ಯವ್ವನದಲ್ಲಿ ಪತ್ನಿ, ಮಕ್ಕಳು ಬೇಡ ಎಂದು ಹೋದ | ಹಾಸಿಗೆ ಹಿಡಿದಾಗ ಪತ್ನಿ ಬಳಿ ಬಂದು ಗೋಳಾಡಿದ
ಮಂಡ್ಯ: ಹಲವು ವರ್ಷಗಳಿಂದ ಪತ್ನಿ ಮತ್ತು ಮಕ್ಕಳನ್ನು ನಡುದಾರಿಯಲ್ಲಿ ಬಿಟ್ಟು ಹೋಗಿದ್ದ ವ್ಯಕ್ತಿ ಇದೀಗ ಅನಾರೋಗ್ಯಕ್ಕೆ ತುತ್ತಾಗಿದ್ದು, ಈ ವೇಳೆ ತನಗೆ ಹೆಂಡತಿ ಬೇಕು ಎಂದು ಪತ್ನಿಯ ಬಳಿಗೆ ಗೋಳಾಡುತ್ತಾ ಬಂದಿದ್ದಾನೆ.
ಮದ್ದೂರು ತಾಲೂಕಿನ ಶಿವಣ್ಣ ತಾನು ಆರೋಗ್ಯವಂತನಾಗಿದ್ದ ವೇಳೆ ಮೈತುಂಬಾ ಸಾಲ ಮಾಡಿಕೊಂಡು ಮನೆ, ಜಮೀನು ಮಾರಿ, ತನಗೆ ಪತ್ನಿ, ಮಕ್ಕಳು ಬೇಡ ಎಂದು ಬೆಂಗಳೂರಿಗೆ ಹೋಗಿದ್ದ. ಈತ ಹೋದ ಬಳಿಕ ಪತ್ನಿ ಪ್ರಭಾವತಿ ತನ್ನ ಮಗ ಹಾಗೂ ಮಗಳನ್ನು ಕಷ್ಟಪಟ್ಟು ಸಾಕಿದ್ದಾರೆ. ಎರಡು ಮನೆ, ಐದು ಎಕರೆ ಜಾಗ ಇದ್ದ ಶಿವಣ್ಣ ಎಲ್ಲವನ್ನೂ ಮಾರಿದ್ದರೂ ಪತ್ನಿಗೆ ನೆರವು ಕೂಡ ನೀಡಿರಲಿಲ್ಲ. ತನ್ನ ಅಹಂಕಾರದಿಂದ ಬೆಂಗಳೂರು ಪಟ್ಟಣಕ್ಕೆ ಸೇರಿದ್ದ.
ಬೆಂಗಳೂರಿನಲ್ಲಿ ಬಿಂದಾಸ್ ಆಗಿ ಬದುಕಿದ್ದ ಶಿವಣ್ಣಗೆ ಒಂದುವರ್ಷದ ಹಿಂದೆ ಲಕ್ವ ಹೊಡೆದಿದೆ. ಇದರಿಂದಾಗಿ ದೇಹದ ಎಡಭಾಗ ಸಂಪೂರ್ಣವಾಗಿ ಸ್ವಾಧೀನ ಕಳೆದುಕೊಂಡಿದ್ದಾನೆ.
ಇದರಿಂದಾಗಿ ಆತ ಸ್ನೇಹಿತರ ನೆರವಿನಿಂದ ಇಲ್ಲಿನ ಆಶ್ರಮವೊಂದರಲ್ಲಿ ಇದ್ದ. ಈ ಆಶ್ರಮಕ್ಕೆ ಪ್ರತಿ ತಿಂಗಳು 10 ಸಾವಿರ ರೂಪಾಯಿ ಕಟ್ಟಬೇಕಿತ್ತು. ಇದು ಕಟ್ಟಲು ಸಾಧ್ಯವಾಗದೇ ಇದ್ದಾಗ ಕೊನೆಗೆ ತನ್ನ ಪತ್ನಿಯನ್ನು ಹುಡುಕಿಕೊಂಡು ಬಂದಿದ್ದಾನೆ.
ತಮ್ಮನ್ನು ಸಂಕಷ್ಟಕ್ಕೆ ದೂಡಿ ಹೋಗಿರುವ ಪತಿಯನ್ನು ಪತ್ನಿ ಮನೆಗೆ ಸೇರಿಸಿಕೊಂಡಿಲ್ಲ. ಮಕ್ಕಳು ಕೂಡ ತಿರುಗಿ ನೋಡಿಲ್ಲ. ಹಾಸಿಗೆ ಹಿಡಿದಾಗ ಈತನಿಗೆ ನಮ್ಮ ನೆನಪಾಗಿದೆ. ಯಾವುದೇ ಕಾರಣಕ್ಕೂ ಅವನಿಗೆ ಆಶ್ರಯ ನೀಡುವುದಿಲ್ಲ ಎಂದು ಪತ್ನಿ ಹೇಳಿದ್ದಾಳೆ.
ಇದೀಗ ಈತ ಪಕ್ಕದ ಮನೆಯವರ ಜಗಲಿಯಲ್ಲಿ ಮಲಗಿದ್ದು, ಆತನಿಗೆ ಊರಿನವರು ಊಟ ನೀಡುತ್ತಿದ್ದಾರೆ. ಆದರೆ ಹೆಚ್ಚು ಸಮಯ ನಾವು ನೋಡಿಕೊಳ್ಳಲು ಆಗುವುದಿಲ್ಲ ಎಂದು ಅವರು ಕೂಡ ಹೇಳಿದ್ದಾರೆ.