ಅಪ್ರಾಪ್ತ ವಯಸ್ಸಿನ ದಲಿತ ಬಾಲಕರ ಕೈಗಳನ್ನು ಕಟ್ಟಿ ಹಾಕಿ 4 ಕಿ.ಮೀ. ನಡೆಸಿದ ದುಷ್ಟರು!
ನವದೆಹಲಿ: ಸಮಾಧಿಯಲ್ಲಿಡಲಾಗಿದ್ದ 300 ರೂಪಾಯಿ ಕಳವಾದ ಹಿನ್ನೆಲೆಯಲ್ಲಿ ನಾಲ್ಕು ಮಂದಿ ಅಮಾಯಕ ಅಪ್ರಾಪ್ತ ವಯಸ್ಸಿನ ದಲಿತ ಬಾಲಕರ ಕೈಗಳನ್ನು ಕಟ್ಟಿ ಹಾಕಿ ನಾಲ್ಕು ಕಿ.ಮೀ. ದೂರದ ರಸ್ತೆಯಲ್ಲಿ ನಡೆಸಿ ಶಿಕ್ಷಿಸಲಾದ ಘೋರ ಘಟನೆಯೊಂದು ಪಂಜಾಬ್ ನ ಸಂಗ್ರೂರ್ ಜಿಲ್ಲೆಯಲ್ಲಿ ನಡೆದಿದೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸರು ನಾಲ್ವರು ದುಷ್ಟರನ್ನು ಬಂಧಿಸಿದ್ದಾರೆ. ಘಟನೆಯ ಸಂಬಂಧ ಬಾಲಕರ ಕುಟುಂಬಗಳು ರಾಜ್ಯ ಮಕ್ಕಳ ಹಕ್ಕುಗಳ ಆಯೋಗಕ್ಕೆ ದೂರು ಕೂಡ ನೀಡಿದ್ದಾರೆ.
ಭಸೌರ್ ಗ್ರಾಮದ 11ರಿಂದ 13 ವರ್ಷದ ಬಾಲಕರು ಈ ಅಮಾನವೀಯ ಶಿಕ್ಷೆಗೆ ಒಳಗಾದವರಾಗಿದ್ದಾರೆ. ಇಲ್ಲಿನ ಬನ್ಬೋರಿ ಗ್ರಾಮದಲ್ಲಿರುವ ಸಮಾಧಿಯಲ್ಲಿದ್ದ 300 ರೂಪಾಯಿ ಕಳವಾಗಿದೆ. ಇದನ್ನು ದಲಿತ ಬಾಲಕರೇ ಕದ್ದಿದ್ದಾರೆ ಎಂದು ಸುಳ್ಳು ಆರೋಪ ಮಾಡಿ ಮುಗ್ಧ ಮಕ್ಕಳ ಕೈಗಳನ್ನು ಕಟ್ಟಿ ಹಾಕಿ ನಾಲ್ಕು ಕಿ.ಮೀ. ದೂರ ನಡೆಸಲಾಗಿದೆ.
ಇನ್ನೂ ಬನ್ಭೂರಿ ಗ್ರಾಮಸ್ಥರಿಗೆ ಬಾಲಕರನ್ನು ಶಿಕ್ಷಿಸಲಾಗುತ್ತಿದೆ ಎಂಬ ವಿಚಾರ ತಿಳಿದಾಗ ಅವರು ಇಲ್ಲಿನ ಸರಪಂಚ ಗುರ್ನಾಮ್ ಸಿಂಗ್ ಬನ್ಬೋರಿ ಗ್ರಾಮಕ್ಕೆ ಧಾವಿಸಿದ್ದು, ಈ ವೇಳೆ ಬಾಲಕರ ಕೈಗಳನ್ನು ಕಟ್ಟಿ ಹಾಕಿದ ಸ್ಥಿತಿಯಿತ್ತು ಎಂದು ಹೇಳಲಾಗಿದೆ.
ಆದರೆ ಈ ಘಟನೆ ಸಂಬಂಧ ಪ್ರತಿಕ್ರಿಯಿಸಿರುವ ಬನ್ಬೋರಿ, ಬಾಲಕರ ಕೈಗಳನ್ನು ಕಟ್ಟಿ ಹಾಕಿಲ್ಲ. ಅವರಿಗೆ ಪಾಠ ಕಲಿಸಬೇಕು ಎಂದು ದಂಡ ವಿಧಿಸಿದ್ದೇವೆ. ಹಲ್ಲೆ ಕೂಡ ನಡೆಸಲಾಗಿಲ್ಲ ಎಂದು ಹೇಳಿದ್ದಾರೆ. ಆದರೆ ವಿಡಿಯೋದಲ್ಲಿ ಬಾಲಕರನ್ನು ಹಿಂಸಿಸುತ್ತಿರುವುದು ಕಂಡು ಬಂದಿದೆ.
ಇನ್ನೂ ಘಟನೆಗೆ ಸಂಬಂಧಿಸಿದಂತೆ ಗ್ರಾಮದ ಸರಪಂಚ ಗುರ್ನಾಮ್ ಸಿಂಗ್ ಸಹಿತ ನಾಲ್ವರನ್ನು ಪೊಲೀಸರು ಬಂಧಿಸಿದ್ದು, ಪೊಲೀಸರು ಯಾವ ರೀತಿಯಲ್ಲಿ ಇವರಿಗೆ ಪಾಠ ಕಲಿಸುತ್ತಾರೆ ಎನ್ನುವುದನ್ನು ಕಾದುನೋಡಬೇಕಿದೆ.