ಎಚ್ಚರ ಇರಲಿ: ಜ್ವರ, ತಲೆನೋವಿಗೆ ಸೇವಿಸಿದ ಪ್ಯಾರಸಿಟಮಲ್ ಮಾತ್ರೆ ಕಳಪೆಯಾಗಿರಬಹುದು..!
ನೀವು ಜ್ವರ, ತಲೆನೋವಿಗೆ ಇತ್ತೀಚೆಗೆ ಸೇವಿಸಿದ ಪ್ಯಾರಸಿಟಮಲ್ ಮಾತ್ರೆ ಕಳಪೆಯಾಗಿರಬಹುದು. ಮಧುಮೇಹ, ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ನುಂಗಿದ ಮಾತ್ರೆಗಳೂ ಕಳಪೆ ಗುಣಮಟ್ಟದ್ದಾಗಿರಬಹುದು! ಅಷ್ಟೇ ಏಕೆ, ವಿಟಮಿನ್ ಮಾತ್ರೆಗಳು, ಕ್ಯಾಲ್ಶಿಯಂ ಮಾತ್ರೆಗಳೂ ಬಳಕೆಗೆ ಅನರ್ಹವಾಗಿರಬಹುದು.
ದೇಶದ ಪ್ರಮುಖ ಫಾರ್ಮಾ ಕಂಪನಿಗಳ 53 ಔಷಧಗಳು ಸರಕಾರದ ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾಗಿವೆ. ಇವೆಲ್ಲಾ ಬಹುತೇಕ ಮಂದಿ ಸೇವಿಸುವ ಔಷಧಿಗಳೇ ಆಗಿವೆ ಎಂಬುದ ಆತಂಕದ ಸಂಗತಿಯಾಗಿದೆ.
‘ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ’ಯು ಕಳೆದ ತಿಂಗಳು ‘ಗುಣಮಟ್ಟ ವಿಫಲವಾದ ಔಷಧ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ 53 ಔಷಧಗಳ ಬಗ್ಗೆ ಅಲರ್ಟ್ ನೀಡಿದೆ. ಪ್ರಯೋಗಾಲಯಗಳಲ್ಲಿ ಮಾಸಿಕ ನಡೆಸುವ ರಾಂಡಮ್ ಸ್ಯಾಂಪಲ್ ಪರೀಕ್ಷೆ ವೇಳೆ ಈ ವಿಚಾರ ಬಯಲಾಗಿದೆ. ಆದರೆ ಫಾರ್ಮಾ ಕಂಪನಿಗಳು ಮಾತ್ರ ಇದು ಅಸಲಿ ಔಷಧಗಳಲ್ಲ, ಅಸಲಿ ಹೆಸರಿನಲ್ಲಿ ಮಾರುಕಟ್ಟೆಯಲ್ಲಿರುವ ನಕಲಿ ಔಷಧಿಗಳು ಎಂದು ಸ್ಪಷ್ಟನೆ ನೀಡಿವೆ.
ವಿಟಮಿನ್ ಸಿ ಮತ್ತು ಡಿ3 ಮಾತ್ರೆಗಳಾದ ‘ಶೆಲ್‌ಕಾಲ್’, ‘ಬಿ ಕಾಂಪ್ಲೆಕ್ಸ್’ ಮತ್ತು ವಿಟಮಿನ್ ಸಿ ಮಾತ್ರೆಗಳು, ಅಸಿಡಿಟಿಗೆ ಬಳಸುವ ‘ಪ್ಯಾನ್-ಡಿ’, ‘ಪ್ಯಾರಾಸಿಟಮಲ್ ಐಪಿ 500 ಎಂಜಿ’ ಮಾತ್ರೆಗಳು, ಮಧುಮೇಹ ನಿಯಂತ್ರಕ ಮಾತ್ರೆ ‘ಗ್ಲಿಮೆಪಿರೈಡ್’, ಅಧಿಕ ರಕ್ತದೊತ್ತಡ ನಿಯಂತ್ರಕ ಮಾತ್ರೆ ‘ಟೆಲ್ಮಿಸಾರ್ಟನ್’, ಆಂಟಿಬಯೋಟಿಕ್ ಔಷಧಗಳಾದ ‘ಮೆಟ್ರೋನಿಡಜೋಲ್’ ಮತ್ತು ಕ್ಲಾವಮ್’, ಪಿತ್ತಜನಕಾಂಗದ ಕಲ್ಲು ಕರಗಿಸಲು ನೀಡುವ ಮಾತ್ರೆ ‘ಉರ್ಸೊಕಲ್’, ಮಕ್ಕಳಲ್ಲಿ ಬ್ಯಾಕ್ಟೀರಿಯಾ ಸೋಂಕಿಗೆ ನೀಡಲಾಗುವ ‘ಸೆಪೋಡೆಮ್ ಎಕ್ಸ್‌ಪಿ’ ಸಿರಪ್ ಮುಂತಾದ ಔಷಧಗಳು ಈ ಪಟ್ಟಿಯಲ್ಲಿವೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth