ಶಿವರಾತ್ರಿ ಪಾದಯಾತ್ರೆ: ಚಾರ್ಮಾಡಿ ಘಾಟಿಯಲ್ಲಿ ಪರಿಸರ ಹಾನಿ, ಅಪಾಯದ ಹಾದಿಯಲ್ಲಿ ಪಾದಯಾತ್ರೆ!

ಕೊಟ್ಟಿಗೆಹಾರ: ಶಿವರಾತ್ರಿ ಅಂಗವಾಗಿ ಧರ್ಮಸ್ಥಳಕ್ಕೆ ತಲುಪಲು ಪಾದಯಾತ್ರಿಗರು ಭಕ್ತಿಯಿಂದ ಚಾರ್ಮಾಡಿ ಘಾಟಿಯನ್ನು ಅಲಂಕರಿಸಿದರೆ, ಆದರೆ, ಪ್ಲಾಸ್ಟಿಕ್ ಕಸದ ರಾಶಿ ಮತ್ತು ಅರಣ್ಯಕ್ಕೆ ನುಗ್ಗಿದ ಭಕ್ತರ ದಂಡು ಪರಿಸರ ಹಾನಿ ಸೃಷ್ಟಿಸಿದ್ದಾರೆ.
ಅಪಾಯದ ಹಾದಿಯಲ್ಲಿ ಸಾಗಿದ ಯಾತ್ರೆ:
ಮಂಗಳವಾರ ಬೆಳಗ್ಗಿನಿಂದಲೇ ಕೊಟ್ಟಿಗೆಹಾರದಿಂದ ಆರಂಭವಾದ ಪಾದಯಾತ್ರೆಯಲ್ಲಿ ಚಾರ್ಮಾಡಿ ಘಾಟಿಯಲ್ಲಿ ಸಮಯ ಉಳಿತಾಯದ ಆಸೆಯಿಂದ ಹಲವರು ಕಾಡು ದಾರಿಗಳನ್ನು ಆಯ್ಕೆ ಮಾಡಿಕೊಂಡರು. ಆದರೆ, ಈ ದಾರಿಗಳು ಮೀಸಲು ಅರಣ್ಯದ ಮೂಲಕ ಸಾಗುತ್ತಿದ್ದು, ಪ್ರಪಾತ ಮತ್ತು ಗುಡ್ಡಗಳನ್ನು ಏರಿ ಸಾಗುವ ವೇಳೆ ಜೀವಕ್ಕೆ ಅಪಾಯ ಎದುರಾಗಿದೆ. ಕಾಡುಪ್ರಾಣಿಗಳ ವ್ಯಾಪ್ತಿಯಲ್ಲಿಯೇ ಯಾತ್ರಿಕರು ಸಾಗಿದ್ದು, ಅಪಾಯದ ಪರಿಸ್ಥಿತಿ ನಿರ್ಮಾಣವಾಯಿತು.
ಪ್ಲಾಸ್ಟಿಕ್ ತ್ಯಾಜ್ಯದಿಂದ ಪರಿಸರ ಹಾಳು:
ಚಾರ್ಮಾಡಿ ಘಾಟಿಯ ಇಡೀ ರಸ್ತೆಯಾದ್ಯಂತ ಪ್ಲಾಸ್ಟಿಕ್ ಬಾಟಲಿ ಮತ್ತು ತ್ಯಾಜ್ಯಗಳ ರಾಶಿಯು ಬಿದ್ದಿದ್ದು, ಪರಿಸರ ಹಾಳಾಗುವ ಭೀತಿ ಮೂಡಿಸಿದೆ. ಭಕ್ತರಿಗೆ ಆಹಾರ ಮತ್ತು ನೀರು ನೀಡುವ ದಾನಿಗಳ ಸಂಖ್ಯೆ ಹೆಚ್ಚಾಗಿದ್ದು, ಇದರಿಂದ ಪ್ಲಾಸ್ಟಿಕ್ ತ್ಯಾಜ್ಯವೂ ಅಷ್ಟೇ ಪ್ರಮಾಣದಲ್ಲಿ ಹೆಚ್ಚಾಗಿದೆ.
ವಾಹನ ಸಂಚಾರಕ್ಕೆ ತೊಂದರೆ:
ಭಕ್ತರ ಸಂಖ್ಯೆ ಹೆಚ್ಚಾಗಿ ಘಾಟಿ ರಸ್ತೆಯಾದ್ಯಂತ ಪಾದಯಾತ್ರಿಗಳ ದಂಡು ತುಂಬಿಕೊಂಡಿರುವುದರಿಂದ ವಾಹನಗಳ ಸಂಚಾರಕ್ಕೆ ತೊಂದರೆಯುಂಟಾಗಿದೆ. ಸಾಮಾನ್ಯವಾಗಿ 45 ನಿಮಿಷಗಳಲ್ಲಿ ಇಳಿಯಬಹುದಾದ ಘಾಟಿ ದಾರಿಯನ್ನು ನಿಧಾನಗತಿಯಲ್ಲಿಯೇ ಸಾಗಬೇಕಾದ ಸ್ಥಿತಿ ನಿರ್ಮಾಣವಾಯಿತು.
ಪೊಲೀಸರು ಮತ್ತು ಅರಣ್ಯ ಸಿಬ್ಬಂದಿ ಸಾಂದರ್ಭಿಕವಾಗಿ ಪಹರೆಯನ್ನಿಟ್ಟರೂ, ಪಾದಯಾತ್ರಿಗಳನ್ನು ಮೀಸಲು ಅರಣ್ಯಕ್ಕೆ ನುಗ್ಗುವುದು ಮತ್ತು ಅಪಾಯದ ಹಾದಿಯಲ್ಲಿ ಸಾಗುವುದನ್ನು ತಡೆಯಲು ಸಾಕಾಗಲಿಲ್ಲ.
ಪರಿಸರ ಸಂರಕ್ಷಣೆಗೆ ತುರ್ತು ಕ್ರಮ ಅಗತ್ಯ:
ಪ್ರತಿ ವರ್ಷ ಹೆಚ್ಚುತ್ತಿರುವ ಭಕ್ತರ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು, ಪರಿಸರ ಮತ್ತು ವನ್ಯಜೀವಿ ಸಂರಕ್ಷಣೆಗೆ ಕಡ್ಡಾಯ ಕ್ರಮ ಕೈಗೊಳ್ಳುವ ಅಗತ್ಯವಿದೆ. ಪ್ಲಾಸ್ಟಿಕ್ ತ್ಯಾಜ್ಯ ನಿಯಂತ್ರಣ ಮತ್ತು ಭದ್ರತಾ ವ್ಯವಸ್ಥೆ ಕಟ್ಟುನಿಟ್ಟಾಗಿರಬೇಕು. ಭಕ್ತರ ಭಕ್ತಿಯ ಜೊತೆಗೆ ಪರಿಸರಸ್ನೇಹಿ ಯಾತ್ರೆ ನಡೆಸಲು ಜಾಗೃತಿ ಮೂಡಿಸಬೇಕಾಗಿದೆ.
ಧರ್ಮಸ್ಥಳಕ್ಕೆ ಧಾರ್ಮಿಕ ಭಕ್ತಿಯ ಹಾದಿ, ಆದರೆ ಪರಿಸರ ಸಂರಕ್ಷಣೆ ಎಂಬ ಜವಾಬ್ದಾರಿ ಎಲ್ಲರದೂ ಆಗಿರಲಿ ಎನ್ನುವ ಅಭಿಪ್ರಾಯಗಳು ಕೇಳಿ ಬಂದಿವೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: