ಮಂಗಳೂರು: ಪೂನಾ ಒಪ್ಪಂದ ವಿಚಾರ ಸಂವಾದ ಕಾರ್ಯಕ್ರಮ | ಏನಿದು ಪೂನಾ ಒಪ್ಪಂದ?
ಮಂಗಳೂರು: ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ ) ಸ್ವಾಭಿಮಾನಿ ಪ್ರೊ.ಬಿ.ಕೃಷ್ಣಪ್ಪ ದ.ಕ. ಜಿಲ್ಲಾ ಸಮಿತಿ ಹಾಗೂ ಮಂಗಳೂರು ತಾಲೂಕು ಸಮಿತಿಯ ಸಂಯುಕ್ತ ನೇತೃತ್ವದಲ್ಲಿ 1932 ಸೆಪ್ಟೆಂಬರ್ 24ರ “ಪೂನಾ ಒಪ್ಪಂದ”ದ ವಿಚಾರ ಸಂವಾದ ಕಾರ್ಯಕ್ರಮವನ್ನು 29–09–2024 ರವಿವಾರ ಬಜ್ಪೆ ಸಿದ್ಧಾರ್ಥನಗರದ ಸಾಮ್ರಾಟ್ ಅಶೋಕ ಚಕ್ರವರ್ತಿ ಸಭಾಂಗಣದಲ್ಲಿ ದ.ಸಂ.ಸ. ಜಿಲ್ಲಾ ಸಂಚಾಲಕರಾದ ರಘು ಕೆ. ಎಕ್ಕಾರು ಇವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.
ದಲಿತ ಕಲಾ ಮಂಡಳಿ ಮಂಗಳೂರು ತಾಲೂಕು ಸಂಚಾಲಕರಾದ ಗಂಗಾಧರ್ ಸಾಲ್ಯಾನ್ ರವರು ಡಾ.ಬಿ. ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ದೀಪ ಬೆಳಗಿಸುವ ಮೂಲಕ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮಂಗಳೂರು ವಿಶ್ವ ವಿದ್ಯಾಲಯದ ಸಮಾಜ ಶಾಸ್ತ್ರ ವಿಭಾಗದ ಉಪನ್ಯಾಸಕರಾದ ಗೋವಿಂದರಾಜ್ ರವರು ವಿಚಾರ ಮಂಡನೆ ಮಾಡಿ ಡಾ.ಬಿ.ಆರ್.ಅಂಬೇಡ್ಕರ್ ರವರು “ಭಾರತ ದೇಶದಲ್ಲಿ ಶೋಷಿತ ಸಮುದಾಯಗಳು ಹಲವಾರು ವರುಷಗಳಿಂದ ಅನುಭವಿಸುತ್ತಿದ್ದ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ರಾಜಕೀಯ ಹಾಗೂ ಇನ್ನಿತರ ಹಲವಾರು ಗಂಭೀರ ವಿಚಾರಗಳ ಬಗ್ಗೆ ದಾಖಲೆ ಸಮೇತ ಲಂಡನ್ ನಲ್ಲಿ ನಡೆದ ಮೊದಲನೇ ದುಂಡು ಮೇಜಿನ ಪರಿಷತ್ತಿನಲ್ಲಿ ಸೈಮನ್ ಕಮಿಷನ್ ಎದುರು ಬಲವಾಗಿ ಪ್ರತಿಪಾದನೆ ಮಾಡಿ ಶೋಷಿತರಿಗೆ ಪ್ರತ್ಯೇಕ ಎರಡು ಮತದಾನದ ಹಕ್ಕನ್ನು ಮಂಡಿಸುತ್ತಾರೆ.
ಸಾಮಾನ್ಯ ಪ್ರತಿನಿಧಿ ಹಾಗೂ ಶೋಷಿತ ಸಮುದಾಯದ ಜನರಿಂದಲೇ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಅವಶ್ಯಕತೆಯನ್ನು ಮನದಟ್ಟು ಮಾಡುತ್ತಾರೆ. ಆ ಮೂಲಕ ಅವರು ಸಾಮಾನ್ಯ ವರ್ಗಗಳ ಯಾವುದೇ ಆಮಿಷ, ಪ್ರಭಾವ, ಒತ್ತಡ ಅಥವಾ ಅಂಕುಷಗಳಿಗೆ ಒಳಪಡದೆ ನೇರವಾಗಿ ತಮ್ಮ ಸಮುದಾಯದ ಪರವಾಗಿ ನಿಲ್ಲಬಲ್ಲರು ಎಂದು ವಾದಿಸುತ್ತಾರೆ. ಅಂಬೇಡ್ಕರ್ ರವರ ವಾದವನ್ನು ಒಪ್ಪಿಕೊಂಡ ಬ್ರಿಟಿಷ್ ಸರಕಾರವು ಮುಂದಿನ ಅಧಿವೇಶನದಲ್ಲಿ ಈ ಬಗ್ಗೆ ಅಂತಿಮ ನಿರ್ಧಾರಕ್ಕೆ ಬರುವ ಬಗ್ಗೆ ನಿರ್ಧರಿಸುತ್ತದೆ. ಆದರೆ ಎರಡನೇ ಅಧಿವೇಶನದಲ್ಲಿ ಭಾಗವಹಿಸಿದ ಗಾಂಧೀಜಿಯವರು ಅಂಬೇಡ್ಕರ್ ರವರು ಮಂಡಿಸಿದ ಎರಡು ಪ್ರತ್ಯೇಕ ಮತದಾನದ ಹಕ್ಕನ್ನು ಬಲವಾಗಿ ವಿರೋಧಿಸುತ್ತಾರೆ ಎಂದರು.
ಒಂದು ವೇಳೆ ಭಾರತದಲ್ಲಿ ಶೋಷಿತರಿಗೆ ಪ್ರತ್ಯೇಕ ಮತದಾನದ ಹಕ್ಕನ್ನು ನೀಡಿದರೆ ಶೋಷಿತರು ಧಾರ್ಮಿಕವಾಗಿ ಪ್ರತ್ಯೇಕವಾಗುತ್ತಾರೆ, ಇದು ದೇಶದ ಒಗ್ಗಟ್ಟಿಗೆ ಮಾರಕವಾಗುತ್ತದೆ. ಅಂಬೇಡ್ಕರ್ ರವರ ಈ ನಡೆ ದೇಶವನ್ನು ವಿಭಜಿಸುವ ದೇಶ ದ್ರೋಹಿಯಾಗಿದೆ. ಯಾವುದೇ ಕಾರಣಕ್ಕೂ ನಾನು ಅಂಬೇಡ್ಕರ್ ರವರ ಪ್ರತ್ಯೇಕ ಮತದಾನದ ಬೇಡಿಕೆಯನ್ನು ಒಪ್ಪುವುದಿಲ್ಲ. ಅದರ ಬದಲಾಗಿ ಶೋಷಿತರಿಗೆ ಮೀಸಲು ಕ್ಷೇತ್ರದ ಅವಕಾಶವನ್ನು ನೀಡುವ ಬಗ್ಗೆ ಗಾಂಧೀಜಿಯವರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಆದರೆ ಬ್ರಿಟಿಷ್ ಕಮಿಷನ್ ಗಾಂಧೀಜಿಯವರ ವಾದವನ್ನು ಒಪ್ಪದೆ ಅಂಬೇಡ್ಕರ್ ರವರ ಕೋರಿಕೆಯನ್ನು ಅನುಮೋದಿಸುತ್ತದೆ ಎಂದು ತಿಳಿಸಿದರು.
ಇದರಿಂದ ಚಿಂತಾಕ್ರಾಂತರಾದ ಗಾಂಧೀಜಿಯವರು ಅಂಬೇಡ್ಕರ್ ರವರ ಬೇಡಿಕೆಯನ್ನು ವಿರೋಧಿಸಿ 1932 ಸೆಪ್ಟೆಂಬರ್ 19 ರಂದು ಪೂನಾದ ಯರವಾಡ ಜೈಲಿನಲ್ಲಿ ಅಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಳ್ಳುತ್ತಾರೆ. ಆದರೆ ಗಾಂಧೀಜಿಯವರ ಉಪವಾಸ ಸತ್ಯಾಗ್ರಹದ ಗೊಡ್ಡು ಬೆದರಿಕೆಗಳಿಗೆ ಅಂಬೇಡ್ಕರ್ ರವರು ಜಗ್ಗದೆ ಶೋಷಿತ ಸಮುದಾಯಗಳ ಪರವಾಗಿನ ತನ್ನ ನಿಲುವಿಗೆ ಬದ್ಧರಾಗುತ್ತಾರೆ. ಇದರಿಂದಾಗಿ ಇಡೀ ದೇಶದಲ್ಲಿ ಅಂಬೇಡ್ಕರ್ ವಿರುದ್ಧ ಗಾಂಧೀಜಿ ಅನುಯಾಯಿಗಳು ಸಿಡಿದೆದ್ದು, ಶೋಷಿತ ಸಮುದಾಯಗಳ ಕೇರಿ ಕೇರಿಗಳಲ್ಲಿ ಮನೆಗಳಿಗೆ ಬೆಂಕಿ ಹಚ್ಚುವ, ಹಲ್ಲೆ, ದೌರ್ಜನ್ಯ, ದಬ್ಬಾಳಿಕೆಗಳು ಗಾಂಧೀಜಿಯವರ ಅನುಯಾಯಿಗಳಿಂದ ನಿರಂತರವಾಗಿ ನಡೆಯುತ್ತದೆ. ಇದನ್ನೆಲ್ಲಾ ಕಣ್ಣಾರೆ ಕಂಡ ಅಂಬೇಡ್ಕರ್ ರವರು ಅತ್ಯಂತ ವಿಷಾದದಿಂದ ಕೊನೆಗೆ ಅನಿವಾರ್ಯವಾಗಿ ಸೆಪ್ಟೆಂಬರ್ 24 ರಂದು “ಪೂನಾ ಒಪ್ಪಂದ ” ಕ್ಕೆ ಸಹಿ ಹಾಕುತ್ತಾರೆ ಎಂದು ಅವರು ತಿಳಿಸಿದರು.
ಈ ಒಪ್ಪಂದದ ಪ್ರಕಾರ ಶೋಷಿತರಿಗೆ ಎರಡು ಪ್ರತ್ಯೇಕ ಮತದಾನದ ಹಕ್ಕಿನ ಬದಲು ಮೀಸಲು ಕ್ಷೇತ್ರವನ್ನು ನೀಡುತ್ತಾರೆ. ಈ ಕರಾಳ ಒಪ್ಪಂದವೇ ಶೋಷಿತರ ಇಂದಿನ ರಾಜಕೀಯ ದುಸ್ಥಿತಿಗೆ ಕಾರಣವಾಗಿದೆ. ಒಂದು ವೇಳೆ ಶೋಷಿತರಿಗೆ ಪ್ರತ್ಯೇಕ ಎರಡು ಮತದಾನದ ಹಕ್ಕು ಸಿಗುತ್ತಿದ್ದರೆ ಇಷ್ಟೋತ್ತಿಗೆ ಸ್ವಾಭಿಮಾನದಿಂದ ತಮ್ಮ ಹಕ್ಕನ್ನು ಕೇಳುವಂತಾಗಬಹುದಿತ್ತು. ಆದರೆ ಮೀಸಲು ಕ್ಷೇತ್ರದಿಂದ ಆಯ್ಕೆಯಾಗಿ ಹೋದ ನಮ್ಮ ಜನಪ್ರತಿನಿಧಿಗಳು ಎತ್ತಿಗೆ ಹಾಕಿದ ಮೂಗುದಾರದ ಹಾಗೇ ರಾಜಕೀಯ ಪಕ್ಷಗಳ ಮೂಗುದಾರಗಳಿಗೆ ಒಳಪಟ್ಟು, ಸ್ವಾಭಿಮಾನ ಕಳೆದುಕೊಂಡು ಪಕ್ಷದ ಗುಲಾಮಗಿರಿಯಲ್ಲಿ ಸಿಲುಕಿಕೊಂಡು ತಮ್ಮ ಸಮುದಾಯಗಳ ಪರವಾಗಿ ಧ್ವನಿ ಎತ್ತದೆ ಅಂಬೇಡ್ಕರ್ ರವರ ಆಶಯಗಳಿಗೆ ವಿರುದ್ಧವಾಗಿದ್ದರೆ ಎಂದರು.
ಕಾರ್ಯಕ್ರಮದ ವೇದಿಕೆಯಲ್ಲಿ ಜಿಲ್ಲಾ ಮಹಿಳಾ ಸಂಚಾಲಕಿ ಸರೋಜಿನಿ ಬಂಟ್ವಾಳ, ಮಂಗಳೂರು ತಾಲೂಕು ಸಂಚಾಲಕರಾದ ರವಿ. ಎಸ್. ಪೇಜಾವರ, ಸಿದ್ಧಾರ್ಥನಗರ ಗ್ರಾಮ ಸಂಚಾಲಕರಾದ ಚಂದ್ರಶೇಖರ್, ನಾಗೇಶ್ ಚಿಲಿಂಬಿ, ರುಕ್ಕಯ್ಯ ಕರಂಬಾರು, ರಾಜಯ್ಯ ಮಂಗಳೂರು, ಬಾಲು ಕುಂದರ್, ಕೃಷ್ಣಾನಂದ, ಸುರೇಶ್ ಬೆಳ್ಳಾಯರ್ ಮುಂತಾದವರು ಉಪಸ್ಥಿತರಿದ್ದರು. ಮಂಗಳೂರು ತಾಲೂಕು ಸಂಘಟನಾ ಸಂಚಾಲಕ ಕೃಷ್ಣ ಕೆ. ಎಕ್ಕಾರು ಕಾರ್ಯಕ್ರಮ ನಿರ್ವಹಿಸಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: