ಕವಿ ಸಿದ್ದಲಿಂಗಯ್ಯನೊಳಗೊಬ್ಬ ಸಂತನಿದ್ದ..!
- ಉದಂತ ಶಿವಕುಮಾರ
ನಾನು, ಕವಿ ಸಿದ್ದಲಿಂಗಯ್ಯನವರನ್ನು ಮೊದಲಿಗೆ ಭೇಟಿಯಾದದ್ದು 2013ನೇ ಇಸ್ವಿಯಲ್ಲಿ. ಆಗ ನಾನು ಲಗ್ಗೆರೆ ವಿದ್ಯಾಪ್ರಿಯ ಶಾಲೆಯಲ್ಲಿ ಗಣಿತ ಶಿಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿದೆ. ಆ ವರ್ಷ ಶಾಲಾವಾರ್ಷಿಕೋತ್ಸವ ನಡೆಸಲು ಶಾಲೆಯ ಕಾರ್ಯದರ್ಶಿ ರವಿಕಾಂತ್ ರವರು ನನಗೆ ಜವಾಬ್ದಾರಿ ನೀಡಿದರು. ಶಾಲೆಯ ಪಕ್ಕದಲ್ಲಿದ್ದ ಖಾಲಿ ಜಾಗ ವಿಸ್ತಾರವಾಗಿತ್ತು, ಅಲ್ಲಿ ಇನ್ನೂ ಮನೆಗಳು ಹೆಚ್ಚಾಗಿ ನಿರ್ಮಾಣವಾಗಿರಲಿಲ್ಲ, ಅಲ್ಲೊಂದು ಇಲ್ಲೊಂದು ಎಂಬಂತೆ ಮನೆಗಳಿದ್ದವು. ಹೊರಾಂಗಣದಲ್ಲಿ ತೆರೆದ ವೇದಿಕೆಯನ್ನು ಅದ್ದೂರಿಯಾಗಿ ವ್ಯವಸ್ಥೆ ಮಾಡಿಕೊಟ್ಟಿದ್ದರು. ಈ ಸಂದರ್ಭದಲ್ಲಿ ನನಗೆ ಕಾರ್ಯದರ್ಶಿಯವರು ಅಥಿಗಳನ್ನು ಆಯ್ಕೆ ಮಾಡುವ ಮತ್ತು ಅವರನ್ನು ಕರೆತರವುದು ನನಗೆ ವಹಿಸಿದ್ದರು. ಈ ವೇಳೆ ಕವಿ ಸಿದ್ದಲಿಂಗಯ್ಯನವರು ಜ್ಞಾನಭಾರತಿ ಕ್ವಾಟರ್ಸ್ ನಲ್ಲಿ ಇದ್ದರು. ಅವರನ್ನು ಶಾಲಾ ವಾರ್ಷಿಕೋತ್ಸವಕ್ಕೆ ಕರೆಯಲು ಹೋದೆ. ಅವರ ಪತ್ನಿ ರಮಾ ಕುಮಾರಿಯವರು ಬಾಗಿಲು ತಗೆದರು. ‘ಸಾರ್ ನ ನೋಡಬೇಕಿತ್ತು ಎಂದೆ’ ಅದಕ್ಕವರು ‘ಬರ್ತಾರೆ ಕೂತ್ಕೊಳ್ಳಿ’ ಎಂದರು. ಹೀಗೆ ಹೇಳಿ ಅವರು ಒಳ ನಡೆದಂತೆ, ಸಿದ್ದಲಿಂಗಯ್ಯನವರು ಹೊರಬಂದರು. ನಾನು ಎದ್ದು ನಿಂತು ‘ ನಮಸ್ಕಾರ ಸಾರ್ ಎಂದೆ’ ‘ಕುಳಿತುಕೊಳ್ಳಿ ಎಂದು ಹೇಳಿ, ಎದುರಿನ ಕುರ್ಚಿಯಲ್ಲಿ ಸಿದ್ದಲಿಂಗಯ್ಯನವರು ಕುಳಿತುಕೊಂಡರು. ‘ಏನು ವಿಷಯ ಬಂದಿದ್ದು’ ಎಂದರು. ಅದಕ್ಕೆ ನಾನು ‘ಸಾರ್ ಗಣಿತ ಶಿಕ್ಷಕನಾಗಿ ಲಗ್ಗೆರೆ ವಿದ್ಯಾಪ್ರಿಯ ಎಂಬ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದೇನೆ, ಶಾಲಾ ವಾರ್ಷಿಕೋತ್ಸವವನ್ನು ಈ ಬಾರಿ ಅದ್ದೂರಿಯಾಗಿ ಆಚರಿಸಬೇಕೆಂದು ತೀರ್ಮಾನಿಸಿದ್ದೇವೆ. ನೀವು ಮುಖ್ಯ ಅತಿಥಿಗಳಾಗಿ ಬರಬೇಕೆಂದು ಎಂದು ಹೇಳಿದೆ. ಅದಕ್ಕೆ ಸಿದ್ದಲಿಂಗಯ್ಯನವರು ಸ್ವಲ್ಪ ಹೊತ್ತು ಯೋಚಿಸಿ ‘ಮಿಡ್ಲ್ ಸ್ಕೂಲ್ ಮತ್ತು ಹೈಸ್ಕೂಲು ಮಕ್ಕಳು ಅನ್ನುತ್ತೀರ ಅವರಿಗೆ ನಮ್ಮ ಭಾಷಣ ಅರ್ಥ ಆಗುತ್ತಾ’ ಎಂದರು. ಇದಕ್ಕೆ ನನ್ನ ಹತ್ತಿರ ಉತ್ತರವಿರಲಿಲ್ಲ, ನಂತರ ಯೋಚಿಸಿ ‘ಸರ್ ಮಕ್ಕಳಿಗಿಂತ ಅಲ್ಲಿ ಪೋಷಕರು ಹೆಚ್ಚಾಗಿ ಸೇರುತ್ತಾರೆ ಹೊರಾಂಗಣದಲ್ಲಿ ಕಾರ್ಯಕ್ರಮ’ ಎಂದು ಹೇಳಿದೆ ಒಂದು ನಿಮಿಷ ಯೋಚಿಸಿದ ಸಿದ್ದಲಿಂಗಯ್ಯನವರು ‘ಆಗಲಿ ಬರುತ್ತೇನೆ ಆದರೆ ನನಗೆ ಆರೋಗ್ಯದ ಸಮಸ್ಯೆ ಇದೆ. ಆದ್ದರಿಂದ ನೀವು ನನಗೆ ಕುಡಿಯಲು ಬಿಸಿನೀರು ಕೊಡಬೇಕು’ ಎಂದರು ಆಗಲಿ ಸಾರ್ ಎಂದೆ. ‘ಕರೆದುಕೊಂಡು ಹೋಗುವುದು ಕಾರ್ಯಕ್ರಮ ಮುಗಿದ ಮೇಲೆ ಕಳೆದುಕೊಂಡು ಮನೆಗೆ ಬಿಡುವ ವ್ಯವಸ್ಥೆಯೂ ಆಗಬೇಕು’ ಎಂದರು. ‘ಆಗಲಿ ಸಾರ್ ಅದಕ್ಕೆ ವ್ಯವಸ್ಥೆ ಮಾಡುತ್ತೇನೆ’ ಎಂದು ಹೇಳಿದೆ. ಅವರು ಕಾರ್ಯಕ್ರಮಕ್ಕೆ ಬರಲು ಒಪ್ಪಿಕೊಂಡಿದ್ದು ನನಗೆ ಖುಷಿಯಾಗಿದ್ದು ಹೊರಬಂದೇನು.
ಶಾಲಾ ವಾರ್ಷಿಕೋತ್ಸವದ ದಿನ. ಅಂದು ರಾತ್ರಿ 8 ಗಂಟೆಗೆ ಶಾಲಾ ವಾರ್ಷಿಕೋತ್ಸವಕ್ಕೆ ನಟಿ ಪ್ರೇಮ ಮತ್ತು ಅವರ ತಾಯಿ, ಕೆ ಪಿ ನಂಜುಂಡಿ, ಗಣೇಶ ಕಾಸರಗೋಡು, ಲಾಲಿ ಚಿತ್ರದ ನಿರ್ದೇಶಕರು, ಮತ್ತು ಸಾರಾ ಗೋವಿಂದು ಹಾಗು ಕವಿ ಸಿದ್ದಲಿಂಗಯ್ಯನವರು ಹೀಗೆ ಹಲವರು ಪ್ರಮುಖರನ್ನು ಸೇರಿಸಲಾಗಿತ್ತು. ಈ ಮೊದಲೇ ಶಾಲಾ ವಾರ್ಷಿಕೋತ್ಸವಕ್ಕೆ ನಟಿ ಪ್ರೇಮ ಬರುವ ಬಗ್ಗೆ ಆಟೋ ಪ್ರಚಾರ ಮಾಡಿದ್ದೆವು. ಹಾಗಾಗಿ ಆ ಭಾಗದಲ್ಲಿ ಗಾರ್ಮೆಂಟ್ಸ್ ಗೆ ಹೋಗುವ ಮಹಿಳೆಯರು ಅಧಿಕವಾಗಿದ್ದರು ಅವರೆಲ್ಲರೂ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಹೆಚ್ಚಾಗಿ ಪಾಲ್ಗೊಂಡಿದ್ದರು. ವೇದಿಕೆಯಿಂದ ನೋಡಿದರೆ ಜನಸಾಗರವೇ ಸೇರಿದಂತೆ ಭಾಸವಾಗುತ್ತಿತ್ತು. ಕವಿ ಸಿದ್ದಲಿಂಗಯ್ಯನವರನ್ನು ಮತ್ತು ನಟಿ ಪ್ರೇಮ ಅವರನ್ನು ವೇದಿಕೆಗೆ ಕರೆದುಕೊಂಡು ಹೋಗುವುದಕ್ಕೆ ಆ ಜನರ ನಡುವೆ ಹರಸಾಹಸ ಮಾಡಬೇಕಾಯಿತು. ಕಾರ್ಯಕ್ರಮ ಮುಗಿದ ಮೇಲೆ ಸಿದ್ಧಲಿಂಗಯ್ಯನವರು ‘ನಾನು ಮಕ್ಕಳ ಕಾರ್ಯಕ್ರಮ ಎಂದುಕೊಂಡಿದ್ದೆ, ಮಕ್ಕಳಿಗಿಂತ ಪೋಷಕರೇ ಹೆಚ್ಚಾಗಿದ್ದಾರೆ’ ಎಂದು ಹೇಳಿ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಚೆನ್ನಾಗಿ ಆ ಯೋಜನೆ ಮಾಡಿದ್ದೀರಿ ಎಂದು ಖುಷಿ ಪಟ್ಟರು. ಅಂದಿನಿಂದ ಸಿದ್ದಲಿಂಗಯ್ಯನವರು ನನಗೆ ಪರಿಚಯವಾದರು.
ನಂತರ ಸುಮಾರು ವರ್ಷಗಳು ಅವರಲ್ಲಿಗೆ ನಾನು ಹೋಗುವ ಪ್ರಸಂಗ ಬರಲೇ ಇಲ್ಲ. ತದನಂತರ ಅವರ ಸಂಪರ್ಕಕ್ಕೆ ಹೋಗಿದ್ದು ಅವರ ಕೊನೆಯ ವರ್ಷಗಳಲ್ಲಿ ಎಂದರೆ ತಪ್ಪಾಗಲಾರದು. ಆಗ ಹೊ ಬೊ. ಪುಟ್ಟೇಗೌಡರು ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದರು. ಅವರು ಸಾಹಿತ್ಯ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರು ನಾನು ಕವಿತೆಗಳನ್ನು ಬರೆಯುತ್ತಿದ್ದೆ. ಈ ವಿಚಾರಕ್ಕಾಗಿ ಅವರು ನನ್ನನ್ನು ಕವಿತೆ ವಾಚನ ಮಾಡಲು ಕವಿಗೋಷ್ಠಿಗೆ ಆಹ್ವಾನಿಸುತ್ತಿದ್ದರು. ಹೊಸ ಬೊ ಪುಟ್ಟೇಗೌಡರು ಕಾರ್ಯಕ್ರಮಗಳನ್ನ ನಡೆಸುವ ಮುಂಚೆ ಕವಿ ಸಿದ್ದಲಿಂಗಯ್ಯನವರ ಹತ್ತಿರ ಸಲಹೆ ಸೂಚನೆಗಳನ್ನು ತೆಗೆದುಕೊಳ್ಳುತ್ತಿದ್ದರು. ಹೀಗಿರುವಾಗ ಹೊ ಬೊ ಪುಟ್ಟೇಗೌಡರು ನಾನು ಕೆಲಸ ಮುಗಿಸಿ ಮನೆಗೆ ಬರುವ ವೇಳೆಗೆ ಫೋನ್ ಮಾಡಿ ‘ಉದಂತ ಅವರೇ ನೀವು ರಾಜರಾಜೇಶ್ವರಿ ನಗರಕ್ಕೆ ಬಂದು ಬಿಡಿ, ಗುರುಗಳ ಮನೆಗೆ ಹೋಗಬೇಕು’ ಎಂದು ಹೇಳುತ್ತಿದ್ದರು. ನಾನು ಅಲ್ಲಿಗೆ ಹೋದಾಗ ಹೊ ಬೊ ಪುಟ್ಟೇಗೌಡರು ಕರೆದುಕೊಂಡು ಸಿದ್ದಲಿಂಗಯ್ಯನವರ ಮನೆ ಬನವಾಸಿಗೆ ಹೋಗುತ್ತಿದ್ದೆವು. ಸಿದ್ದಲಿಂಗಯ್ಯನವರು ನಮ್ಮನ್ನು ಸ್ವಾಗತಿಸಿ ಕೂರಿಸಿ, ಅವರು ಎದುರಿನ ಸೋಪಾದ ಮೇಲೆ ಕುಳಿತುಕೊಳ್ಳುತ್ತಿದ್ದರು. ನಂತರ “ರಮಾ ಅವರೇ ಪುಟ್ಟೇಗೌಡರು ಬಂದಿದ್ದಾರೆ ಟೀ ಕೊಡುತ್ತಿರಾ” ಎಂದು ಕೇಳುತ್ತಿದ್ದರು. ನಂತರ ಪುಟ್ಟೇಗೌಡರು ‘ಗುರುಗಳೇ ಉದಂತ ಅವರು ಕವಿತೆಗಳನ್ನು ಬರೆಯುತ್ತಾರೆ’ ಎಂದಾಗ ಸಿದ್ದಲಿಂಗಯ್ಯನವರು ‘ಓ…ಗುಡ್ ಬರೀರಿ ಬರೀರಿ’ ಎಂದು ಹೇಳಿ ಮೌನಕ್ಕೆ ಜಾರುತ್ತಿದ್ದರು. ಅಷ್ಟರಲ್ಲಿ ಟೀ ಬರುತ್ತಿತ್ತು ಮೂವರು ಟೀ ಕುಡಿದ ಮೇಲೆ ಸಿದ್ದಲಿಂಗಯ್ಯನವರು “ಪುಟ್ಟೇಗೌಡ್ರೆ ಐಡಿಯಲ್ ಹೊಂ ಕ್ಲಬ್ ಗೆ ಹೋಗೋಣ ಮುದಲ್ ವಿಜಯ್, ಕರಿಗೌಡರವರಿಗೆ, ದಂಡಪ್ಪನವರಿಗೆ, ನಾರಾಯಣಘಟ್ಟರವರಿಗೆ, ರಾಮೇಗೌಡರಿಗೆ ಫೋನ್ ಹಾಕಿ” ಎಂದು ಹೇಳಿ, ಎದ್ದು ಹೊರಡುತ್ತಿದ್ದರು ಅದರಂತೆ ಪುಟ್ಟೇಗೌಡರು ಎಲ್ಲರಿಗೂ ಫೋನ್ ಮಾಡಿ ಕರೆಯುತ್ತಿದ್ದರು. ಕೆಲವರು ಬಿಡುವಿದ್ದವರು ಬರುತ್ತಿದ್ದರು. ಬಂದವರು ಸುತ್ತ ಕುಳಿತು ತಿಂಡಿಗಳನ್ನು ತರಿಸಿಕೊಂಡು ತಂಪು ಪಾನೀಯಗಳನ್ನು ಕುಡಿಯುತ್ತಾ ಸಾಹಿತ್ಯ ವಿಚಾರಗಳನ್ನು ಮಾತಾಡುತ್ತಿದ್ದರು ನಡುವೆ ಸಿದ್ಧಲಿಂಗಯ್ಯನವರು ಕೆಲವು ಘಟನೆಗಳನ್ನು ಸ್ವಾರಸ್ಯಕರವಾಗಿ ತಿಳಿಸುತ್ತಿದ್ದರು. ಹೀಗೆ ರಾತ್ರಿಯ 11 ಗಂಟೆಯವರೆಗೆ ನಡೆಯುತ್ತಿತ್ತು.
ಒಂದೆರಡು ವರ್ಷಗಳು ಹೀಗೆ ಕಳೆದವು. ಸಿದ್ದಲಿಂಗಯ್ಯನವರು ಎಡಬಿಡದೆ ಕಾರ್ಯಕ್ರಮಗಳಿಗೆ ಹೋಗುತ್ತಿದ್ದರು. ಕರೋನ ವೇಳೆಯಲ್ಲಿ ಅವರು ಕಾರ್ಯಕ್ರಮಗಳಿಗೆ ತಪ್ಪಿಸಿಕೊಳ್ಳುತ್ತಿರಲಿಲ್ಲ. ಹೀಗಿರುವಾಗ ನಾನು ಅದೊಂದು ದಿನ ನನ್ನ ಸ್ನೇಹಿತರು ಒಬ್ಬರು ಇಂಜಿನಿಯರ್ ವಿದ್ಯಾರ್ಥಿಯೊಬ್ಬರಿಗೆ ಪ್ರವೇಶದ ಬಗ್ಗೆ ಬೆಂಗಳೂರು ವಿಶ್ವವಿದ್ಯಾಲಯ ರಿಜಿಸ್ಟರ್ ಆಗಿದ್ದ ರವಿ ಅವರಿಗೆ ಫೋನ್ ಮಾಡಿಸಲು ಸಿದ್ದಲಿಂಗಯ್ಯನವರ ಮನೆಗೆ ಹೋಗಿದ್ದೆವು. ಎಂದಿನಂತೆ ಕಾಫಿ ಕುಡಿಯುತ್ತಾ ಸಿದ್ದಲಿಂಗಯ್ಯನವರು “ಉದಂತ ನಾನು ಇನ್ನೆರಡು ವರ್ಷ ಬದುಕಿರಬಹುದು” ಎಂದರು. ಅದಕ್ಕೆ ನಾನು “ಸಾರ್ ಹಾಗೆನ್ನಬೇಡಿ ಸುಮ್ಮನಿರಿ” ಎಂದೆ ಅವರು ಕೆಮ್ಮುತಲೇ ಇದ್ದರು. ಅವರ ಮುಖವನ್ನು ನೋಡುತ್ತಾ “ಸಾರ್ ಆಪರೇಷನ್ ಮಾಡಿಸಿಕೊಂಡರೆ ಆಗಲ್ವಾ” ಎಂದೆ ಅದಕ್ಕೆ ಅವರು “ಆಪರೇಷನ್ ಮಾಡಿಸಿಕೊಂಡರೆ ಎರಡು ವರ್ಷ ಜಾಸ್ತಿ ಬದುಕಬಹುದು, ಇಲ್ಲದಿದ್ದರೆ ಅದು ಇಲ್ಲ. ಅದಕ್ಕಾಗಿ ಲಕ್ಷಾಂತರ ಸಾಲ ಮಾಡಿ ಮನೆಯವರಿಗೆ ಸಾಲ ಹೊರೆಸಿದಂತೆ ಆಗುತ್ತೆ ಅಲ್ಲವೇ” ಎಂದು ಹೇಳಿ ಮೌನವಾದರು. ಸ್ವಲ್ಪ ಸಮಯದ ನಂತರ “ಮುದಲ್ ವಿಜಯ್ ಕವಿತೆಗಳನ್ನು ಓದಿದ್ದೀರಾ, ಹೇಗೆ ಅನಿಸುತ್ತೆ” ಎಂದು ಕೇಳಿದರು. “ಸಾರ್ ಮೊದಲಿಗಿಂತಲೂ ಈಗ ಚೆನ್ನಾಗಿ ಬರಿತಾರೆ” ಎಂದೆ. “ಬರೆಯಲಿ ಬರೆಯಲಿ”ಎಂದರು. ನಾನು “ಸಾರ್ ಬ್ಯಾಡ್ರಳ್ಳಿ ಶಿವರಾಜ್ ಕೆಲಸಕ್ಕೆ ನೀವು ಏನಾದರೂ ಸಹಾಯ ಮಾಡಬೇಕು”ಎಂದೆ. ಅದಕ್ಕೆ ಸಿದ್ದಲಿಂಗಯ್ಯನವರು “ನೋಡೋಣ ಸದ್ಯಕ್ಕೆ ಇರುವ ಕೆಲಸವನ್ನು ಬಿಡುವುದು ಬೇಡ, ಮಾಡುತ್ತಿರಲಿ” ಎಂದರು. ಅವರು ಕೆಮ್ಮುತ್ತಲೇ ಇದ್ದರು ನಾವು ಅಲ್ಲಿಂದ ಹೊರಟೆವು.
ಕವಿ ಸಿದ್ದಲಿಂಗಯ್ಯನವರು ಕೊನೆಯ ದಿನಗಳಲ್ಲಿ ಸಂಪೂರ್ಣವಾಗಿ ಸಂತನಂತಾಗಿದ್ದರು. ಯಾರಾದರೂ ತೆಗಳಿದರೂ ಹೊಗಳಿದರೂ ಯಾವುದನ್ನು ಬೇಸರಿಸಿಕೊಳ್ಳುತ್ತಿರಲಿಲ್ಲ. ಎಲ್ಲರೂ ನಮ್ಮವರೇ ಎಂದು ಹೇಳುತ್ತಿದ್ದರು. ಏನಾದರೂ ಸಹಾಯ ಮಾಡಬೇಕೆಂದು ಅವರ ಮನಸ್ಸಿಗೆ ಬಂದರೆ, ಅವರ ಜೀವನ ಆರ್ಥಿಕತೆಯ ಬಗ್ಗೆ ತಿಳಿದು, ನೋಡಿ ಸಮಯ ತೆಗೆದುಕೊಂಡು ಸಹಾಯ ಮಾಡಲು ಮುಂದಾಗುತ್ತಿದ್ದರು. ನಾನು ಅವರ ಕೊನೆಯ ದಿನಗಳಲ್ಲಿ ಅವರ “ಕುದಿವ ನೀಲಿಯ ಕಡಲು” ಕವನ ಸಂಕಲಕ್ಕೆ ಅಭಿಪ್ರಾಯ ಬರೆಯಲು ಪ್ರಾರಂಭಿಸಿದ್ದೆ. ಹೀಗಿರುವಾಗ ಅದೊಂದು ದಿನ ಮಧ್ಯಾಹ್ನ ಮೂರು ಗಂಟೆಯ ಸಮಯಕ್ಕೆ ಅವರಿಗೆ ಫೋನ್ ಮಾಡಿ, ಆ ಸಂಕಲನದ ಬಗ್ಗೆ ವಿಚಾರಿಸಲು ಪ್ರಾರಂಭಿಸಿದೆ. ಫೋನ್ ಮಾಡಿದಾಗ “ಉದಂತ ಅವರೇ ಚೆನ್ನಾಗಿದ್ದೀರಾ, “ಏನು ವಿಷಯ” ಎಂದರು. “ಸಾರ್ ನೀವು ಬರೆದಿರುವ “ಕುದಿವ ನೀಲಿಯ ಕಡಲು” ಕವನ ಸಂಕಲನ ಓದಿ ನಾನು ಅವುಗಳಿಗೆ ಅಭಿಪ್ರಾಯ ಬರೆಯಬೇಕೆಂದು ತೀರ್ಮಾನಿಸಿದ್ದೇನೆ. ಕೆಲವು ಕವಿತೆಗಳ ಬಗ್ಗೆ ನನಗೆ ನಿಮ್ಮಿಂದ ಉತ್ತರಗಳು ಬೇಕಾಗಿತ್ತು ಟಿಪ್ಪಣಿ ಮಾಡಿಕೊಳ್ಳುತ್ತೇನೆ” ಎಂದೆ. ಸಿದ್ದಲಿಂಗಯ್ಯನವರು “ಆಗಲಿ ಕೇಳಿ” ಎಂದರು. ನಾನು ಒಂದೆರಡು ಕವಿತೆಗಳ ಬಗ್ಗೆ ಮಾತನಾಡಲು ಸಾಧ್ಯವಾಯಿತು. ಅವರು ನಿರಂತರವಾಗಿ ಕೆಮ್ಮುತ್ತಲೇ ಇದ್ದರು. ಇದರಿಂದ “ನಿಮಗೆ ಆರೋಗ್ಯ ಸುಧಾರಿಸಲಿ ಆಮೇಲೆ ಹೇಳಿದರೆ ಆಯ್ತು ಸಾರ್” ಎಂದೆ ಅದಕ್ಕೆ ಸಿದ್ದಲಿಂಗಯ್ಯನವರು “ಪರವಾಗಿಲ್ಲ ಕೇಳಿ” ಎಂದರು. ಯಾಕೋ ನನಗೆ ಅವರನ್ನು ಹಿಂಸಿಸುತ್ತಿದ್ದೇನೆ ಎಂದು ನನ್ನ ಮನಸ್ಸು ಅನಿಸಿತು. ಅವರ ಜೊತೆ ಆ ಸಮಯದಲ್ಲಿ ತೊಂದರೆ ಕೊಡುವುದು ಬೇಡ ಅನಿಸಿತು. “ಸಾರ್ ಈಗ ಬೇಡ ನೀವು ಮೊದಲು ಹುಷಾರಾಗಿ ಆಮೇಲೆ ಬೇಕಾದರೆ ಮಾತನಾಡೋಣ”ಎಂದೆ. “ಆಗಲಿ ಉದಂತ” ಎಂದರು. ನಂತರ ಅವರು ಆಸ್ಪತ್ರೆಗೆ ಸೇರಿದರು. ನಮ್ಮನೆಲ್ಲ ಬಿಟ್ಟು ಹೋದರು. ಆದರೂ ಅವರು ನಮ್ಮೊಡನೆ ಹಂಚಿಕೊಂಡ ಹತ್ತಾರು ನೆನಪುಗಳು ಹಸಿರಾಗಿವೆ. ಇಂದು ಅವರಿಗೆ 71ನೇ ಹುಟ್ಟು ಹಬ್ಬ ಈ ದಿನ ಒಂದು ನನ್ನ ನೆನಪು ನಿಮಗೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: