ಸೆ.15ರಂದು ಮಂಗಳೂರಿನಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ವೃತ್ತಕ್ಕೆ ಶಿಲಾನ್ಯಾಸ: ದಲಿತ ಸಮನ್ವಯ ಸಮಿತಿ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸಮಸ್ತ ದಂತ ಸಂಘಟನೆಗಳ ಸಮನ್ವಯ ಸಮಿತಿಯು ಕಳೆದ 30 ವರ್ಷಗಳಿಂದ ಸತತವಾಗಿ ನಡೆಸಿದ ಹೋರಾಟದ ಫಲವಾಗಿ ಶೋಷಿತರ ವಿಮೋಚನೆಗಾರ ಪ್ರಜಾಪ್ರಭುತ್ವದ ಹರಿಕಾರ, ವಿಶ್ವಜ್ಞಾನಿ ಭಾರತ ರತ್ನ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ವೃತ್ತ ನಿರ್ಮಾಣಕ್ಕೆ ಸಕಲ ಸಿದ್ಧತೆ ನಡೆಸಿ ಸೆಪ್ಟೆಂಬರ್ 15 ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ದಿನದಂದು ಶಂಕು ಸ್ಥಾಪನೆ ನಡೆಸಲು ನಗರ ಪಾಲಿಕೆಯು ನಿರ್ಧರಿಸಿದ್ದು, ದ.ಕ ಜಿಲ್ಲಾ ದಲಿತ ಸಂಘಟನೆಗಳ ಸಮನ್ವಯ ಸಮಿತಿಯು ಮುಕ್ತ ಮನಸ್ಸಿನಿಂದ ಸ್ವಾಗತಿಸಿ ಬೆಂಬಲಿಸಲಿದೆ ಎಂದು ಸಮನ್ವಯ ಸಮಿತಿಯು ತಿಳಿಸಿದೆ.
ನಗರದ ವುಡ್ ಲ್ಯಾಂಡ್ಸ್ ಹೋಟೇಲ್ ನಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಸಮಿತಿಯ ಪ್ರಧಾನ ಸಂಚಾಲಕರಾದ ಎಂ.ದೇವದಾಸ್ ಮಾತನಾಡುತ್ತಾ, 1994ರಲ್ಲಿ ಅಂದಿನ ಜಿಲ್ಲಾಧಿಕಾರಿಯಾಗಿದ್ದ ಭರತ್ ಲಾಲ್ ಮೀನಾರವರು ತಮ್ಮ ಸ್ವಂತ ಇಚ್ಛಾಶಕ್ತಿಯ ಮೂಲಕ ಕೆ.ಎಮ್.ಸಿ. ಆಸ್ಪತ್ರೆಯ ಬಳ ಜ್ಯೋತಿ ಜಂಕ್ಷನ್ ಅನ್ನು ಅಂಬೇಡ್ಕರ್ ವೃತ್ತವೆಂದು ನಾಮಕರಣವಾಗಲು ಕಾರಣವಾಗಿದ್ದರು. ದಲಿತ ಸಂಘಟನೆಗಳು ಆ ಸಂದರ್ಭದಲ್ಲಿ ನಡೆಸಿದ ಹಕ್ಕೊತ್ತಾಯ ಪ್ರತಿಧ್ವನಿಗೆ ಸೂಕ್ತ ಮನ್ನಣೆ ದೊರಕಿ ನಗರ ಪಾಲಿಕೆಗೆ ವೃತ್ತ ನಿರ್ಮಾಣದ ಮುಂದಿನ ಕೆಲಸ ಕಾರ್ಯಗಳನ್ನು ನಡೆಸಲು ಸೂಕ್ತ ನಿರ್ದೇಶನ ನೀಡಲಾಗಿತ್ತು.
ತಾಂತ್ರಿಕ ಕಾರಣ ನೀಡಿ ಹಾಗೂ ಕುಂಟು ನೆಪವೊಡ್ಡಿ ವಿಳಂಭ ಮಾಡಿರುವ ಬಗ್ಗೆ ಪರಿಶಿಷ್ಟ ಜಾತಿ/ಪಂಗಡಗಳ ಹಲವಾರು ಕುಂದು ಕೊರತೆ ಸಭೆಗಳಲ್ಲಿ ದಲಿತ ಸಂಘಟನೆಗಳು ನಿರಂತರವಾಗಿ ಒತ್ತಾಯ ಹೋರಾಟಗಳನ್ನು ನಡೆಸಿದ ಪರಿಣಾಮವಾಗಿ ಇಂದು ನ್ಯಾಯ ದೊರಕಿದಂತಾಗಿದೆ. ಮಾತ್ರವಲ್ಲದೇ ಇದು ಈ ನಾಡಿನ ಸಮಸ್ತ ಜನತೆಗೆ ದೊರೆತಿರುವ ಪ್ರತಿಫಲವಾಗಿದೆ ಎಂದು ಸಮನ್ವಯ ಸಮಿತಿಯು ತಿಳಿಸಿದೆ.
ಪ್ರಪ್ರಥಮವಾಗಿ ಅಂಬೇಡ್ಕರ್ ವೃತ್ತ ನಾಮಕರಣ ಮಾಡಲು ಶ್ರಮಿಸಿದ ಮಾಜಿ ಜಿಲ್ಲಾಧಿಕಾರಿ ಭರತ್ ಲಾಲ್ ಮೀನಾರವರಿಗೆ ಸಂಘಟನೆಯು ಹೃದಯಸ್ಪರ್ಶಿ ಅಭಿನಂದನೆ ಸಲ್ಲಿಸಿದೆ. ವೃತ್ತ ನಿರ್ಮಾಣದ ಕಾರ್ಯಕ್ಕೆ ಮುಂದೆ ಬಂದಿರುವ ನಗರ ಪಾಲಿಕೆ ಹಾಗೂ ಮಂಗಳೂರು ಸ್ಮಾರ್ಟ್ ಸಿಟಿ ಇಲಾಖೆಯ ಕಾರ್ಯವನ್ನು ದ.ಕ ಜಿಲ್ಲಾ ದಲಿತ ಸಂಘಟನೆಗಳ ಸಮನ್ವಯ ಸಮಿತಿಯು ಸ್ವಾಗತಿಸಿ ಗೌರವಿಸಿ ಬೆಂಬಲಿಸಲಿದೆ ಎಂದು ತಿಳಿಸಿದ್ದಾರೆ.
ಇದೇ ಬರುವ 15 ರಂದು ನಡೆಯಲಿರುವ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯಂದು ನಗರ ಪಾಲಿಕೆಯು ಗುದ್ದಲಿ ಪೂಜೆಯನ್ನು ನಡೆಸಲು ತೀರ್ಮಾನಿಸಿದ್ದು, ಪ್ರಜಾಪ್ರಭುತ್ವ ಪ್ರೇಮಿಗಳು, ಶೋಷಿತರು, ಸಮಸ್ತ ಮಂಗಳೂರಿನ ಜನತೆ ಈ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕೆಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ದಲಿತ ಮುಖಂಡರುಗಳಾದ ಎಂ.ದೇವದಾಸ್, ರಮೇಶ್ ಕೋಟ್ಯಾನ್, ಅಶೋಕ್ ಕೊಂಚಾಡಿ, ಚಂದ್ರ ಕುಮಾರ್, ರಮೇಶ್ ಕಾವೂರು, ಶೇಖರ್ ಚಿಲಿಂಬಿ, ಸುಧಾಕರ್ ಬೋಳೂರು, ಎಸ್.ಪಿ ಆನಂದ, ರಘು ಕೆ ಎಕ್ಕಾರ್, ಸರೋಜಿನಿ ಬಂಟ್ವಾಳ, ದಿನೇಶ್ ಮೂಳೂರು, ಜನ್ನಪ್ಪ ಬಂಗೇರ, ಸುಂದರ ಮೇರ, ಗಣೇಶ್ ಸೂಟರ್‌ಪೇಟೆ, ಗಿರೀಶ್, ಉಳ್ಳಾಲ್ ಮೊದಲಾದವರು ಉಪಸ್ಥಿತರಿದ್ದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: