ಸ್ನೇಹಿತನಿಗೆ ಚಿನ್ನ ಕೊಟ್ಟು ಪ್ರಾಣವನ್ನೇ ಕಳೆದುಕೊಂಡ ವಿದ್ಯಾರ್ಥಿನಿ! - Mahanayaka
4:24 PM Wednesday 5 - February 2025

ಸ್ನೇಹಿತನಿಗೆ ಚಿನ್ನ ಕೊಟ್ಟು ಪ್ರಾಣವನ್ನೇ ಕಳೆದುಕೊಂಡ ವಿದ್ಯಾರ್ಥಿನಿ!

police
05/12/2024

ಬೆಂಗಳೂರು: ಬಿಕಾಂ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ ತಿರುವು ಪಡೆದಿದೆ. ಈಕೆಯಿಂದ 15 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಪಡೆದು ವಂಚಿಸಿ ಸಾವಿಗೆ ಕಾರಣನಾದ ಸ್ನೇಹಿತನನ್ನು ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ.

ಖಾಸಗಿ ಕಾಲೇಜಿನ ಬಿಕಾಂ ವಿದ್ಯಾರ್ಥಿ ದಿಗಂತ್‌ (19) ಬಂಧಿತ ಆರೋಪಿಯಾಗಿದ್ದಾನೆ. ಮೃತ ಯುವತಿಯ ಪಾಲಕರು ಕೊಟ್ಟ ದೂರಿನ ಮೇರೆಗೆ  ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ,  ನ್ಯಾಯಾಂಗ  ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜಾಜಿನಗರದ ರಾಮ ಮಂದಿರ ನಿವಾಸಿ ಪ್ರಿಯಾಂಕಾ (19) ನ.29ರಂದು ಮನೆಯಲ್ಲಿ ನೇಣು ಬಿಗಿದುಕೊಂಡು  ಆತ್ಮಹತ್ಯೆ ಮಾಡಿಕೊಂಡಿದ್ದಳು. ಮೊದಲು ಪಾಲಕರ ದೂರಿನ ಮೇರೆಗೆ ಆತ್ಮಹತ್ಯೆ ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ನೊಂದ ಪಾಲಕರು, ಮಗಳ ಸ್ನೇಹಿತೆಯರನ್ನು ವಿಚಾರಿಸಿದಾಗ ದಿಗಂತ್ ಮಾಹಿತಿ ಬೆಳಕಿಗೆ ಬಂದಿದೆ. ಕಾಲೇಜಿನಲ್ಲಿ ಪ್ರಿಯಾಂಕಾ ಜತೆಯಲ್ಲಿಯೇ ಓದುತ್ತಿದ್ದ ದಿಗಂತ್, ಆಕೆಯೊಟ್ಟಿಗೆ ಸ್ನೇಹ ಮಾಡಿದ್ದ. ಪ್ರಿಯಾಂಕಾ ಪಾಲಕರು ಚಿನ್ನಾಭರಣ ವ್ಯಾಪಾರಿಗಳು ಎಂಬುದು ತಿಳಿದು, ಆಕೆಗೆ ಕ್ಯಾಸಿನೋ ಮತ್ತು ಸೂಪರ್ ಕಾರ್’ ವಿಡಿಯೋ ಗೇಮ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಡಬಲ್ ಮಾಡಿಕೊಡುವುದಾಗಿ ಆಮಿಷವೊಡ್ಡಿದ್ದ. ಇದನ್ನೇ ನಂಬಿದ ಪ್ರಿಯಾಂಕಾ, ಮನೆಯಲ್ಲಿದ್ದ ಅಂದಾಜು 15 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ದಿಗಂತ್‌ ಗೆ ಕೊಟ್ಟಿದ್ದಳು. ಅದನ್ನು ಅಡವಿಟ್ಟು ಆನ್‌ ಲೈನ್ ಗೇಮ್ ಮತ್ತು ಶೋಕಿ ಮಾಡಿ ಕಳೆದಿದ್ದ.

ಇತ್ತ ಭಯಗೊಂಡ ಪ್ರಿಯಾಂಕಾ, ಹಣ ವಾಪಸ್ ಕೇಳಿದಾಗ ಬೆದರಿಸಿ ಆಕೆ ಬಗ್ಗೆ ಕೆಟ್ಟದಾಗಿ ಹೇಳಿ ತೇಜೋವಧೆ ಮಾಡುತ್ತಿದ್ದ. ಇದೇ ನೋವಿನಲ್ಲಿ ಪ್ರಿಯಾಂಕಾ, ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಮಾಹಿತಿ ಗೊತ್ತಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ