ಟ್ರಾವೆಲ್ ಏಜೆಂಟ್ ವಂಚನೆ ಬಯಲು: 22 ವರ್ಷಗಳ ನಂತರ ಭಾರತಕ್ಕೆ ಮರಳಿದ ಮಹಿಳೆ
ಟ್ರಾವೆಲ್ ಏಜೆಂಟ್ ಒಬ್ಬನ ವಂಚನೆಗೆ ಒಳಗಾಗಿ ಪಾಕಿಸ್ತಾನಕ್ಕೆ ಹೋಗಿದ್ದ ಭಾರತೀಯ ಮಹಿಳೆಯೊಬ್ಬರು 22 ವರ್ಷಗಳ ಅನಂತರ ಭಾರತಕ್ಕೆ ಮರಳಿ ಬಂದಿದ್ದಾರೆ. ಸದ್ಯ ಹಮಿದಾ ಅನಾರೋಗ್ಯದಿಂದ ಗಾಲಿಕುರ್ಚಿಯಲ್ಲಿದ್ದಾರೆ . ಹಮೀದಾ ಅವರನ್ನು ವೈದ್ಯಕೀಯ ಚಿಕಿತ್ಸೆಗಾಗಿ ಅಮೃತಸರದ ಗುರುನಾನಕ್ ದೇವ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ತಾನು ಹೇಗೆ ಪಾಕಿಸ್ತಾನಕ್ಕೆ ಹೋದೆ ಎಂಬ ಬಗ್ಗೆ ಸ್ವತಃ ಹಮೀದಾ ಬಾನು ಹೇಳಿದ್ದು ಹೀಗಿದೆ: “ಟ್ರಾವೆಲ್ ಏಜೆಂಟ್ ಒಬ್ಬಾತ ನನ್ನನ್ನು ಮೋಸದಿಂದ ಪಾಕಿಸ್ತಾನಕ್ಕೆ ಕರೆದುಕೊಂಡು ಹೋದ. ನಾನು ಮತ್ತೆ ಭಾರತಕ್ಕೆ ಬರುತ್ತೇನೆ ಎಂಬ ಯಾವ ಭರವಸೆಯೂ ನನಗಿರಲಿಲ್ಲ. ಆದರೆ ಒಂದು ವರ್ಷದ ಹಿಂದೆ, ಭಾರತೀಯ ರಾಯಭಾರ ಕಚೇರಿ ನನ್ನನ್ನು ಸಂಪರ್ಕಿಸಿ ನಾನು ಹಿಂತಿರುಗಬಹುದು ಎಂದು ತಿಳಿಸಿತು. ಪಾಕಿಸ್ತಾನಕ್ಕೆ ಹೋಗುವ ಮುನ್ನ ನಾನು ಮುಂಬೈನಲ್ಲಿ ವಾಸಿಸುತ್ತಿದ್ದೆ. ಟ್ರಾವೆಲ್ ಏಜೆಂಟ್ ನನ್ನನ್ನು ಕೆಲಸಕ್ಕಾಗಿ ದುಬೈಗೆ ಕರೆದೊಯ್ಯುವುದಾಗಿ ಭರವಸೆ ನೀಡಿದ್ದ. ಆದರೆ ಅವರು ನನ್ನನ್ನು ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಹೈದರಾಬಾದ್ಗೆ ಕರೆದುಕೊಂಡು ಹೋಗಿದ್ದ. ನಾನು ತುಂಬಾ ಭಯಭೀತಳಾಗಿದ್ದೆ.” ಎಂದರು.
ತಾನು ಪಾಕಿಸ್ತಾನದಲ್ಲಿ ಅನುಭವಿಸಿದ ಕಷ್ಟಗಳನ್ನು ಸಹ ಹಂಚಿಕೊಂಡ ಹಮೀದಾ, “ಅಲ್ಲಿ ನನ್ನ ಜೀವನವು ‘ಜಿಂದಾ ಲಾಶ್’ (ಜೀವಂತ ಶವ)ನಂತೆ ಆಗಿತ್ತು. ಅಲ್ಲಿ ನನ್ನನ್ನು ಮದುವೆಯಾಗಿದ್ದ ಸಿಂಧಿ ವ್ಯಕ್ತಿಯೊಬ್ಬನೊಂದಿಗೆ ಇರುತ್ತಿದ್ದೆ. ಆದರೆ ಮದುವೆಯಾಗಿ 12 ವರ್ಷಗಳ ನಂತರ ಆತ ನಿಧನನಾದ. ಏನೇ ಆದರೂ ಪಾಕಿಸ್ತಾನ ಸರ್ಕಾರ ಮಾತ್ರ ನನಗೆ ಯಾವುದೇ ತೊಂದರೆ ನೀಡಿಲ್ಲ. ನನ್ನ ತಾಯ್ನಾಡಿಗೆ ಮರಳಲು ಸಹಾಯ ಮಾಡಿದ ಭಾರತ ಮತ್ತು ಪಾಕಿಸ್ತಾನ ಸರ್ಕಾರಗಳಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ” ಎಂದು ಹೇಳಿದರು.
2022ರಲ್ಲಿ ಸ್ಥಳೀಯ ಯೂಟ್ಯೂಬರ್ ವಲಿಯುಲ್ಲಾ ಮರೂಫ್ ಎಂಬವರು ಹಮೀದಾ ಅವರ ದುಃಸ್ಥಿತಿಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಇದರಿಂದ ಭಾರತದಲ್ಲಿನ ಕುಟುಂಬಸ್ಥರು ಹಮೀದಾಳನ್ನು ಮರುಸಂಪರ್ಕಿಸಲು ಸಾಧ್ಯವಾಯಿತು. ಮರೂಫ್ ಅವರ ಪ್ರಯತ್ನದ ಮೂಲಕ ಮಗಳು ಯಾಸ್ಮಿನ್ ಅವರೊಂದಿಗೆ ಹಮೀದಾ ಫೋನ್ನಲ್ಲಿ ಮಾತನಾಡಿದ್ದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj