ಕಮಿಷನರ್ ಅಗ್ರವಾಲ್ ಅಮಾನತಿಗೆ ಸಂಘಟಿತ ಹೋರಾಟ: ಸಮಾನ ಮನಸ್ಕ ಸಂಘಟನೆಗಳಿಂದ ಸಮಾಲೋಚನಾ ಸಭೆ - Mahanayaka
5:15 PM Wednesday 11 - December 2024

ಕಮಿಷನರ್ ಅಗ್ರವಾಲ್ ಅಮಾನತಿಗೆ ಸಂಘಟಿತ ಹೋರಾಟ: ಸಮಾನ ಮನಸ್ಕ ಸಂಘಟನೆಗಳಿಂದ ಸಮಾಲೋಚನಾ ಸಭೆ

samana manaska sanghatane
08/12/2024

ಮಂಗಳೂರು: ಧರಣಿ, ಪ್ರತಿಭಟನೆಗಳಿಗೆ ಮುಕ್ತ ಅವಕಾಶ ಒದಗಿಸಲು ಆಗ್ರಹಿಸಿ, ಕಮೀಷನರ್ ಅಗ್ರವಾಲ್ ಅಮಾನತಿಗೆ ಸಂಘಟಿತ ಹೋರಾಟ ನಡೆಸಲು ಸಮಾನ ಮನಸ್ಕ ಜನಪರ ಸಂಘಟನೆಗಳು ನಗರದಲ್ಲಿ  ಸಮಾಲೋಚನಾ ಸಭೆ ನಡೆಸಿದವು.

ಪೊಲೀಸ್ ಕಮೀಷನರ್ ಅನುಪಮ್ ಅಗ್ರವಾಲ್ ವ್ಯಾಪ್ತಿಯಲ್ಲಿ ಜನಚಳವಳಿಗಳು ಧರಣಿ, ಪ್ರತಿಭಟನೆ, ಹೋರಾಟಗಳನ್ನು ಹಮ್ಮಿಕೊಳ್ಳುವುದರ ಮೇಲೆ ನಿರ್ಬಂಧ ವಿಧಿಸುತ್ತಿದ್ದಾರೆ.  ಈ ಸಂಬಂಧ ಉಂಟಾಗುತ್ತಿರುವ ಸಮಸ್ಯೆಗಳ ಬಗ್ಗೆ ನಡೆಸಲಾದ ಸಭೆಯಲ್ಲಿ  ರೈತ, ದಲಿತ, ಕಾರ್ಮಿಕ, ಮಹಿಳಾ, ಯುವಜನ ಸಂಘಟನೆಗಳು ಸೇರಿದಂತೆ ವಿವಿಧ ಸಾಮಾಜಿಕ ಸಂಘಟನೆಗಳು, ಎಡಪಕ್ಷಗಳ ಪ್ರಮುಖರು ಭಾಗಿಯಾಗಿದ್ದರು.

ಪೊಲೀಸ್ ಕಮೀಷನರ್ ಸಂಘಪರಿವಾರದ ಸೂಚನೆಯಂತೆ ಕಾರ್ಯನಿರ್ವಹಿಸುತ್ತಿದ್ದಾರೆ‌.  ಜನಚಳವಳಿಗಳನ್ನು ಹತ್ತಿಕ್ಕುವುದು, ಅನಗತ್ಯ ಎಫ್ ಐಆರ್ ದಾಖಲಿಸುವುದು, ಕೋಮುವಾದಿ ಸಂಘಟನೆಗಳಿಗೆ, ಜುಗಾರಿ, ಗ್ಯಾಂಬ್ಲಿಂಗ್, ಅಕ್ರಮ ಮರಳುಗಾರಿಕೆ ದಂಧೆಗಳಿಗೆ ಮುಕ್ತ ಅವಕಾಶ ಒದಗಿಸಿರುವುದು ಒಪ್ಪಲು ಸಾಧ್ಯವಿಲ್ಲ. ಕೋಮುವಾದಿ ಮನಸ್ಥಿತಿಯ ಸರ್ವಾಧಿಕಾರಿ ಧೋರಣೆಯ ಕಮೀಷನರ್ ಅನುಪಮ್ ಅಗ್ರವಾಲ್ ರನ್ನು ರಾಜ್ಯ ಸರಕಾರ ಅಮಾನತು ಮಾಡಲೇಬೇಕು. ಈ ನಿಟ್ಟಿನಲ್ಲಿ ಹೋರಾಟ ನಡೆಸಲು ಎಂದು ಸಭೆಯಲ್ಲಿ  ತೀರ್ಮಾನ ಕೈಗೊಳ್ಳಲಾಯಿತು.

ಹೋರಾಟದ ಅಂಗವಾಗಿ ಡಿಸೆಂಬರ್ 23 ರ ರಂದು ಮಂಗಳೂರು ಪುರಭವನದ ಸಮೀಪ ಬೃಹತ್ ಧರಣಿ ನಡೆಸುವುದು, ಜನವರಿ ಪ್ರಥಮ ವಾರದಲ್ಲಿ ಸಾವಿರಾರು ಜನರ ಪಾಲ್ಗೊಳ್ಳುವಿಕೆಯಲ್ಲಿ ಕಮಿಷನರೇಟ್ ಕಚೇರಿ ಚಲೋ ನಡೆಸಲು ತೀರ್ಮಾನಿಸಲಾಯಿತು.

ಸಭೆಯಲ್ಲಿ ಸಿಪಿಐಎಂ ದ.ಕ. ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ, ಸಿಪಿಐ ಜಿಲ್ಲಾ ಕಾರ್ಯದರ್ಶಿ ಬಿ ಶೇಖರ್, ರಾಜ್ಯ ರೈತ ಸಂಘ, ಹಸಿರು ಸೇನೆಯ ಜಿಲ್ಲಾ ಪದಾಧಿಕಾರಿಗಳಾದ ಓಸ್ವಾಲ್ಡ್ ಪ್ರಕಾಶ್ ಪಿಂಟೊ, ಪ್ರೇಮನಾಥ್ ಶೆಟ್ಟಿ, ಸನ್ನಿ ಡಿಸೋಜ,  ರಾಜ್ಯ ರೈತ ಸಂಘ (ಕೋಡಿಹಳ್ಳಿ) ಬಣದ ಜಿಲ್ಲಾಧ್ಯಕ್ಷರಾದ ಶ್ರೀಧರ ಶೆಟ್ಟಿ, ಕರ್ನಾಟಕ ರೈತ ಸಂಘದ ಸುರೇಶ್ ಭಟ್, ಪ್ರಾಂತ ರೈತ ಸಂಘದ ಪ್ರಮುಖರಾದ ಕೆ ಯಾದವ ಶೆಟ್ಟಿ, ಕೃಷ್ಣಪ್ಪ ಸಾಲ್ಯಾನ್, ವಿಚಾರವಾದಿ ಸಂಘದ ಅಖಿಲ ಭಾರತ ಅಧ್ಯಕ್ಷರಾದ ಪ್ರೊ. ನರೇಂದ್ರ ನಾಯಕ್, ದಲಿತ ಸಂಘರ್ಷ ಸಮಿತಿಯ ಪ್ರಮುಖರಾದ ಎಂ ದೇವದಾಸ್, ಸದಾಶಿವ ಪಡುಬಿದ್ರೆ, ರಘು ಎಕ್ಕಾರು, ಸರೋಜಿನಿ ಬಂಟ್ವಾಳ, ದಲಿತ ಹಕ್ಕುಗಳ ಸಮಿತಿಯ ಕೃಷ್ಣ ತಣ್ಣೀರುಬಾವಿ, ರಾಧಾಕೃಷ್ಣ ವಾಮಂಜೂರು, ಕೃಷ್ಣಪ್ಪ ಕೊಣಾಜೆ, ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಕೃಷ್ಣ ಇನ್ನಾ, ರವೀಂದ್ರ ವಾಮಂಜೂರು, ಸಿಐಟಿಯು ಜಿಲ್ಲಾಧ್ಯಕ್ಷರಾದ ಬಾಲಕೃಷ್ಣ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ಬಿ ಎಮ್ ಭಟ್, ಎಐಟಿಯುಸಿಯ ವಿ ಕುಕ್ಯಾನ್, ಕರುಣಾಕರ ಮಾರಿಪಳ್ಳ, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಸಂಘದ ವಸಂತ ಆಚಾರಿ, ಯೋಗೀಶ್ ಜಪ್ಪಿನಮೊಗರು, ಬೀಡಿ ಮಜೂರರ ಸಂಘದ ಪ್ರಮುಖರಾದ ಜಯಂತಿ ಶೆಟ್ಟಿ, ಪದ್ಮಾವತಿ ಶೆಟ್ಟಿ, ಸುಕುಮಾರ್ ತೊಕ್ಕೊಟು,  ಡಿವೈಎಫ್ಐ ಜಿಲ್ಲಾ ಪ್ರಮುಖರಾದ ಬಿ ಕೆ ಇಮ್ತಿಯಾಜ್, ಸಂತೋಷ್ ಬಜಾಲ್, ರಿಜ್ವಾನ್ ಹರೇಕಳ, ನವೀನ್ ಕೊಂಚಾಡಿ, ಎಐವೈಎಫ್ ನ ಜಗತ್ ಪಾಲ್ ಕೋಡಿಕಲ್, ಜನವಾದಿ ಮಹಿಳಾ ಸಂಘಟನೆಯ ಭಾರತಿ ಬೋಳಾರ, ಪ್ರಮೀಳಾ ಕಾವೂರು, ಅಸುಂತಾ ಡಿಸೋಜ, ಹಿರಿಯ ವಕೀಲರಾದ ದಿನೇಶ್ ಹೆಗ್ಡೆ ಉಳೆಪಾಡಿ, ಯಶವಂತ ಮರೋಳಿ, ಅಖಿಲ ಭಾರತ ವಕೀಲರ ಸಂಘದ ಚರಣ್ ಶೆಟ್ಟಿ, ನಿತಿನ್ ಕುತ್ತಾರ್, ಶಾಲಿನಿ, ಸಾಮರಸ್ಯ ಮಂಗಳೂರು ಇದರ ಮಂಜುಳಾ ನಾಯಕ್, ಮಾಜಿ   ಉಪ ಮೇಯರ್ ಮುಹಮ್ಮದ್ ಕುಂಜತ್ತಬೈಲ್, ಮದರ್ ಥೆರೆಸಾ ವಿಚಾರ ವೇದಿಕೆಯ ಬಿ ಎನ್ ದೇವಾಡಿಗ, ಸಮುದಾಯ ಸಾಂಸ್ಕೃತಿಕ ಸಂಘಟನೆಯ ಮನೋಜ್ ವಾಮಂಜೂರು, ಶ್ಯಾಮಸುಂದರ್ ರಾವ್, ಅಶ್ರಫ್ ಹರೇಕಳ ಮತ್ತಿತರರು ಭಾಗವಹಿಸಿದ್ದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ