ಸರ್ಕಾರದ ಆಟ ಇಷ್ಟೊಂದು ಕ್ರೂರವೇ? ನಿಜಕ್ಕೂ ಬೇಸರತರಿಸುತ್ತದೆ ಈ ದೃಶ್ಯ

ಬೇಲೂರು ಶಾಸಕರಾದ ಹೆಚ್.ಕೆ ಸುರೇಶ್ ರವರು ಅರಣ್ಯಾಧಿಕಾರಿಗಳ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿದ್ದಾರೆ ಎಂದು ಆರೋಪಿಸಿ, ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಪ್ರತಿಭಟನೆ ಮಾಡಿ, ಅಧಿಕಾರಿಗಳ ಪರವಹಿಸಿದವರಿಗೆ, ಆನೆ ದಾಳಿಯಿಂದ ಪ್ರಾಣ ಕಳೆದುಕೊಂಡವರ ನೋವು ಅರ್ಥವಾಗುವುದಿಲ್ಲವೇ? ಅಧಿಕಾರಿಗಳ ಪರ ನಿಲ್ಲುವ ಸಂಘಟನೆಗಳು ಪ್ರಾಣ ಕಳೆದುಕೊಂಡವರ ಕುಟುಂಬದೊಂದಿಗೆ ನಿಂತು ಯಾಕೆ ಯೋಚನೆ ಮಾಡುತ್ತಿಲ್ಲ? ಹೀಗೊಂದು ಮಾನವೀಯ ಪ್ರಶ್ನೆ ಕೇಳಿ ಬಂದಿದೆ.
ಬಿಕ್ಕೋಡಿನ ಒಬ್ಬ ಮಹಿಳೆ ಕೂಲಿ ಕೆಲಸಕ್ಕೆ ತೆರೆಳಿದ್ದ ಸಮಯ ಆನೆ ದಾಳಿಯಿಂದ ಗಾಯಗೊಂಡು ಸಾವು ಬದುಕಿನ ನಡುವೆ ಹೋರಾಟ ನಡೆಸಿ, ಜೀವ ಇದ್ದರು ಇಲ್ಲದ ಹಾಗೆ ಬದುಕುತ್ತಿರುವ ಒಂದು ಹೆಣ್ಣು ಮಗಳ ಇವತ್ತಿನ ಪರಿಸ್ಥಿತಿ ನೀವು ನೋಡಿದರೆ ಖಂಡಿತಾ ನೀವು ಕೂಡ ಅಧಿಕಾರಿಗಳ ವಿರುದ್ಧ ಸರ್ಕಾರದ ಅರಣ್ಯ ಸಚಿವರ ವಿರುದ್ದ ಇದಕ್ಕಿಂತ ಕೆಟ್ಟ ಶಬ್ದಗಳಿಂದ ಮಾತನಾಡುತ್ತಿದ್ದಿರಿ ಎನ್ನುವ ಆಕ್ರೋಶದ ಮಾತುಗಳು ಕೇಳಿ ಬಂದಿವೆ.
ಆನೆ ದಾಳಿಗೆ ಒಳಪಟ್ಟು ಸತ್ತವರಲ್ಲಿ ಅತಿ ಹೆಚ್ಚು ಜನ ಕೂಲಿ ಕೆಲಸಕ್ಕೆ ತಮ್ಮ ಕಷ್ಟದ ಜೀವನಕ್ಕೆ ಹೊಟ್ಟೆ ತುಂಬಿಸಿಕೊಳ್ಳಲು ಮನೆಯಿಂದ ಹೊರ ಬಂದ ಬಡವರೇ ಆಗಿದ್ದಾರೆ.
ಮಲೆನಾಡು ಪ್ರದೇಶದಲ್ಲಿ ಜನ ಜೀವವನ್ನು ಕೈಯಲ್ಲಿಟ್ಟುಕೊಂಡು ಜೀವನ ನಡೆಸುವಂತಾಗಿದೆ… ಅತಿ ಹೆಚ್ಚು ಹೋಂ ಸ್ಟೇ ರೆಸಾರ್ಟ್ ಗಳು ಇರೋದು ನಮ್ಮ ಜಿಲ್ಲೆಯಲ್ಲೆ… ಕಾಡನ್ನು ಕಡಿದು ಸರ್ಕಾರಿ ಜಾಗವನ್ನು ಅಕ್ರಮವಾಗಿ ಕಬಳಿಸಿಕೊಂಡು ಅಧಿಕಾರ ದುರುಪಯೋಗ ಪಡಿಸಿಕೊಂಡು ಅಕ್ರಮವಾಗಿ ನಡೆಸುತ್ತಿರುವ ಹೋಂ ಸ್ಟೇ ಗಳು ರೆಸಾರ್ಟ್ ಗಳು, ಕಾಡಾನೆಗಳು ನಾಡಿಗೆ ಬರಲು ಮುಖ್ಯ ಕಾರಣ…
ಕಳೆದ ನಾಲ್ಕೈದು ವರ್ಷಗಳಿಂದ ಬಿಕ್ಕೋಡು ಭಾಗದಲ್ಲಿ ಪ್ರತಿ ನಿತ್ಯ ಆನೆಗಳ ಉಪಟಳ ಜಾಸ್ತಿ ಆಗುತ್ತಾ ಇದ್ದರೂ ಕಣ್ಣಿದ್ದು ಕಾಣದಂತೆ ಸರ್ಕಾರ ನಡೆದುಕೊಳ್ಳುತ್ತಿದೆ. ಇದನ್ನು ನೋಡಿದರೆ ಹಲವು ಸಂಶಯ ಗಳು ಮೂಡುತ್ತದೆ. ಜಿಲ್ಲೆಯಲ್ಲಿ ಈಗ ನಡೆಯುತ್ತಿರುವುದು ಆನೆ ದಾಳಿಯಿಂದ ಆಗುತ್ತಿರುವ ಸಾವಲ್ಲ, ಸರ್ಕಾರ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ನಡೆಯುತ್ತಿರುವ ಉದ್ದೇಶ ಪೂರ್ವಕ ಕೊಲೆಯಂತೆ ಭಾಸವಾಗುತ್ತಿದೆ ಎನ್ನುವ ಅಭಿಪ್ರಾಯಗಳು ಕೇಳಿ ಬಂದಿವೆ.
ಎತ್ತಿನಹೊಳೆ ಯೋಜನೆಗಳಿಗೆ ತೋಡಿದ ಮಣ್ಣು ಗುಡ್ಡೆಗಳನ್ನು ದಾಟಿ ಹೋಗಲು ಸಾಧ್ಯವಾಗದೆ ಆಹಾರ ಅರಸಿಕೊಂಡು ಆನೆಗಳು ನಗರಗಳ ಕಡೆ ಮುಖ ಮಾಡುತ್ತಿದೆ.. ಮುಖ್ಯಮಂತ್ರಿ ಗಳಾದ ಸಿದ್ದರಾಮಯ್ಯನವರು ದಯವಿಟ್ಟು ಈ ತಿಂಗಳಿನಿಂದ ಹಾಸನ ಜಿಲ್ಲೆಯ ಜನರಿಗೆ ಗೃಹ ಲಕ್ಷ್ಮಿಯ ಹಣ ಬೇಡ, ಉಚಿತ ಬಸ್ ಬೇಡ ಆ ಹಣವನ್ನು ಕೂಡಿಟ್ಟು ದಯವಿಟ್ಟು ನಮ್ಮ ಜಿಲ್ಲೆಯ ಜನರನ್ನು ಆನೆ ದಾಳಿಯಿಂದ ರಕ್ಷಿಸಲು ಬೇಕಾದ ವ್ಯವಸ್ಥೆ ಮಾಡಿಕೊಡಿ ಎಂದು ಇಲ್ಲಿನ ಜನರು ಬೇಡುವಂತಾಗಿದೆ.
ನಿಮ್ಮ ಹಣದಿಂದ ಮಾತ್ರ ಜನ ನೆಮ್ಮದಿಯಾಗಿ ಇರ್ತಾರೆ ಅನ್ನೋದಾದ್ರೆ ಆನೆಗಳು ಇದೆ ಎಂದು ತಿಳಿದಿದ್ದರೂ, ಬಡ ಜನ ಕೂಲಿ ಕೆಲಸಕ್ಕೆ ಹೋಗುತ್ತಿರಲಿಲ್ಲ. ದಯವಿಟ್ಟು ನಮಗೆ ನಿಮ್ಮ ಹಣ ಬೇಡ ನಿಮ್ಮಿಂದ ಕಳೆದುಕೊಂಡ ಜೀವವನ್ನು ಮತ್ತೆ ಆ ತಾಯಂದಿರಿಗೆ ನೀಡಲು ಸಾಧ್ಯವಿಲ್ಲ ದಯವಿಟ್ಟು ನಮಗೆ ಶಾಶ್ವತ ಪರಿಹಾರ ಒದಗಿಸಿ ಅಂತ ಇಲ್ಲಿನ ಜನರು ಪ್ರಶ್ನಿಸುತ್ತಿದ್ದಾರೆ.
ಒಂದು ಪ್ರಾಣ ಹೋದಾಗ ಕೇವಲ ಕಣ್ಣೀರು ಒರೆಸುವ ಕೆಲಸ ಮಾಡಬೇಡಿ. ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ಪ್ರಯತ್ನಿಸಬೇಕು. ಆನೆ ದಾಳಿಯನ್ನು ಸರ್ಕಾರಕ್ಕೆ ನಿಯಂತ್ರಿಸಲು ಸಾಧ್ಯವಿಲ್ಲವಾದರೆ, ಜನರು, ಈ ಭಾಗದ ಜನಪ್ರತಿನಿಧಿಗಳು ಸಂಬಂಧಪಟ್ಟವರ ವಿರುದ್ಧ ಆಕ್ರೋಶ ವ್ಯಕ್ತಪಡಿಸುವುದು ಕೂಡ ತಪ್ಪಲ್ಲ, ಮುಂದಿನ ದಿನ ವಿಧಾನಸೌಧದ ವರೆಗೂ ಮುಂದುವರಿಯಬಹುದು. ಇದ್ದೂ ಇಲ್ಲದಂತಿರುವ ಅರಣ್ಯ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟರೆ ಸಮರ್ಥ ಬೇರೆ ಸಚಿವ ಯಾರಾದರೂ ನಮ್ಮ ಸಮಸ್ಯೆಗೆ ಪರಿಹಾರ ಒದಗಿಸುವರೇ ಎನ್ನುವ ನಿರೀಕ್ಷೆಯಲ್ಲಿ ಇಲ್ಲಿನ ಜನರಿದ್ದಾರೆ.
ಇಂದು ಮಗನನ್ನು ಕಳೆದುಕೊಂಡ ತಾಯಿಯ ನೋವಿಗೆ ಧ್ವನಿಯಾಗುತ್ತೆ, ಇದೇ ಕೊನೆಯ ಸಾವಾಗಿರಲಿ ಎನ್ನುವ ಮಾತುಗಳು ಕೇಳಿ ಬಂದಿವೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: