ಅಯ್ಯಪ್ಪ ಕಾಪಾಡಲಿಲ್ಲ: ಇದ್ದ ಒಬ್ಬ ಮಗನನ್ನೂ ಕಳೆದುಕೊಂಡ ಮಲ್ಲವ್ವ ಮೂಕರೋದನೆ ಕೇಳುವವರು ಯಾರು?
ಹುಬ್ಬಳ್ಳಿಯ ಸಾಯಿ ನಗರದ ಈಶ್ವರ ದೇವಸ್ಥಾನದಲ್ಲಿ ಸಿಲಿಂಡರ್ ಸ್ಫೋಟಕ್ಕೆ ಬಲಿಯಾದವರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ಈ ನಡುವೆ ತಮ್ಮವರನ್ನು ಕಳೆದುಕೊಂಡ ಕುಟುಂಬಸ್ಥರ ನೋವನ್ನು ಹೇಳತೀರದು. ಈ ಪೈಕಿ 16 ವರ್ಷದ ಅಯ್ಯಪ್ಪ ಮಾಲಾಧಾರಿ ರಾಜು ಮೂಗೇರಿಯನ್ನು ಕಳೆದುಕೊಂಡು ತಾಯಿ ಮಲ್ಲವ್ವ ಕಂಗಾಲಾಗಿದ್ದಾರೆ.
ಭಾನುವಾರ ಮಗನ ಮೂರನೇ ದಿನದ ತಿಥಿ ಕಾರ್ಯ ನಡೆದಿತ್ತು. ರಾಜುವಿನ ಭಾವ ಚಿತ್ರಕ್ಕೆ ಕುಟುಂಬಸ್ಥರು ಪೂಜೆ ಸಲ್ಲಿಸಿದ್ದಾರೆ. ತಾಯಿ ಮಲ್ಲವ್ವನ ದುಃಖ ಕಣ್ಣೀರಾಗಿ ಹರಿದು ಭೂಮಿಗೆ ಸೇರಿದೆ. ತನಗೆ ಆಸರೆಯಾಗಿದ್ದ, ಬಾಳಿ ಬದುಕಬೇಕಿದ್ದ ಪುತ್ರನನ್ನು ಕಳೆದುಕೊಂಡಿರುವ ಮಲ್ಲವ್ವಳ ಮನಸ್ಸಿನ ಭಾರ ಆಕೆ ಮಾತ್ರವೇ ತಿಳಿಯಲು ಸಾಧ್ಯ.
ಮೃತ ರಾಜುವಿನ ತಂದೆ ನಿಧನರಾಗಿ 5 ವರ್ಷಗಳು ಕಳೆದಿವೆ. ರಾಜುವಿನ ದೊಡ್ಡ ಸಹೋದರ 4 ವರ್ಷದವನಿದ್ದಾಗ ಡೆಂಗ್ಯೂಗೆ ಬಲಿಯಾಗಿದ್ದ. ಚಿಕ್ಕಗೂಡಿನಲ್ಲಿ ರಾಜು ಹಾಗೂ ಆಕೆಯ ತಾಯಿ ಇಬ್ಬರೇ ಜೀವನ ನಡೆಸುತ್ತಿದ್ದರು. ಆದರೆ, ಇದೀಗ ಇದ್ದ ಮಗನನ್ನೂ ಕಳೆದುಕೊಂಡು ಮಲ್ಲವ್ವ ಒಬ್ಬಂಟಿಯಾಗಿದ್ದಾರೆ.
ಶಾಲೆಯಿಂದ ಓಡಿ ಬರುತ್ತಿದ್ದ ರಾಜು, ನೇರವಾಗಿ ತರಕಾರಿ ಮಾರಲು ಹೋಗುತ್ತಿದ್ದ. ತಾಯಿ ಮಲ್ಲವ್ವ ಕೂಡ ತರಕಾರಿ ಮಾರಾಟ ಮಾಡಿ ಮಗನನ್ನು ಸಾಕುತ್ತಿದ್ದಳು. ಹೇಗೋ ಚೆನ್ನಾಗಿ ಸಾಗುತ್ತಿದ್ದ ಜೀವನ, ಅಯ್ಯಪ್ಪ ಮಾಲಾಧಾರಿಯಾಗಿದ್ದ ಸಂದರ್ಭದಲ್ಲೇ ರಾಜು ಸಾವನ್ನಪ್ಪಿದ್ದಾನೆ. ಮನೆಯಲ್ಲಿ ಕುಟುಂಬಸ್ಥರು, ಸ್ನೇಹಿತರು ಕಂಬನಿ ಮಿಡಿಯುತ್ತಿದ್ದಾರೆ. ಹೆತ್ತಮಗನನ್ನು ನೆನೆದು ಮಲ್ಲವ್ವ ಕಂಬನಿ ಹಾಕುತ್ತಿದ್ದಾರೆ. ಅವರ ಮೂಕರೋದನೆ ಕೇಳುವವರು ಯಾರು?
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: