಸ ಇಂತಹ ಅಸಂವಿಧಾನಿಕ ಶಬ್ದಗಳನ್ನು ಬಳಸಿದ್ದಾರೆ. ನಟ ದರ್ಶನ್ ಕ್ಯಾಮರಕ್ಕೆ ಮಿಡಲ್ ಫಿಂಗರ್ ತೋರಿಸಿದ್ದಾರೆ ಅಂತ ಇದೀಗ ಭಾರೀ ವಿವಾದ ಎಂಬಂತೆ ಸುದ್ದಿವಾಹಿನಿಗಳ ಆ್ಯಂಕರ್ ಗಳು ನಿನ್ನೆಯಿಂದ ಕಿರುಚಾಡುತ್ತಿದ್ದಾರೆ. ನೀವು ನಿಜವಾದ ಪತ್ರಕರ್ತರಾಗಿದ್ದರೆ, ಪ್ರತಿಕ್ರಿಯೆಗಳನ್ನ ಸ್ವೀಕರಿಸುವ ತಾಳ್ಮೆ ನಿಮ್ಮಲ್ಲಿ ಇರಬೇಕು. ಅದೇ ಮಾಧ್ಯಮ ಧರ್ಮ, ನೀವು ಏನು ಮಾಡಿದರೂ ಪ್ರಶ್ನೆ ಮಾಡುವಂತಿಲ್ಲ, ಮಾಧ್ಯಮಗಳನ್ನ ಪ್ರಶ್ನೆ ಮಾಡುವುದು ದೊಡ್ಡ ಅಪರಾಧ ಎಂಬಂತೆ ಬಿಂಬಿಸಿ ಜನರನ್ನು ತಪ್ಪು ದಾರಿಗೆ ತರುತ್ತಿದ್ದೀರಿ. ಸಂವಿಧಾನದಲ್ಲಿ ಸಾಮಾನ್ಯ ಪ್ರಜೆಗೆ ಎಷ್ಟು ಹಕ್ಕು ಇದೆಯೋ ಮಾಧ್ಯಮಗಳಿಗೂ ಅಷ್ಟೇ ಹಕ್ಕು ಇರೋದು. ಆದ್ರೆ ಮಾಧ್ಯಮ ಪ್ರಶ್ನಾತೀತ ಎನ್ನುವಂತೆ ಬಿಂಬಿಸ್ತಾ ಇರುವ ನ್ಯೂಸ್ ಆ್ಯಂಕರ್ ಗಳು ಜನರನ್ನ ತಪ್ಪು ದಾರಿಗೆ ಎಳೆಯುತ್ತಿರುವುದು ಎಷ್ಟು ಸರಿ? ಅಷ್ಟಕ್ಕೂ ದರ್ಶನ್ ಮಾಧ್ಯಮಗಳ ಕ್ಯಾಮರಕ್ಕೆ ಬೆರಳು ಎತ್ತಿ ತೋರಿಸಿಲ್ಲ, ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿಕೊಂಡು ನೋಡಿದ್ರು ಅನ್ನೋ ಹಾಗೆ, ದರ್ಶನ್ ಬೆರಳಿಗೆ ಯಾಕೆ ಸುದ್ದಿವಾಹಿನಿಗಳ ಆ್ಯಂಕರ್ ಗಳು ಬೆಚ್ಚಿಬೀಳಬೇಕಿತ್ತು?
ಅಷ್ಟಕ್ಕೂ ಸುದ್ದಿವಾಹಿನಿಯ ಆ್ಯಂಕರ್ ಗಳು “ಪತ್ರಕರ್ತರು ಮತ್ತು ಮಾಧ್ಯಮ” ಎಂಬ ಒಂದು ಉತ್ತಮ ವ್ಯವಸ್ಥೆಗೆ ಅವಮಾನ ಮಾಡುತ್ತಿದ್ದಾರೆ. ಅಲ್ಲೊಬ್ಬ ಕುಂಟೆ ಬಿಲ್ಲೆ ಆಡೋಣ ಬಾ ಅಂತ ಕರಿತಾನೆ, ಇಲ್ಲೊಬ್ಬ, ಹಾಕಬಾರದ ಜಾಗಕ್ಕೆ ಭಾರ ಹಾಕಿದ್ರಿ ಅಂತ ಹೆಚ್.ಡಿ.ರೇವಣ್ಣ ಕುಟುಂಬಕ್ಕೆ ಹೇಳುತ್ತಾನೆ, ದರ್ಶನ್ ಅನ್ನು ದನ ಅನ್ನುತ್ತಾನೆ, ಹೈವಾನ ಅನ್ನುತ್ತಾನೆ. ದರ್ಶನ್ ಕೇಸ್ ನ್ನು ಒಟ್ಟಾರೆಯಾಗಿ ತಮ್ಮ ಟಿಆರ್ ಪಿಗಾಗಿಯೇ ಬಳಕೆ ಮಾಡಲಾಗುತ್ತಿರುವುದು ವಾಸ್ತವದ ಸಂಗತಿ.
ನಟ ದರ್ಶನ್ ಜೈಲಿನೊಳಗೆ ಹೇಗೆ ನಡೆದುಕೊಂಡು ಬರಬೇಕು. ಕೈಯನ್ನು ಹೇಗೆ ಹಿಡಿದುಕೊಂಡು ಬರಬೇಕು. ಬೆರಳು ಮಡಚಿ ಹಿಡಿದುಕೊಂಡು ನಡೆಯಬೇಕು ಅಂತ ಜೈಲು ಅಧಿಕಾರಿಗಳ ರೂಲ್ಸ್ ಬುಕ್ ನಲ್ಲಿ ಸುದ್ದಿವಾಹಿನಿಗಳ ಆ್ಯಂಕರ್ ಗಳೆಲ್ಲರೂ ಸೇರಿಕೊಂಡು ಸೇರಿಸಿ ಬಿಟ್ಟರೆ ಉತ್ತಮ. ಆಗ ನೀವು ಬಯಸಿದಂತೆ ಆತ ನಡೆದುಕೊಂಡು ಬರಲು ಸಾಧ್ಯವಾಗಬಹುದು.
ನೋಟಿನಲ್ಲಿ ಚಿಪ್ ಇದೆ, ಹೆಲಿಕಾಫ್ಟರ್ ನಿಂದ ಹಣ ಸುರಿತಾರೆ ಅಂತ ಸುಳ್ಳು ಹೇಳಿ ಜನರನ್ನು ನಂಬಿಸಿದ ಸುದ್ದಿವಾಹಿನಿಗಳು ನೈತಿಕತೆಯ ಪಾಠ ಮಾಡ್ತಿವೆ. ಸುದ್ದಿವಾಹಿನಿಗಳ ಆ್ಯಂಕರ್ ಗಳೇ ಬ್ಲ್ಯಾಕ್ ಮೇಲ್ ಕೇಸ್ ಗಳಲ್ಲಿ ಸಿಕ್ಕಿ ಬೀಳುತ್ತಿದ್ದಾರೆ. ಅದು ‘ಸಭ್ಯ ದರ್ಶನ’ವೇ? ಮಾಧ್ಯಮಗಳ ಮುಖ್ಯಸ್ಥರು ಇನ್ನಾದರೂ ಎಚ್ಚೆತ್ತುಕೊಳ್ಳಲಿ, ಟಿಆರ್ ಪಿ ಟಾರ್ಗೆಟ್ ಗಾಗಿ ಅಸಂಬದ್ಧ ಜರ್ನಲಿಸಂ ನಡೆಸುವವರನ್ನು ತಮ್ಮ ಸಂಸ್ಥೆಯಿಂದ ಹೊರ ಹಾಕಲಿ, ಆ ಮೂಲಕ ಮಾಧ್ಯಮ ರಂಗಕ್ಕೆ ಇರುವ ಗೌರವವನ್ನು ಮತ್ತೆ ಸ್ಥಾಪಿಸಲು ಮುಂದಾಗಬೇಕಿದೆ. ಸುದ್ದಿ ನಿರೂಪಕರು, ಸುದ್ದಿ ನಿರೂಪಕರಾಗಿದ್ದರೆನೇ ಚಂದ, ಟ್ರೋಲರ್ಸ್ ಆದ್ರೆ, ಎರಡೂ ಅಲ್ಲದವರಂತೆ ಕಾಣುತ್ತದೆ ಎನ್ನುವ ವಾಸ್ತವವನ್ನ ಮಾಧ್ಯಮ ಮಾಲಿಕರು ಅರ್ಥ ಮಾಡಿಕೊಳ್ಳಬೇಕಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: