“ಲವ್ ಜಿಹಾದ್” ಹಿಂದೂ-ಕ್ರೈಸ್ತರ ಮೇಲೆ ನಡೆಸಲಾಗುತ್ತಿರುವ ಭಯೋತ್ಪಾದನೆಯ ಇನ್ನೊಂದು ಮುಖ | ಕೇರಳದಲ್ಲಿ ಶೋಭಾ ಕರಂದ್ಲಾಜೆ ಹೇಳಿಕೆ!
ತಿರುವನಂತಪುರಂ: “ಲವ್ ಜಿಹಾದ್” ಹಿಂದೂ ಮತ್ತು ಕ್ರೈಸ್ತ ಸಮುದಾಯಗಳ ಮೇಲೆ ನಡೆಸಲಾಗುತ್ತಿರುವ ಭಯೋತ್ಪಾದನೆಯ ಇನ್ನೊಂದು ಮುಖ ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.
ಕೇರಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಈ ಹೇಳಿಕೆ ನೀಡಿರುವುದಾಗಿ “ಜನ್ಮಭೂಮಿ” ವರದಿ ಮಾಡಿದೆ. ಕೇರಳ ರಾಜ್ಯ ಸರ್ಕಾರವು ಲವ್ ಜಿಹಾದ್ ವಿರುದ್ಧ ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಎಂದು ಸಂಸದೆ ಇದೇ ಸಂದರ್ಭದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
2011ರಿಂದ 2016ರವರೆಗೆ ಕೇರಳದಲ್ಲಿ 5,673 ಯುವತಿಯರನ್ನು ಇಸ್ಲಾಂಗೆ ಮತಾಂತರ ಮಾಡಲಾಗಿದೆ. ಈ ಪೈಕಿ 1643 ಮಂದಿ ಕ್ರೈಸ್ತ ಸಮುದಾಯಕ್ಕೆ ಸೇರಿದವರಾಗಿದ್ದಾರೆ ಎಂದು ಶೋಭಾ ಕರಂದ್ಲಾಜೆ ಹೇಳಿಕೆ ನೀಡಿದ್ದಾರೆ ಎಂದು ವರದಿಯಾಗಿದೆ.
ಶಬರಿಮಲೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಹಾಗೂ ರಾಜ್ಯ ಸರ್ಕಾರ ಶಬರಿಮಲೆ ವಿರುದ್ಧ ನಿಲುವು ತಳೆದಾಗ ಬಿಜೆಪಿ ಮಾತ್ರವೇ ಧ್ವನಿಯೆತ್ತಿತು ಮತ್ತು ಭಕ್ತರ ಪರವಾಗಿ ಬೀದಿಗಿಳಿಯಿತು. ಕೇರಳದಲ್ಲಿ ಬಿಜೆಪಿಯ ಸಚಿವಾಲಯ ಹಾಗೂ ಶಾಸಕಾಂಗ ಹಿಂದೂಗಳ ಪರವಾಗಿ ಮಾತನಾಡಲು ಬರಬೇಕಾದರೆ, ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂದು ಅವರು ಹೇಳಿದರು.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ, ಪೌರತ್ವ ಮಸೂದೆ, ಮುತಾಲಕ್ ಕಾಯ್ದೆಗಳನ್ನು ಬಿಜೆಪಿ ತಂದಿದೆ. ಬಿಜೆಪಿ ಸರ್ಕಾರವು ದೇಶಾದ್ಯಂತ ಬರಲು ಪ್ರಯತ್ನ ಮಾಡಬೇಕು ಎಂದು ಅವರು ಕಾರ್ಯಕರ್ತರಿಗೆ ಮನವಿ ಮಾಡಿದರು.