ಮುಂಬೈನಲ್ಲಿ ಭಾರಿ ಮಳೆ: ಪ್ರಯಾಣಿಕರು ಸಂಕಷ್ಟದಲ್ಲಿ; ಇಂದು ಶಾಲಾ-ಕಾಲೇಜುಗಳಿಗೆ ರಜೆ
ಮುಂಬೈನಲ್ಲಿ ಬುಧವಾರದಿಂದ ಭಾರೀ ಮಳೆ ಆಗುತ್ತಿದ್ದು, ನಗರದಾದ್ಯಂತ ಅನೇಕ ಸಮಸ್ಯೆಗಳು ಉಂಟಾಗಿವೆ. ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಸ್ಥಳೀಯ ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗಿದ್ದು ಹಲವಾರು ವಿಮಾನಗಳನ್ನು ಬೇರೆಡೆಗೆ ತಿರುಗಿಸಲಾಗಿದೆ. ಕೆಲವು ಪ್ರದೇಶಗಳಲ್ಲಿ ಕೇವಲ ಐದು ಗಂಟೆಗಳಲ್ಲಿ 100 ಮಿ.ಮೀ.ಗಿಂತ ಹೆಚ್ಚು ಮಳೆಯಾಗಿದೆ ಎಂದು ವರದಿಗಳು ಸೂಚಿಸಿವೆ. ಇದು ತೀವ್ರ ಜಲಾವೃತ ಮತ್ತು ಸಂಚಾರ ದಟ್ಟಣೆಗೆ ಕಾರಣವಾಯಿತು.
ಭಾರತ ಹವಾಮಾನ ಇಲಾಖೆ (ಐಎಂಡಿ) ಮುಂಬೈ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಿದೆ. ಹೀಗಾಗಿ ಇಂದು ಎಲ್ಲಾ ಶಾಲೆಗಳು ಮತ್ತು ಕಾಲೇಜುಗಳನ್ನು ದಿನವಿಡೀ ಮುಚ್ಚಲು ಆದೇಶಿಸಲಾಗಿದೆ.
ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಮಾಹಿತಿಯ ಪ್ರಕಾರ, ದ್ವೀಪ ನಗರದಲ್ಲಿ 87.79 ಮಿ.ಮೀ, ಪೂರ್ವ ಉಪನಗರಗಳಲ್ಲಿ 167.48 ಮಿ.ಮೀ ಮತ್ತು ಪಶ್ಚಿಮ ಉಪನಗರಗಳಲ್ಲಿ ಸಂಜೆ 5 ರಿಂದ ರಾತ್ರಿ 10 ರವರೆಗೆ 95.57 ಮಿ.ಮೀ ಮಳೆಯಾಗಿದೆ. ಪೂರ್ವ ಉಪನಗರಗಳ ಮನ್ಖುರ್ದ್ ಪ್ರದೇಶದಲ್ಲಿ 276 ಮಿ.ಮೀ, ಭಾಂಡೂಪ್ನಲ್ಲಿ 275 ಮಿ.ಮೀ ಮತ್ತು ಪೊವಾಯಿಯಲ್ಲಿ 274 ಮಿ.ಮೀ ಮಳೆಯಾಗಿದೆ. ದ್ವೀಪ ನಗರದಲ್ಲಿ, ಸೆವ್ರಿ ಕೊಲಿವಾಡಾ ಮತ್ತು ವಡಾಲಾದಲ್ಲಿ 145 ಮಿ.ಮೀ.ಗಿಂತ ಹೆಚ್ಚು ಮಳೆಯಾಗಿದೆ, ಪಶ್ಚಿಮ ಉಪನಗರಗಳಲ್ಲಿ ಗರಿಷ್ಠ 190 ಮಿ.ಮೀ. ಮಳೆಯಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth