ಆಧುನಿಕ ಒಲಿಂಪಿಕ್ ಕ್ರೀಡೆಗಳ ಪಿತಾಮಹ "ಕೂಬರ್ತಿ" - Mahanayaka

ಆಧುನಿಕ ಒಲಿಂಪಿಕ್ ಕ್ರೀಡೆಗಳ ಪಿತಾಮಹ “ಕೂಬರ್ತಿ”

Pierre de Coubertin
18/10/2024

  • ಉದಂತ ಶಿವಕುಮಾರ್

“ಆಟದಲ್ಲಿ ಗೆಲ್ಲುವುದು ಮುಖ್ಯವಲ್ಲ, ಭಾಗವಹಿಸುವುದು ಮುಖ್ಯ; ಬಾಳಿನಲ್ಲಿ ಜಯಿಸುವುದು ಮುಖ್ಯವಲ್ಲ, ಚೆನ್ನಾಗಿ ಹೋರಾಡುವುದು ಮುಖ್ಯ” ಇದು ಪಿಯರ್ ದ ಕೂಬರ್ತಿ ರೂಪಿಸಿಕೊಂಡ ಜೀವನ ಸೂತ್ರ.

ಕೂಬರ್ತಿ ಅವರು ಫ್ರಾನ್ಸಿನ ಖ್ಯಾತ ಶಿಕ್ಷಣ ತಜ್ಞ ಇವರು 1863ರಲ್ಲಿ ಜನಿಸಿದರು. ಇವರು ಫ್ರೆಂಚ್ ಸರ್ಕಾರಕ್ಕೆ ಶರೀರದ ಶಿಕ್ಷಣ ಸಲಹೆಗಾರರಾಗಿದ್ದರು. ಸ್ವತಃ ಕ್ರೀಡಾಪಟುವಾಗಿರಲಿಲ್ಲ. ಆದರೂ ಶರೀರ ಶಿಕ್ಷಣ ಮತ್ತು ಸ್ಪರ್ಧೆಯ ಹುಮ್ಮಸ್ಸು ಬದುಕಿನ ಉತ್ಕರ್ಷಕ್ಕೆ ಕಾರಣವಾಗುತ್ತದೆ ಎಂಬುದು ಅವರ ನಂಬಿಕೆಯಾಗಿತ್ತು. ಅದನ್ನು ಅವರು ಪ್ರತಿಪಾದಿಸುತ್ತಿದ್ದರು. ಪ್ರಾಚೀನ ಗ್ರೀಕ್ ದಾರ್ಶನಿಕ ಸಾಕ್ರೆಟಿಸ್ ಗೆ ಅನಿಸಿದ್ದಂತೆ ಸಮಕಾಲೀನ ಯುವ ಜನರು ದೈಹಿಕವಾಗಿ ಮೆದುವಾಗುತ್ತಿದ್ದಾರೆ ಎಂಬ ಭಾವನೆ ಇದ್ದಿತು. ಕ್ರಿಸ್ತಪೂರ್ವ ಏಳನೆಯ ಶತಮಾನದಷ್ಟು ಹಿಂದೆ ಗ್ರೀಸಿನಲ್ಲಿ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಉತ್ಕರ್ಷಗಳ ಸಾಧನೆಗೆ ಪ್ರಶಸ್ತಿ ಕೊಡುವುದಕ್ಕಾಗಿ ಒಲಿಂಪಿಕ್ ಕ್ರೀಡೋತ್ಸವ ಜರುಗುತ್ತಿತ್ತು.

ಸಾವಿರ ವರ್ಷಗಳಿಗೂ ಹೆಚ್ಚು ಕಾಲ ನಾಲ್ಕು ವರ್ಷಕ್ಕೊಮ್ಮೆ ಇದು ಜರುಗುತ್ತಿತ್ತು. ಗ್ರೀಸನ್ನು ರೋಮನ್ನರು ಆಕ್ರಮಿಸಿದಾಗ ಈ ಕ್ರೀಡೆ ಮೂಲೆಗುಂಪಾಯಿತು.  ಕ್ರಿಸ್ತಶಕ 394 ರಲ್ಲಿ ರೂಮನ್ ಚಕ್ರವರ್ತಿ ಮೊದಲನೆಯ ಥಿಯೋಡಸಿಸ್ ಒಲಿಂಪಿಕ್ ಉತ್ಸವವನ್ನು ನಿಲ್ಲಿಸಿ ಬಿಟ್ಟನು. ಕ್ರೀಡೋತ್ಸವ ನಡೆಯುತ್ತಿದ್ದ ಒಲಿಂಪಿಕ್ ಪಟ್ಟಣ ಕಾಲ ಕ್ರಮೇಣ ಭೂಗತವಾಯಿತು. ಅಲ್ಲಿನ ಸಂಸ್ಕೃತಿಯ ಮೇಲೆ ಹೊಸ ಬೆಳಕು ಬಿದ್ದುದು ಮುಂದೆ 15ನೆಯ ಶತಮಾನಗಳ ನಂತರ. 1880 ರಲ್ಲಿ ಕೆಲವು ಜರ್ಮನ್ ಪ್ರಾಚ್ಯ ಸಂಶೋಧಕರು ಒಲಂಪಿಕ್ ಸಂಸ್ಕೃತಿಯ ಅವಶೇಷಗಳನ್ನು ಕಂಡುಹಿಡಿದರು. ಗ್ರೀಕ್ ಅವಶೇಷಗಳ ಸಂಶೋಧನೆಯಿಂದ ಕೂಬರ್ತಿಯವರಿಗೆ ಹೊಸ ಪ್ರೇರಣೆ ಉಂಟಾಯಿತು. ಯುವಜನತೆಯ ಅಭಿವೃದ್ಧಿಗಾಗಿ ಒಲಿಂಪಿಕ್ ನಂತಹ ಕ್ರೀಡೋತ್ಸವಗಳು ಅಗತ್ಯವೆಂದು ಅವರು ಭಾವಿಸಿದರು. ಮೊದಲ ಹೆಜ್ಜೆಯಾಗಿ ಪ್ರಾಚೀನ ಕ್ರೀಡೋತ್ಸವವನ್ನು ರೂಪಿಸಬೇಕೆಂಬುದು ಅವರ ಅಪೇಕ್ಷೆಯಾಗಿತ್ತು. ಆದರೆ ಸತತ ಪರಿಶ್ರಮದ ಫಲವಾಗಿ ಜಾಗತಿಕ ಒಲಿಂಪಿಕ್ ಕ್ರೀಡಾ ಮಹೋತ್ಸವವನ್ನೇ ಪ್ರಾರಂಭಿಸುವುದು ಸಾಧ್ಯವಾಯಿತು.

ಪ್ರಾಚೀನ ಗ್ರೀಕರಲ್ಲಿದ್ದಂತೆ ಕ್ರೀಡೋತ್ಸವಗಳನ್ನು ನಡೆಸಬೇಕೆಂಬ ಯೋಜನೆಯನ್ನು ಮೊದಲು ಅವರು ಕ್ರೀಡಾ ಸಂಘ ಸಂಸ್ಥೆಗಳಿಗೆ ಪತ್ರ ಬರೆದು ತಿಳಿಸಿದರು.   1892 ರಲ್ಲಿ ಅಥ್ಲೆಟಿಕ್ ಕ್ರೀಡಾ ಸಂಘವೊಂದರಲ್ಲಿ ತಮ್ಮ ಅಭಿಪ್ರಾಯವನ್ನು ಮಂಡಿಸಿದರು. ಅವರ ಸೂಚನೆಗೆ ಸ್ವಾಗತ ದೊರೆಯಲಿಲ್ಲ. ಆದರೂ ಕೂಬರ್ತಿ ಹಿಂಜರಿಯಲಿಲ್ಲ. ತಮ್ಮ ಉದ್ದೇಶ ಸಾಧನೆಗಾಗಿ 1894ರಲ್ಲಿ ಪ್ಯಾರಿಸ್ ನಲ್ಲಿ ಅಂತರಾಷ್ಟ್ರೀಯ ಸಮಾವೇಶ ಒಂದನ್ನು ಕರೆದರು. 12 ದೇಶಗಳ ಪ್ರತಿನಿಧಿಗಳು ಅದರಲ್ಲಿ ಭಾಗವಹಿಸಿದ್ದರು. ಕೂಬರ್ತಿಯವರ ಯೋಜನೆಗೆ ಬೆಂಬಲ ದೊರೆತು. ಒಲಿಂಪಿಕ್ಸ್ ಸಮಿತಿ ರಚಿಸಲ್ಪಟ್ಟಿತು. ಹಿಂದೆ ಗ್ರೀಸಿನಲ್ಲಿ ನಡೆಯುತ್ತಿದ್ದಂತೆ ನಾಲ್ಕು ವರ್ಷಗಳಿಗೊಮ್ಮೆ ಒಲಿಂಪಿಕ್ ಕ್ರೀಡಾ ಮಹೋತ್ಸವವನ್ನು ಜರುಗಿಸಲು ನಿರ್ಧರಿಸಲಾಯಿತು. ಜಾಗತಿಕ ಮಟ್ಟದ ಕ್ರೀಡೋತ್ಸವವಾದದ್ದರಿಂದಲೂ ಆರ್ಥಿಕ ಅನುಕೂಲದ ದೃಷ್ಟಿಯಿಂದಲೂ ಪ್ರತಿಸಲ ಬೇರೆ ಬೇರೆ ಸ್ಥಳಗಳಲ್ಲಿ ಏರ್ಪಡಿಸಬೇಕು ಎಂದು ಗೊತ್ತಾಯಿತು. ಪ್ರಥಮ ಸಲ 1896ರಲ್ಲಿ ಗ್ರೀಸಿನ ಅಥೆನ್ಸಿನಲ್ಲಿ  ಜಾಗತಿಕ ಒಲಿಂಪಿಕ್ ಕ್ರೀಡೋತ್ಸವ ಜರುಗಿತು. ಆ  ಉತ್ಸವಕ್ಕೋಸ್ಕರ ಅಲ್ಲಿ ಪ್ರಾಚೀನ ಕ್ರೀಡಾಂಗಣವನ್ನು ಅಮೃತಶಿಲೆಯಿಂದ ಪುನರ್ ನಿರ್ಮಿಸಲಾಯಿತು. ಇದಕ್ಕೆ ಗ್ರೀಸಿನ ದೊರೆಯ ಪ್ರೋತ್ಸಾಹ, ಬೆಂಬಲವು ದೊರೆತವು.

ಒಲಂಪಿಕ್ ಕ್ರೀಡೋತ್ಸವಗಳ ಮೇಲ್ವಿಚಾರಣೆಗಾಗಿ ಅಂತರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ಸ್ವಿಟ್ಜರ್ ಲೆಂಡಿನಲ್ಲಿ ಸ್ಥಾಪಿಸಲ್ಪಟ್ಟಿತು. 1925 ರವರೆಗೆ ಅದರ ಅಧ್ಯಕ್ಷರಾಗಿದ್ದು ಕೂಬರ್ತಿ ಒಲಿಂಪಿಕ್ ಕ್ರೀಡೋತ್ಸವಗಳಿಗೆ ಮಾರ್ಗದರ್ಶನ ನೀಡಿದರು. ಒಂದರೊಳಗೊಂದು ಸಿಕ್ಕಿಸಿದ ಐದು ಉಂಗುರಗಳ ಒಲಿಂಪಿಕ್ ಚಿಹ್ನೆ ಇರುವ ಒಲಿಂಪಿಕ್ ಧ್ವಜವನ್ನು ರೂಪಿಸಿದರು. ಒಲಂಪಿಕ್ ಕಪ್ ರೂಪುಗೊಂಡದ್ದು ಕೂಬರ್ತಿಯವರಿಂದಲೇ. ಒಲಿಂಪಿಕ್ ಚಳುವಳಿ ಮತ್ತು ಹವ್ಯಾಸಿ ಕ್ರೀಡಾ ಅಭ್ಯಾಸಕ್ಕೆ ಮಹತ್ತರವಾದ ಸೇವೆ ಸಲ್ಲಿಸಿದ ಸಂಘ ಅಥವಾ ಸಂಸ್ಥೆಗೆ ಈ ಕಪ್ಪು ದೊರೆಯುತ್ತದೆ. ಈ ಕಪ್ಪನ್ನು 1906 ರಲ್ಲಿ ಪ್ರಾರಂಭಿಸಲಾಯಿತು. “ಒಲಿಂಪಿಕ್ ಕ್ರೀಡೋತ್ಸವ ಶಾಂತಿ ಸಾಧನೆಗೆ ಸಹಕಾರಿ, ಜಗತ್ತು ಉತ್ತಮಗೊಂಡರೆ ಮಾತ್ರ ಶಾಂತಿ ಸಾಧ್ಯ. ಜಗತ್ತು ಉತ್ತಮಗೊಳ್ಳಬೇಕಾದರೆ ಜನಾಂಗ ಉತ್ತಮವಾಗಬೇಕು, ಜನರೊಳಗೆ ಸ್ವಹಿತ ಪರಹಿತಕ್ಕಾಗಿ ಕೊಂಡು ಕೊಡುವ ವ್ಯವಹಾರ ಹಾಗೂ ಸ್ಪರ್ಧಾತ್ಮಕ ಉತ್ಕರ್ಷ ಮನೋಭಾವ ಬೆಳೆದರೆ ಮಾತ್ರ ಜನಾಂಗದ ಮಟ್ಟ ಉತ್ತಮವಾಗುತ್ತದೆ” ಇದು ಕೂಬರ್ತಿ ಅವರ ನಿಲುವು.

“ಕ್ರೀಡೋತ್ಸವದಲ್ಲಿ ಗೆದ್ದವನ ರಾಷ್ಟ್ರ ಯಾವುದೆಂಬುದು ಮುಖ್ಯವಲ್ಲ; ಅವನ ಪ್ರತಿಭೆಯೂ, ಶಕ್ತಿಯೂ ಮುಖ್ಯ” ಇದು ಕೂಬರ್ತಿ ಪುನಃ ಸ್ಥಾಪಿಸಿದ ಒಲಿಂಪಿಕ್ ಸ್ಪರ್ಧೆಗಳ ಧ್ಯೇಯ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ