ರಸ್ತೆಯಿಲ್ಲ: ವೃದ್ಧೆಯನ್ನು 3 ಕಿ.ಮೀ. ದೂರ ಹೊತ್ತೊಯ್ದ ಗ್ರಾಮಸ್ಥರು!
ಚಿಕ್ಕಮಗಳೂರು: ಅನಾರೋಗ್ಯ ಪೀಡಿತ ವೃದ್ಧೆಯನ್ನ ಮಲೆನಾಡಿಗರು 3 ಕಿ.ಮೀ. ಹೊತ್ತುಕೊಂಡು ಬಂದಿರುವ ಘಟನೆ ನಡೆದಿದ್ದು, ರಸ್ತೆ ಇಲ್ಲದ ಕಾರಣ ತೂಗುಸೇತುವೆ ಮೇಲೆ ವೃದ್ಧೆಯನ್ನು ಎತ್ತಿಕೊಂಡು ಹಳ್ಳಿಗರು ಸಾಗಿದರು.
ಕಳಸ ತಾಲೂಕಿನ ಸಂಸೆ ಗ್ರಾಪಂ ವ್ಯಾಪ್ತಿಯ ನೆಲ್ಲಿಬೀಡು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಲಕ್ಷ್ಮಿ ಎಂಬ 70ರ ವೃದ್ಧೆ ಅನಾರೋಗ್ಯ ಪೀಡಿತರಾಗಿ ಹಾಸಿಗೆ ಹಿಡಿದಿದ್ದರು. ಅವರನ್ನು ಆಸ್ಪತ್ರೆಗೆ ಸಾಗಿಸಲು ಕುಟುಂಬಸ್ಥರು ಹಾಗೂ ಸ್ಥಳೀಯರು ಪರದಾಡುವಂತಾಗಿತ್ತು. ರಸ್ತೆಯಿಲ್ಲದ ಕಾರಣ ಭದ್ರಾ ನದಿಗೆ ನಿರ್ಮಿಸಿರುವ ತೂಗು ಸೇತುವೆ ಮೇಲೆಯೇ ಹಳ್ಳಿಗರು ವೃದ್ಧೆಯನ್ನು ಹೊತ್ತು ಸಾಗಿದರು.
ನೆಲ್ಲಿಬೀಡು, ಅಜ್ಜಿಗದ್ದೆ, ಆರೋಳ್ಳಿ, ಕಟ್ಟೆಮನೆ, ಕೋಣೆಮನೆ ಸೇರಿ 10ಕ್ಕೂ ಹೆಚ್ಚು ಹಳ್ಳಿಗೆ ರಸ್ತೆ ಇಲ್ಲ, ದಶಕಗಳಿಂದಲೂ ಭದ್ರಾ ನದಿಯ ತೂಗು ಸೇತುವೆ ಮೇಲೆ ಜನರ ಜೀವನ ಸಾಗುತ್ತಿದೆ. ಹಳ್ಳಿಯಿಂದ ಮುಖ್ಯ ರಸ್ತೆಗೆ ಬರಲು 3 ಕಿ.ಮೀ. ಸಾಗಬೇಕು. ಬೇಸಿಗೆಯಲ್ಲಿ ಭದ್ರೆಯ ಒಡಲಲ್ಲೇ ಗಾಡಿಗಳು ಓಡಾಡುತ್ವೆ, ಮಳೆಗಾಲದಲ್ಲಿ ಆಗಲ್ಲ.
ಭದ್ರಾ ನದಿಗೆ ಸೇತುವೆ ನಿರ್ಮಿಸಿಕೊಡುವಂತೆ ಹಳ್ಳಿಗರು 7 ದಶಕಗಳಿಂದ ಮನವಿ ಮಾಡುತ್ತಲೇ ಇದ್ದಾರೆ. ಆದ್ರೆ ದಪ್ಪ ಚರ್ಮದ ಕಿವಿಯ ಅಧಿಕಾರಿಗಳಿಗೆ ಹಳ್ಳಿಗರ ಕೂಗು, ಸಂಕಷ್ಟ ಕೇಳುತ್ತಿಲ್ಲ. ಸ್ವಾತಂತ್ರ್ಯ ಬಂದು 75 ವರ್ಷ ಕಳೆದು ಸಾಗುತ್ತಿದ್ದೇವೆ. ಅಮೃತಮಹೋತ್ಸವವನ್ನೂ ಆಚರಿಸಿದ್ದೇವೆ. ಆದ್ರೆ, ಯಾವ ಪಕ್ಷ ಅಧಿಕಾರಕ್ಕೆ ಬಂದರೂ ಕೂಡ ಈ ಹಳ್ಳಿಗರ ನೋವು ಕೇಳುವವರಿಲ್ಲ, ಇಲ್ಲಿನ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ನಾಚಿಕೆಯಾಗಬೇಕು. ಇಷ್ಟು ವರ್ಷಗಳಿಂದಲೂ ಜನರ ಸಂಕಷ್ಟ ಕೇಳದ ಇವರೆಲ್ಲ ಯಾವ ಸೀಮೆಯ ಅಧಿಕಾರಿಗಳು, ಯಾವ ಸೀಮೆಯ ಜನಪ್ರತಿನಿಧಿಗಳು ಅನ್ನೋ ಉತ್ತರವಿಲ್ಲದ ಆಕ್ರೋಶದ ಪ್ರಶ್ನೆಗಳು ಕೇಳಿ ಬಂದಿವೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/JItjEWZ9e5fBWDL6CkTr97