ಡಾಬಾ ಬಂತು ಊಟ ಮಾಡ ಏಳ್ರೀ.. ಎಂದು ಗೋಳಾಡಿದ ಪತ್ನಿ: ಎದ್ದೇ ಬಿಟ್ಟ ಸತ್ತು ಹೋಗಿದ್ದ ವ್ಯಕ್ತಿ! - Mahanayaka

ಡಾಬಾ ಬಂತು ಊಟ ಮಾಡ ಏಳ್ರೀ.. ಎಂದು ಗೋಳಾಡಿದ ಪತ್ನಿ: ಎದ್ದೇ ಬಿಟ್ಟ ಸತ್ತು ಹೋಗಿದ್ದ ವ್ಯಕ್ತಿ!

hubballi
11/02/2025

ಹುಬ್ಬಳ್ಳಿ: ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ ವ್ಯಕ್ತಿಯೊಬ್ಬರ ಮೃತದೇಹವನ್ನ ಮನೆಗೆ ಆ್ಯಂಬುಲೆನ್ಸ್ ಮೂಲಕ ತರಲಾಗಿತ್ತು. ಮನೆ ಮುಟ್ಟುತ್ತಿದ್ದಂತೆಯೇ ಮೃತನ ಪತ್ನಿ  ರೀ… ಡಾಬಾ ಬಂತು, ಊಟಾ ಮಾಡ ಏಳ್ರೀ… ಎಂದು ಗೋಳಾಡಿದ್ದಾಳೆ. ಇದೇ ವೇಳೆ ಸತ್ತಿದ್ದ ವ್ಯಕ್ತಿ ಏಕಾಏಕಿ ಉಸಿರಾಡಿದ ಅಚ್ಚರಿಯ ಘಟನೆ ಹಾವೇರಿ ಜಿಲ್ಲೆಯ ಬಂಕಾಪುರದಲ್ಲಿ ನಡೆದಿದೆ.

ಮಂಜುನಾಥ ಗುಡಿಮನಿ ಉರ್ಫ ಮಾಸ್ತರ್(45) ಎಂಬವರು ಸತ್ತು ಬದುಕಿದ ವ್ಯಕ್ತಿಯಾಗಿದ್ದಾರೆ. ಕೆಲವು ದಿನಗಳಿಂದ ಇವರು ಅನಾರೋಗ್ಯದ ಹಿನ್ನೆಲೆ ಧಾರವಾಡದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಭಾನುವಾರ ಬೆಳಿಗ್ಗೆ ಸುಮಾರು 3—4 ಗಂಟೆಗಳಿಂದಲೂ ಉಸಿರಾಟ ನಿಲ್ಲಿಸಿದ್ದರು. ಹೀಗಾಗಿ ವೈದ್ಯರು, ವ್ಯಕ್ತಿ ಸಾವನ್ನಪ್ಪಿರುವುದಾಗಿ ಘೋಷಿಸಿದ್ದರು.

ಅತ್ತ ಸಂಬಂಧಿಕರಿಗೆ ಸಾವಿನ ಸುದ್ದಿ ತಲುಪಿತ್ತು, ಮಂಜುನಾಥ್ ಅವರ ಸಂಬಂಧಿಕರ ವಾಟ್ಸಾಪ್ ಗ್ರೂಪ್ ಗಳಲ್ಲಿ, ಸ್ಟೇಟಸ್ ಗಳಲ್ಲಿ ಓಂ ಶಾಂತಿ ಎಂದು ಫೋಟೋಗಳು ಹರಿದಾಡಿದ್ದವು. ಬಂಧು ಬಳಗಕ್ಕೆ ಸಾವಿನ ಸುದ್ದಿ ತಿಳಿದು ಕಣ್ಣೀರು ಹಾಕಿದ್ದರು.


Provided by

ಇತ್ತ ಮಂಜುನಾಥ್ ಗುಡಿಮನಿ ಅವರ ಪತ್ನಿ ಶೀಲಾ ಪತಿಯ ಸಾವಿನ ಸುದ್ದಿ ಕೇಳಿ ಕಂಗಾಲಾಗಿದ್ದರು. ಪತಿ ಇನ್ನಿಲ್ಲ ಎಂಬ ನೋವಿನಿಂದ ತತ್ತರಿಸಿ ಹೋಗಿದ್ದರು. ಮೃತದೇಹವನ್ನ ಆಸ್ಪತ್ರೆಯಿಂದ ಮನೆಗೆ ಸಾಗಿಸಲು ಆ್ಯಂಬುಲೆನ್ಸ್ ಬಂದೇ ಬಿಟ್ಟಿತು. ಬಂಕಾಪುರಕ್ಕೆ ಆ್ಯಂಬುಲೆನ್ಸ್ ಪ್ರಯಾಣ ಬೆಳೆಸಿತ್ತು. ಪತ್ನಿ ಶೀಲಾ ಗೋಳಾಡುತ್ತಿದ್ದರು. ಊರು ಹತ್ತಿರ ಬರುತ್ತಿದ್ದಂತೆಯೇ ಗೋಲಾಡುತ್ತಿದ್ದ ಶೀಲಾ ಅವರು, ಡಾಬಾ ಬಂತು ನೋಡು… ಊಟ ಮಾಡುತ್ತೀಯಾ? ಎಂದು ಜೋರಾಗಿ ಅತ್ತಿದ್ದಾರೆ. ಈ ವೇಳೆ ಮಂಜುನಾಥ್ ಅವರು ಜೋರಾಗಿ ಉಸಿರು ತೆಗೆದುಕೊಂಡಿದ್ದಾರೆ. ಆ್ಯಂಬುಲೆನ್ಸ್ ನಲ್ಲಿದ್ದವರು ಕೆಲ ಕಾಲ ಶಾಕ್ ಆಗಿದ್ದಾರೆ.

ತಕ್ಷಣವೇ ಅವರನ್ನು ಅದೇ ಆ್ಯಂಬುಲೆನ್ಸ್ ನಲ್ಲಿ ಹುಬ್ಬಳ್ಳಿಯ ಕಿಮ್ಸ್ ಗೆ ಕರೆದೊಯ್ಯಲಾಯ್ತು,  ಸದ್ಯ ರೆಡ್ ಝೋನ್ ನಲ್ಲಿಟ್ಟು ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆಸ್ಪತ್ರೆಯ ನಿರ್ದೇಶಕರು ಮಾಧ್ಯಮಗಳಿಗೆ ತಿಳಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BR3b3qhWZWaCzpD1m6N5uu

ಇತ್ತೀಚಿನ ಸುದ್ದಿ