ಕಲುಶಿತ ನೀರು ಕುಡಿದು ಓರ್ವ ದಾರುಣ ಸಾವು | 10 ಮಂದಿ ತೀವ್ರ ಅಸ್ವಸ್ಥ
ಕೋಲ್ಕತ್ತಾ: ಕಲುಶಿತ ನೀರು ಕುಡಿದು ವ್ಯಕ್ತಿಯೋರ್ವ ಸಾವನ್ನಪ್ಪಿ, 10 ಮಂದಿ ಗಂಭೀರ ಸ್ಥಿತಿಯಲ್ಲಿರುವ ಘಟನೆ ಭವಾನಿಪುರದ ಕೆಎಂಸಿ ಲೇಬರ್ ಕ್ವಾರ್ಟರ್ಸ್ ನಲ್ಲಿ ನಡೆದಿದ್ದು, ಕೊಳಚೆ ನೀರಿನಿಂದ ನೀರು ಕಲುಶಿತವಾಗಿತ್ತು ಎಂದು ಹೇಳಲಾಗಿದೆ.
43 ವರ್ಷ ವಯಸ್ಸಿನ ಭುವನೇಶ್ವರ್ ದಾಸ್ ಎಂಬವರು ಮೃತಪಟ್ಟವರಾಗಿದ್ದು, ಕೊಳಚೆ ನೀರು ಕುಡಿಯುವ ನೀರಿನಲ್ಲಿ ಬೆರೆತು ಕಲುಶಿತವಾಗಿತ್ತು ಎಂದು ಹೇಳಲಾಗಿದೆ. ಆದರೆ ಇದು ಹೇಗೆ ನಡೆದಿದೆ ಎನ್ನುವುದು ಗೊತ್ತಿಲ್ಲ. ಕೊಳಚೆ ನೀರು ಹರಿಯುತ್ತಿರುವ ಪ್ರದೇಶದಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಹಾದು ಹೋಗಿರಬಹುದು, ಅಲ್ಲಿ ಪೈಪ್ ಒಡೆದು ಹೋಗಿ ಕಲುಶಿತ ನೀರು ಮಿಶ್ರಣವಾಗಿರುವ ಸಾಧ್ಯತೆಗಳಿವೆ ಎಂದು ಶಂಕೆ ವ್ಯಕ್ತಪಡಿಸಲಾಗಿದೆ.
ಕೋಲ್ಕತ್ತಾ ಮುನ್ಸಿಪಲ್ ಕಾರ್ಪೋರೇಶನ್ ನ ಕಾರ್ಮಿಕರ ಕ್ವಾರ್ಟರ್ಸ್ ನಲ್ಲಿ ವಾಸವಿರುವ ಜನರು ಕೊಳಚೆ ನೀರಿನಿಂದ ಕಲುಷಿತಗೊಂಡ ನೀರನ್ನು ಸೇವಿಸಿದ್ದಾರೆ. ಇದರ ಪರಿಣಾಮ ಈಗ ಓರ್ವ ಸಾವನ್ನಪ್ಪಿದ್ದು, ಇತರ ಕಾರ್ಮಿಕರು ತೀವ್ರವಾಗಿ ಅಸ್ವಸ್ಥರಾಗಿದ್ದಾರೆ. ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇನ್ನೂ ಕಲುಶಿತ ನೀರು ಸರಬರಾಜಾಗಿರುವ ಹಿನ್ನೆಲೆಯಲ್ಲಿ ಈ ಪ್ರದೇಶದ ಜನರಿಗೆ ಕುಡಿಯುವ ನೀರಿಗಾಗಿ ಬೇರೆ ವ್ಯವಸ್ಥೆ ತಾತ್ಕಾಲಿಕವಾಗಿ ಮಾಡಿಕೊಡಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಇಲಾಖೆ ಅಧಿಕಾರಿಗಳಿಂದ ವರದಿ ಕೇಳಿರುವುದಾಗಿ ವಾರ್ಡ್ ಕಾರ್ಪೋರೇಟರ್ ರತನ್ ಮಲಾಕರ್ ತಿಳಿಸಿದ್ದಾರೆ.