ಚೀನಾದಿಂದಲೇ ಕೋವಿಡ್ ಸೋಂಕು ವೈರಾಣು ಸೋರಿಕೆ: ಅಮೆರಿಕದ ತನಿಖಾ ಸಂಸ್ಥೆ ಹೇಳಿಕೆ
ಕೋವಿಡ್-19 ಸೋಂಕಿನ ವೈರಾಣು ಚೀನಾದ ಪ್ರಯೋಗಾಲಯದಿಂದಲೇ ಸೋರಿಕೆಯಾಗಿತ್ತು ಎಂಬ ಸಂಗತಿಯನ್ನು ಅಮೆರಿಕದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ಬಹಿರಂಗಪಡಿಸಿದೆ. ಎಫ್‌ಬಿಐ ಮಾಜಿ ವಿಜ್ಞಾನಿ ಹಾಗೂ ಸೂಕ್ಷ್ಮ ಜೀವವಿಜ್ಞಾನ ವೈದ್ಯ ಜೇಸನ್ ಬನ್ನನ್ ರ ತಂಡ ಕೋವಿಡ್-19 ಮೂಲವನ್ನು ಪತ್ತೆ ಹಚ್ಚಿದೆ ಎಂದು ವಾಲ್‌ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.
ಸತ್ಯಶೋಧನಾ ವರದಿಯನ್ನು ನಿರ್ಗಮನದ ಹೊಸ್ತಿಲಲ್ಲಿರುವ ಅಧ್ಯಕ್ಷ ಜೋ ಬೈಡನ್ ರಿಗೆ ಸಲ್ಲಿಸಲು ತನಿಖಾ ಸಂಸ್ಥೆಗೆ ಇನ್ನೂ ಅನುಮತಿ ನೀಡಿಲ್ಲ ಎಂದು ತಿಳಿದು ಬಂದಿದೆ.
ಕೋವಿಡ್-19 ವೈರಾಣು ಮೂಲ ಪತ್ತೆಗೆ 2021ರಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಆದೇಶ ನೀಡಿದ್ದರು. ವೈರಾಣು ಮಾನವ ನಿರ್ಮಿತವೇ ಅಥವಾ ಪ್ರಾಣಿಗಳಿಂದ ಹರಡುತ್ತಿದೆಯೇ ಎಂಬ ಅಂಶ ಕಂಡುಕೊಳ್ಳಲು ಎಫ್‌ಬಿಐಗೆ ನಿರ್ದೇಶನ ನೀಡಿದ್ದರು.
ಎಫ್‌ಬಿಐ ನೇತೃತ್ವದಲ್ಲಿ ರಾಷ್ಟ್ರೀಯ ಗುಪ್ತಚರ ಮಂಡಳಿಯ ವಿಜ್ಞಾನಿಗಳು ಹಾಗೂ ವೈದ್ಯರು ಕೋವಿಡ್ ವೈರಾಣು ಮೂಲದ ಪತ್ತೆಗೆ ಅಧ್ಯಯನ ನಡೆಸಿದ್ದರು. 2021ರ ಆಗಸ್ಟ್‌ನಲ್ಲಿ ಜೋ ಬೈಡೆನ್ ಸರಕಾರಕ್ಕೆ ಮಧ್ಯಂತರ ವರದಿ ಸಲ್ಲಿಸಿದ್ದ ತನಿಖಾ ತಂಡ, ವೈರಾಣು ಪ್ರಾಣಿಗಳಿಂದ ಹರಡಿರುವ ಸಾಧ್ಯತೆ ತೀರ ಕಡಿಮೆ ಎಂದು ವರದಿ ನೀಡಿತ್ತು.
ತನಿಖೆ ಮುಂದುವರಿಸಿದ್ದ ಎಫ್‌ಬಿಐ ತಜ್ಞರು, ಮತ್ತಷ್ಟು ಆಳವಾದ ಅಧ್ಯಯನ ಕೈಗೊಂಡಿದ್ದರು. ಸೋಂಕಿನ ಸೂಕ್ಷ್ಮ ವಿಶ್ಲೇಷಣೆ ಮಾಡುವ ಮೂಲಕ ವೈರಾಣು ಪ್ರಯೋಗಾಲಯದಿಂದ ಸೋರಿಕೆಯಾಗಿರುವ ಸಂಭವ ಹೆಚ್ಚು ಎಂಬ ಸಂಗತಿಯನ್ನು ಕಂಡುಕೊಂಡಿದ್ದಾರೆ. ”ನಮ್ಮ ವಿಶ್ಲೇಷಣೆ ಮೇಲೆ ನಮಗೆ ಪೂರ್ಣ ವಿಶ್ವಾಸವಿದೆ. ವೈರಾಣು ಚೀನಾ ಪ್ರಯೋಗಾಲಯದಿಂದ ಸೋರಿಕೆಯಾಗಿದೆ ಎಂಬುದು ನಂಬಿಕೆಯಾಗಿದೆ,” ಎಂದು ವಿಜ್ಞಾನಿ ಜೇಸನ್ ಬನ್ನನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj