ರಾಜ್ಯದಲ್ಲಿ ಮತ್ತೊಂದು ಸಿಡಿ ಸ್ಫೋಟವಾಗುತ್ತಾ? | ಏನದು ಮಹಾಸ್ಫೋಟ? - Mahanayaka
2:18 AM Wednesday 11 - December 2024

ರಾಜ್ಯದಲ್ಲಿ ಮತ್ತೊಂದು ಸಿಡಿ ಸ್ಫೋಟವಾಗುತ್ತಾ? | ಏನದು ಮಹಾಸ್ಫೋಟ?

cd
03/04/2021

ವಿಜಯಪುರ:  ರಾಜ್ಯದಲ್ಲಿ ಸದ್ಯ ಸಿಡಿ ರಾಜಕೀಯ ಒಂದು ಹಂತಕ್ಕೆ ತಲುಪಿದೆ. ಇನ್ನೇನಿದ್ದರೂ ಈ ಪ್ರಕರಣ ನ್ಯಾಯಾಲಯದಲ್ಲಿಯೇ ತೀರ್ಮಾನವಾಗುತ್ತದೆ.ಈ ನಡುವೆ ಬಸನಗೌಡ ಪಾಟೀಲ್ ಯತ್ನಾಳ್ ನಿನ್ನೆ ನೀಡಿದ ಹೇಳಿಕೆಯು ರಾಜ್ಯದಲ್ಲಿ ಮತ್ತೊಮ್ಮೆ ಸಿಡಿ ರಾಜಕೀಯ ಮರುಕಳಿಸುತ್ತಾ? ಎನ್ನುವ ಪ್ರಶ್ನೆಗಳಿಗೆ ಕಾರಣವಾಗಿದೆ.

ಮೇ 2ರೊಳಗೆ  ಪಕ್ಷದಲ್ಲಿ ಭಾರೀ ಸ್ಫೋಟವಾಗಲಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಬದಲಾಗದಿದ್ದರೆ,  ಇನ್ನೂ ದೊಡ್ಡ ಸ್ಫೋಟವಾಗಲಿದೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಶುಕ್ರವಾರ ಹೇಳಿಕೆ ನೀಡಿದ್ದಾರೆ.

ಏನಿದು ದೊಡ್ಡ ಸ್ಫೋಟ? ಯತ್ನಾಳ್ ಅವರು ಪರೋಕ್ಷವಾಗಿ ಇನ್ನೊಂದು ಸಿಡಿ ಬಿಡುಗಡೆಯಾಗುತ್ತದೆ ಎನ್ನುವ ಹೇಳಿಕೆಯನ್ನು ನೀಡಿದ್ದಾರಾ?  ಈ ಹಿಂದೆಯೂ ಯತ್ನಾಳ್ ಸಿಡಿ ಬಗ್ಗೆ ಮಾತನಾಡಿದ್ದು, ಸಿಎಂ ಯಡಿಯೂರಪ್ಪ ಅವರ ಸಿಡಿ ತೋರಿಸಿ ಬೆದರಿಸಿ, ಸಚಿವ ಸ್ಥಾನವನ್ನು ಕೆಲವರು ಗಿಟ್ಟಿಸಿಕೊಂಡಿದ್ದಾರೆ. ಈ ಸಿಡಿ ನೋಡಲು ಸಾಧ್ಯವಾಗದಷ್ಟು ಅಸಹ್ಯವಾಗಿದೆ ಎಂದು ಹೇಳಿಕೆ ನೀಡಿದ್ದರು. ಆದರೆ ಈ ಸಿಡಿ ಏನು ಎಂಬ ಬಗ್ಗೆ ಈವರೆಗೆ ಯಾವುದೇ ಸ್ಪಷ್ಟ ಮಾಹಿತಿಗಳಿಲ್ಲದಿದ್ದರೂ, ಸಿಡಿ ವಿಚಾರ ಆಗಾಗ ಪ್ರಸ್ತಾಪವಾಗುತ್ತಲೇ ಇದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಈ ಸಿಡಿ ಬಗ್ಗೆ ಯಡಿಯೂರಪ್ಪ ಅವರ ಪಿಎ ಸಂತೋಷ್ ಆತ್ಮಹತ್ಯೆ ಯತ್ನ ಪ್ರಕರಣದ ಸಂದರ್ಭದಲ್ಲಿ ಹೇಳಿಕೆ ನೀಡಿದ್ದರು. ಆ ಬಳಿಕ ಯತ್ನಾಳ್ ಕೂಡ ಈ ಬಗ್ಗೆ ಹಲವು ಬಾರಿ ಹಲವು ರೀತಿಯ ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನು ಪ್ರಸ್ತಾಪಿಸಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹಲವು ಬಾರಿ ಬಿಜೆಪಿಯನ್ನು ಚುಚ್ಚಿದ್ದರು.

ಬಸನ ಗೌಡ ಪಾಟೀಲ್ ಯತ್ನಾಳ್ ಅವರು ಇನ್ನೊಂದು ದೊಡ್ಡ ಸ್ಫೋಟವಾಗುತ್ತದೆ ಎಂದು ಹೇಳಿಕೆ ನೀಡಿರುವುದು ಇದೀಗ ಹಲವು ಅನುಮಾನಕ್ಕೆ ಕಾರಣವಾಗಿದೆ. ಮೊದಲ ದೊಡ್ಡ ಸ್ಫೋಟ ರಮೇಶ್ ಜಾರಕಿಹೊಳಿ ಅವರ ಅಶ್ಲೀಲ ವಿಡಿಯೋವಾಗಿತ್ತು. ಹಾಗಿದ್ದರೆ, ಯಡಿಯೂರಪ್ಪ ಅಧಿಕಾರದಿಂದ ಕೆಳಗಿಳಿಯದಿದ್ದರೆ ಸಿಡಿ ಬಿಡುಗಡೆ ಮಾಡುವ ಬೆದರಿಕೆಗಳನ್ನು ಹಾಕುವ ಸಾಧ್ಯತೆಗಳಿವೆಯೇ? ಎನ್ನುವ ಅನುಮಾನಗಳಿಗೆ ಕಾರಣವಾಗಿದೆ. ಇಂತಹದ್ದೊಂದು ಅನುಮಾನ ಹಲವು ಸಮಯಗಳಿಂದ ಕೇಳಿ ಬಂದಿದ್ದರೂ, ಇದೀಗ ಇನ್ನೊಂದು ಸ್ಫೋಟ ಸಂಭವಿಸುತ್ತದೆ ಎನ್ನುವ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಮತ್ತೆ ಸಂಚಲ ಸೃಷ್ಟಿಯಾಗಿದೆ.

ಇತ್ತೀಚಿನ ಸುದ್ದಿ