ಅಲಿಘರ್ ನ ಐತಿಹಾಸಿಕ ಮಸೀದಿಯ ಮೇಲೆ ಕೋಮುವಾದಿಗಳ ಕಣ್ಣು: ಮಸೀದಿಯನ್ನು ಮಂದಿರ ಎಂದು ವಿವಾದ
ಸಂಭಾಲ್ ನ ಜಾಮ ಮಸೀದಿ, ಮಥುರಾದ ಮಸೀದಿ, ವಾರಣಾಸಿ ಮತ್ತು ಬದೌನ್ ಮಸೀದಿಯ ಬಳಿಕ ಇದೀಗ ಉತ್ತರಪ್ರದೇಶದ ಅಲಿಘರ್ ನ ಐತಿಹಾಸಿಕ ಮಸೀದಿಯ ಮೇಲೆ ಕೋಮುವಾದಿಗಳ ಕಣ್ಣು ನೆಟ್ಟಿದೆ. 300 ವರ್ಷಗಳ ಹಳೆಯದಾದ ಈ ಮಸೀದಿಯನ್ನು ಮಂದಿರ ಎಂದು ಹೇಳಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ.
ಯಾವುದೇ ಮಸೀದಿಯನ್ನು ಮಂದಿರ ಎಂದು ಹೇಳಿ ಬರುವ ಅರ್ಜಿಯನ್ನು ಪರಿಗಣಿಸಬಾರದು ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ಆದೇಶ ನೀಡಿದ ಬಳಿಕ ಈ ಅರ್ಜಿ ಸಲ್ಲಿಕೆಯಾಗಿದೆ. ಇದೇ ವೇಳೆ 18 ನೇ ಶತಮಾನದಲ್ಲಿ ಮುಘಲರು ಕಟ್ಟಿರುವ ಈ ಮಸೀದಿಯು ಯಾವುದೇ ಕಾರಣಕ್ಕೂ ಮಂದಿರ ಅಲ್ಲ ಎಂದು ಮಸೀದಿ ಆಡಳಿತ ಸಮಿತಿ ಹೇಳಿದೆ.
ಇದೇ ವೇಳೆ ಈ ಅರ್ಜಿಯನ್ನು ಪರಿಗಣಿಸಿರುವ ಸ್ಥಳೀಯ ನ್ಯಾಯಾಲಯವು ಫೆಬ್ರವರಿ 15 ಕ್ಕೆ ವಿಚಾರಣೆಯನ್ನು ನಿಗದಿಪಡಿಸಿದೆ. ಈ ಜಾಮ ಮಸೀದಿಯು ಶಿವಮಂದಿರ ಜೈನ ಮಂದಿರ ಮತ್ತು ಬೌದ್ಧ ಸ್ತೂಪದ ಮೇಲೆ ಕಟ್ಟಲಾಗಿದೆ ಎಂದು ಪಂಡಿತ್ ಕೇಶವ್ ದೇವ್ ಗೌತಮ್ ಎಂಬವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಇವರು ಎರಡು ವರ್ಷಗಳ ಹಿಂದೆ ಈ ಮಸೀದಿಯ ಮಾಹಿತಿಯನ್ನು ಕೋರಿ ಸ್ಥಳೀಯ ಆಡಳಿತಕ್ಕೆ ಆರ್‌ಟಿಇ ಅರ್ಜಿ ಸಲ್ಲಿಸಿದ್ದರು. ಆದರೆ ಅದು ಮಸೀದಿ ಇರುವಿಕೆಯ ಬಗ್ಗೆ ಸ್ಪಷ್ಟತೆಯನ್ನು ನೀಡಿಲ್ಲದೆ ಇರುವುದರಿಂದ ತಾನು ನ್ಯಾಯಾಲಯಕ್ಕೆ ಹೋಗಿರುವುದಾಗಿ ಅವರು ಹೇಳಿದ್ದಾರೆ.
ಮಸೀದಿಯನ್ನು ಸರಕಾರಿ ಭೂಮಿಯಲ್ಲಿ ಕಟ್ಟಲಾಗಿದೆ ಎಂದು ಹೇಳಿ ಈ ಹಿಂದೆ ಇದೇ ಕೇಶವ್ ಗೌತಮ್ ಅವರು ಆಗ್ರಹಿಸಿದ್ದರು ಮತ್ತು ಸರ್ವೆಗೆ ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಆರ್ ಟಿ ಐ ಅರ್ಜಿಯನ್ನು ಸಲ್ಲಿಸುವ ಚಾಳಿಯನ್ನು ಇವರು ಹೊಂದಿದ್ದು ಈ ಹಿನ್ನೆಲೆಯಲ್ಲಿ ಕೆಲವು ಪ್ರಕರಣಗಳು ಇವರ ವಿರುದ್ಧ ದಾಖಲಾಗಿವೆ. 2024ರಲ್ಲಿ ಲೋಕಸಭಾ ಚುನಾವಣೆಗೆ ಇವರು ಬಿಜೆಪಿ ಅಭ್ಯರ್ಥಿ ಸತೀಶ್ ಕುಮಾರ್ ಗೌತಮ್ ಅವರ ವಿರುದ್ಧ ಪಕ್ಷೇತರರಾಗಿ ಸ್ಪರ್ಧಿಸಿದ್ದರು. ಇವರಿಗೆ ಕೇವಲ 1919 ಮತಗಳು ಸಿಕ್ಕಿದ್ದು ಇಲ್ಲಿ ಬಿಜೆಪಿ ಅಭ್ಯರ್ಥಿ ಜಯ ಗಳಿಸಿದ್ದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj