ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಅಕ್ರಮ ನಡೆದಿದೆ: ಬಾಂಬೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಕೆ
ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಬಾಂಬೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆಯಾಗಿದೆ. ಮತದಾನದ ಅವಧಿಯ ಕೊನೆಯಲ್ಲಿ ಮತ್ತು ನಂತರ 75 ಲಕ್ಷಕ್ಕೂ ಹೆಚ್ಚು ಮತಗಳು ಚಲಾವಣೆಯಾಗಿವೆ. ಆದರೆ, ಈ ಮತಗಳ ದೃಢೀಕರಣದ ಯಾವುದೇ ಪಾರದರ್ಶಕ ವ್ಯವಸ್ಥೆ ಒದಗಿಸಲಾಗಿಲ್ಲ ಎಂದು ಅರ್ಜಿಯಲ್ಲಿ ದೂರಲಾಗಿದೆ. ಅರ್ಜಿದಾರನ ಪರ ಡಾ.ಬಿಆರ್ ಅಂಬೇಡ್ಕರ್ ರ ಮೊಮ್ಮಗ, ವಕೀಲ ಪ್ರಕಾಶ್ ಅಂಬೇಡ್ಕರ್ ವಾದ ಮಂಡಿಸಿದ್ದಾರೆ.
ಸೋಮವಾರ ಸ್ವಲ್ಪ ಹೊತ್ತು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎ.ಎಸ್. ಗಡ್ಕರಿ ಮತ್ತು ಕಮಲ್ ಖಾಟಾ ರ ಹೈಕೋರ್ಟ್ ಪೀಠ ಭಾರತೀಯ ಚುನಾವಣಾ ಆಯೋಗ ಮತ್ತು ಮಹಾರಾಷ್ಟ್ರದ ಮುಖ್ಯ ಚುನಾವಣಾ ಅಧಿಕಾರಿಗೆ ನೋಟಿಸ್ ಜಾರಿ ಮಾಡಿದೆ.
ನವೆಂಬರ್ 20, 2024ರಂದು ನಡೆದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಮತದಾನದ ಸಂದರ್ಭದಲ್ಲಿ, ಸಂಜೆ 6 ಗಂಟೆಯ ನಂತರ ಭಾರೀ ಪ್ರಮಾಣದಲ್ಲಿ ಮತದಾನ ನಡೆದಿದೆ. ಹಾಗಾಗಿ, ಪ್ರತಿ ಮತಗಟ್ಟೆಯಲ್ಲಿ ಪ್ರತಿ ಮತದಾರರಿಗೆ ವಿತರಿಸಲಾದ ಟೋಕನ್‌ಗಳ ಸಂಖ್ಯೆ ಮತ್ತು ಎಲ್ಲಾ ವಿಧಾನಸಭಾ ಕ್ಷೇತ್ರಗಳ ವಿಭಾಗಗಳಲ್ಲಿ ವಿತರಿಸಲಾದ ಒಟ್ಟು ಟೋಕನ್‌ಗಳನ್ನು ಬಹಿರಂಗಪಡಿಸಲು ರಾಜ್ಯ ಮತ್ತು ಚುನಾವಣಾ ಆಯೋಗಕ್ಕೆ ಸೂಚಿಸಬೇಕು.
ಒಂದು ವೇಳೆ ಟೋಕನ್‌ಗಳ ಮಾಹಿತಿ ನೀಡಲು ಆಯೋಗ ವಿಫಲವಾದರೆ ಸಂಪೂರ್ಣ ಚುನಾವಣಾ ಪ್ರಕ್ರಿಯೆಯನ್ನು ಅನೂರ್ಜಿತ ಮತ್ತು ಕಾನೂನುಬಾಹಿರವೆಂದು ಘೋಷಿಸಬೇಕು ಎಂದು ಅರ್ಜಿದಾರನ ಪರ ವಕೀಲ ಪ್ರಕಾಶ್ ಅಂಬೇಡ್ಕರ್ ನ್ಯಾಯಾಲಯವನ್ನು ಕೋರಿದ್ದಾರೆ.
ಮತದಾನದ ಅವಧಿಯ ಅಂತಿಮ ನಿಮಿಷಗಳಲ್ಲಿ ಮತ್ತು ಮತದಾನದ ಅಧಿಕೃತ ಸಮಯ ಮುಕ್ತಾಯದ ನಂತರವೂ ಹೆಚ್ಚಿನ ಶೇಕಡಾವಾರು ಮತಗಳು ಚಲಾವಣೆಯಾಗಿರುವುದು ಈ ಚುನಾವಣೆಯ ಬಗ್ಗೆ ಗಂಭೀರ ಕಳವಳವನ್ನು ಉಂಟು ಮಾಡಿದೆ ಎಂದು ಹೇಳಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj