ಕೊಟ್ಟ ಸಾಲ ವಾಪಸ್ ಕೇಳಿದ ಎಂದು ಜಮಾತ್ ಮಾಜಿ ಅಧ್ಯಕ್ಷನ ಕೊಚ್ಚಿ ಕೊಂದ!
ಪಿರಿಯಾಪಟ್ಟಣ: ಸಾಲ ಪಡೆದುಕೊಂಡವ ಸಾಲ ನೀಡಿದ ವ್ಯಕ್ತಿಯನ್ನೇ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕೊಡಗು ಜಿಲ್ಲೆಯ ನಾಪೋಕ್ಲು ನಡೆದಿದ್ದು, ಕೊಲೆಯ ಬಳಿಕ ಆರೋಪಿ ಪೊಲೀಸರಿಗೆ ಶರಣಾಗಿದ್ದಾನೆ.
ಕೊಡಗು ಜಿಲ್ಲೆ ನಾಪೋಕ್ಲು ಬಳಿಯ ಕೊಟ್ಟಮುಡಿ ಗ್ರಾಮದ ಜಮಾತ್ ಮಾಜಿ ಅಧ್ಯಕ್ಷ 52 ವರ್ಷದ ಕೆ.ಎ.ಹ್ಯಾರಿಸ್ ಅವರನ್ನು ಹಮೀದ್ ಎಂಬಾತ ಸೋಮವಾರ ಬೆಳಿಗ್ಗೆ ಹತ್ಯೆ ಮಾಡಿ ಪೊಲೀಸರಿಗೆ ಶರಣಾಗಿದ್ದಾನೆ.
ಹ್ಯಾರಿಸ್ ಅವರ ಬಳಿ ಆರೋಪಿಯು ಸಾಲ ಪಡೆದಿದ್ದ. ಸಾಲವನ್ನು ಮರುಪಾವತಿಸುವಂತೆ ಒತ್ತಡ ಹೇರುತ್ತಿದ್ದುದ್ದರಿಂದ ಹಮೀದ್ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಟ್ಟಣದಲ್ಲಿ ಗೋದಾಮು ತೆರೆದು ಅಡಿಕೆ ವ್ಯಾಪಾರ ನಡೆಸುತ್ತಿದ್ದ ಹ್ಯಾರಿಸ್ ಬಳಿ ಕೆಲಸ ಮಾಡುತ್ತಿದ್ದ ಕೊಡಗು ಜಿಲ್ಲೆ ಮೂರ್ನಾಡು ಗ್ರಾಮದ ಹಮೀದ್ ನಂತರದ ದಿನಗಳಲ್ಲಿ ಸ್ವಂತ ವ್ಯಾಪಾರ ಶುರು ಮಾಡಿದ್ದ.
ವ್ಯಾಪಾರಕ್ಕಾಗಿ ಹ್ಯಾರಿಸ್ ಬಳಿ 18 ಲಕ್ಷ ರೂ. ಸಾಲವನ್ನೂ ಪಡೆದಿದ್ದ. ಅಷ್ಟು ಹಣ ಹಿಂದಿರುಗಿಸಲು ಸಾಧ್ಯವಿಲ್ಲ ಎಂದು ಹಮೀದ್ ಆಕ್ಷೇಪ ವ್ಯಕ್ತಪಡಿಸಿದ್ದರಿಂದ, ಸ್ಥಳೀಯರು 11 ಲಕ್ಷ ರೂ. ಹಣ ನೀಡುವಂತೆ ತೀರ್ಮಾನಿಸಿದ್ದರು.
ಈ ಹಣದಲ್ಲಿ 6 ರೂ. ಲಕ್ಷ ಸಾಲ ಮರುಪಾವತಿಸಿದ್ದು, ಉಳಿದ ಹಣ ನೀಡುವಂತೆ ಹ್ಯಾರಿಸ್ ಒತ್ತಡ ಹೇರಿದ್ದರು. ಸೋಮವಾರ ಬೆಳಿಗ್ಗೆ 10 ಗಂಟೆ ಸಮಯದಲ್ಲಿ ತಾಲ್ಲೂಕಿನ ಚೌಡೇನಹಳ್ಳಿ ಗ್ರಾಮದಲ್ಲಿ ಹಮೀದ್ ತಾನು ತೆರೆದಿದ್ದ ಅಡಿಕೆ ಸಂಗ್ರಹ ಶೆಡ್ ಬಳಿ ಹಣ ನೀಡುವುದಾಗಿ ಕರೆ ಮಾಡಿ ಕರೆಸಿಕೊಂಡಿದ್ದಾನೆ. ನಂತರ, ಮಚ್ಚಿನಿಂದ ಕೊಚ್ಚಿ ಹತ್ಯೆಗೈದು ಠಾಣೆಗೆ ಬಂದು ಶರಣಾದ ಎಂದು ಪೊಲೀಸರು ತಿಳಿಸಿದ್ದಾರೆ.
ಹತ್ಯೆ ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಹ್ಯಾರಿಸ್ ಅವರ ನೂರಾರು ಮಂದಿ ಸಂಬಂಧಿಕರು ಹಾಗೂ ಸ್ನೇಹಿತರು ಜಮಾಯಿಸಿದರು. ಇದರಿಂದ ಕೆಲಹೊತ್ತು ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. ಸ್ಥಳಕ್ಕೆ ಪೊಲೀಸ್ ಇನ್‌ಸ್ಪೆಕ್ಟರ್‌ಗಳಾದ ಜಗದೀಶ್ ಹಾಗೂ ಬಿ.ಆರ್.ಪ್ರದೀಪ್ ಸಿಬ್ಬಂದಿಯೊಡನೆ ಬಂದು ಪರಿಸ್ಥಿತಿ ನಿಯಂತ್ರಣಕ್ಕೆ ತಂದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಡಿಕೇರಿ ಆಸ್ಪತ್ರೆಗೆ ರವಾನಿಸಿದರು.