ಮದುವೆಯಾಗಿ ಒಂದೇ ದಿನದಲ್ಲಿ ಗಲಾಟೆ: ಪೊಲೀಸ್ ಠಾಣೆ ಮೆಟ್ಟಿಲೇರಿದ ಚೈತ್ರಾ ಕೊಟ್ಟೂರು ದಂಪತಿ!
ಕೋಲಾರ: ಬಿಗ್ ಬಾಸ್ ನ ಮಾಜಿ ಸ್ಪರ್ಧಿ ಚೈತ್ರಾ ಕೊಟ್ಟೂರು ಮದುವೆಯಾಗಿ ಒಂದೇ ದಿನದಲ್ಲಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ನಿನ್ನೆಯಷ್ಟೇ ಅವರು ಮಂಡ್ಯ ಮೂಲದ ನಾಗರ್ಜುನ್ ಜೊತೆಗೆ ವಿವಾಹವಾಗಿದ್ದರು.
ಬೆಂಗಳೂರಿನ ದೇವಸ್ಥಾನದಲ್ಲಿ ಇಬ್ಬರೂ ಮದುವೆಯಾಗಿದ್ದರು. ಮದುವೆಯಾದ ಒಂದೇ ದಿನಕ್ಕೆ ಇಬ್ಬರೂ ಕೋಲಾರದ ಮಹಿಳಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ನಾಗರ್ಜುನ್ ಮನೆಯವರಿಗೆ ಈ ಮದುವೆ ಇಷ್ಟವಿರಲಿಲ್ಲ ಎಂದು ಹೇಳಲಾಗಿದೆ.
ಮದುವೆಯ ಬಳಿಕ ನಾಗರ್ಜುನ್ ಮನೆಯವರು ಕುರುಬರಪೇಟೆಯಲ್ಲಿರುವ ಚೈತ್ರಾ ಮನೆಗೆ ಬಂದು ಗಲಾಟೆ ಮಾಡಿ ಹೋಗಿದ್ದಾರೆ. ಇದಲ್ಲದೇ ಮದುವೆಯ ಭಿನ್ನಾಭಿಪ್ರಾಯದ ಬಗ್ಗೆ ನಾಗರ್ಜುನ್ ಕುಟುಂಬಸ್ಥರು ಕೋಲಾರ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇನ್ನೂ ಈ ಸಂಬಂಧ ಚೈತ್ರಾ ಮತ್ತು ನಾಗಾರ್ಜುನ್ ದಂಪತಿಯನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ. ಅಲ್ಲಿ, ಈ ಮದುವೆ ಇಷ್ಟವಿರಲಿಲ್ಲ. ನಾನು ಚೈತ್ರಾ ಜತೆ ಬಾಳುವುದಿಲ್ಲ ಎಂದು ನಾಗರ್ಜುನ್ ಹೇಳಿಕೆ ನೀಡಿದ್ದಾನೆ. ಆದರೆ, ಚೈತ್ರಾ ಮಾತ್ರ ತಾನು ನಾಗರ್ಜುನ್ ಜೊತೆಗೆ ಇರುವುದಾಗಿ ಪಟ್ಟು ಹಿಡಿದಿದ್ದಾರೆ ಎಂದು ವರದಿಯಾಗಿದೆ.