ಮಲೆನಾಡ ಸೆರಗಲ್ಲಿ ಅಪರೂಪದ ಚಿಟ್ಟೆಗಳ ಪತ್ತೆ: ಈ ಚಿಟ್ಟೆ ಕಂಡು ಬಂದ್ರೆ ಏನರ್ಥ ಗೊತ್ತಾ?

ಕೊಟ್ಟಿಗೆಹಾರ: ಭಾರತದ ಪಶ್ಚಿಮ ಘಟ್ಟಗಳಲ್ಲಿ ಅಪರೂಪವಾಗಿ ಕಾಣಿಸಿಕೊಳ್ಳುವ ಕೇಸರಿ ರೀಡ್ಟೈಲ್(Saffron Reedtail) ಎಂಬ ಚಿಟ್ಟೆ ಕರ್ನಾಟಕದಲ್ಲಿ ಮೊದಲ ಬಾರಿಗೆ ಪತ್ತೆಯಾಗಿದ್ದು, ಮಲೆನಾಡ ಪರಿಸರ ಇನ್ನು ಸಮತೋಲನದಿಂದ ಕೂಡಿದೆ ಎಂಬುದಕ್ಕೆ ಈ ಚಿಟ್ಟೆಗಳು ಪತ್ತೆಯಾಗಿರುವುದೇ ಸಾಕ್ಷಿಯಾಗಿದೆ.
ಮಲೆನಾಡಿನ ಪಶ್ಚಿಮಘಟ್ಟದಲ್ಲಿ ನಿಸರ್ಗದ ಅಧ್ಯಯನದಲ್ಲಿ ತೊಡಗಿರುವ ತೇಜಸ್ ಮೆಹಾಂಡೆ ಮತ್ತು ಅಜಿತ್ ಪಡಿಯಾರ್ ಅವರು ಮೂಡಿಗೆರೆ ತಾಲೂಕಿನ ಸುಂಕಸಾಲೆ ಬಳಿಯ ಮಧುಗುಂಡಿ ಗ್ರಾಮದ ನೇತ್ರಾವತಿ ನದಿಗೆ ಹೊಂದಿಕೊಂಡಿರುವ ಅರಣ್ಯದಲ್ಲಿ ಇಂಡೋಸ್ಟಿಕ್ಟಾ ಡೆಕಾನೆನ್ಸಿಸ್ ಎಂದು ಕರೆಯಲ್ಪಡುವ ಚಿಟ್ಟೆಗಳನ್ನು ಗುರುತಿಸಿದ್ದಾರೆ.
ಅಪರೂಪದ ಐದು ಚಿಟ್ಟೆಗಳನ್ನು ಅವರು ಗುರುತಿಸಿ ಚಿತ್ರಗಳನ್ನು ಸೆರೆ ಹಿಡಿದಿದ್ದಾರೆ. ‘ಎಂಡಮಾನ್’ ಎಂಬ ತ್ರೈಮಾಸಿಕ ಜರ್ನಲ್ ನಲ್ಲಿ ಸಂಶೋಧನಾ ಲೇಖನವನ್ನೂ ಪ್ರಕಟಿಸಿದ್ದಾರೆ. ಈ ಪ್ರಜಾತಿಯ ಚಿಟ್ಟೆಗಳು ಈ ಹಿಂದೆ ಕೇರಳ ಮತ್ತು ತಮಿಳುನಾಡಿನಲ್ಲಿ ಅಂದರೆ ಪಶ್ಚಿಮ ಘಟ್ಟದ ದಕ್ಷಿಣ ಭಾಗದಲ್ಲಿ ಮಾತ್ರ ಕಂಡು ಬಂದಿದ್ದವು. ಮಧುಗುಂಡಿಯಲ್ಲಿ ಪತ್ತೆಯಾಗುವ ಮೂಲಕ ಪಶ್ಚಿಮ ಘಟ್ಟದ ಉತ್ತರಕ್ಕೂ ವಿಸ್ತರಿಸಿರುವ ಸೂಚನೆ ನೀಡಿವೆ ಎಂದು ಅಜಿತ್ ಪಡಿಯಾರ್ ತಿಳಿಸಿದ್ದಾರೆ.
ಈ ಜಾತಿಯ ಚಿಟ್ಟೆಗಳು ಸಾಮಾನ್ಯವಾಗಿ ಕೇಸರಿ ದೇಹಗಳನ್ನು ಹೊಂದಿವೆ. ಇದೇ ಕಾರಣದಿಂದ ಕೇಸರಿ ರೀಡ್ಟೈಲ್ ಎಂದು ಕರೆಯಲಾಗುತ್ತದೆ. ದಟ್ಟವಾದ ಸಸ್ಯ ಸಂಪತ್ತಿನಿಂದ ಆವೃತವಾಗಿರುವ ತೊರೆಗಳಲ್ಲಿ ಮಾತ್ರ ಅವು ಕಂಡು ಬರುತ್ತವೆ ಎಂದು ಮಧುಗುಂಡಿಯಲ್ಲಿರುವ ರಿವರ್ ಮಿಸ್ಟ್ ರೆಸಾರ್ಟ್‌ನಲ್ಲಿ ನಿಸರ್ಗ ಶಾಸ್ತ್ರಜ್ಞರಾಗಿ ಕೆಲಸ ಮಾಡುತ್ತಿರುವ ವನ್ಯಜೀವಿ ಮತ್ತು ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿಧರರೂ ಆಗಿರುವ ಪಡಿಯಾರ್ ವಿವರಿಸುತ್ತಾರೆ.
ಮೂಡಿಗೆರೆ ತಾಲೂಕಿನ ಮಧುಗುಂಡಿ ಗ್ರಾಮವು 2019ರ ಭಾರಿ ಮಳೆಯ ಸಮಯದಲ್ಲಿ ಅತ್ಯಂತ ಭೀಕರವಾದ ಪ್ರವಾಹ ಎದುರಿಸಿತ್ತು. ಭೂಕುಸಿತದಿಂದ ಅನೇಕ ಮನೆಗಳು ಹಾನಿಗೆ ಒಳಗಾಗಿದ್ದವು. ನಿವಾಸಿಗಳು ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದರು. ಈಗ ಹಳ್ಳಿಯಲ್ಲಿ ಜನ ವಸತಿ ಕಡಿಮೆಯಾಗಿದೆ. ಈಗ ಮಧುಗುಂಡಿಯಲ್ಲಿನ ಈ ಆವಿಷ್ಕಾರವು ಈ ಪ್ರದೇಶದ ಕಾಡುಗಳಲ್ಲಿನ ಜೀವ ವೈವಿಧ್ಯತೆಯ ಶ್ರೀಮಂತಿಕೆಯನ್ನು ಸೂಚಿಸುತ್ತಿದೆ.
ಕೇಸರಿ ರೀಡ್ಟೈಲ್ ಎಂಬ ಚಿಟ್ಟೆಗಳು ತೆಳ್ಳಗಿನ ಮತ್ತು ಸೂಕ್ಷ್ಮವಾದ ಕೀಟ ಜಾತಿಗೆ ಸೇರಿದವು. ಎಳೆಯ ಕಿತ್ತಳೆ ಬಣ್ಣದ ಮೈಕಟ್ಟಿನೊಂದಿಗೆ ನಾಜೂಕಾದ ರೂಪವಿರುವ ಈ ಕೀಟಗಳು ಕಾಡಿನ ತೊರವುಗಳಲ್ಲಿ, ವಿಶೇಷವಾಗಿ ನಿಧಾನವಾಗಿ ಚಲಿಸುವ ನಿರ್ಮಲ ನೀರಿನ ಪ್ರದೇಶಗಳಲ್ಲಿ ಕಂಡುಬರುತ್ತವೆ. ಅವುಗಳ ಸಂತಾನೋತ್ಪತ್ತಿಗೆ ಕಲುಷಿತವಾಗದ ತಿಳಿ ನೀರನ್ನು ಅವಲಂಭಿಸುತ್ತವೆ. ಹವಾಮಾನ ಹೆಚ್ಚು ಬದಲಾದರೆ ಮತ್ತು ಮಾಲಿನ್ಯ ಇರುವ ಕಡೆ ಕಾಣಿಸುವುದಿಲ್ಲ. ಅವುಗಳ ಇರುವಿಕೆ ಆರೋಗ್ಯಕರ ಪರಿಸರ ವ್ಯವಸ್ಥೆಯ ಸೂಚಕವಾಗಿದೆ ಎಂದು ಅಜಿತ್ ಪಡಿಯಾರ್ ತಿಳಿಸಿದರು.
ಅರಣ್ಯ ನಾಶ, ನೀರು ಮಾಲಿನ್ಯ ಮತ್ತು ಹವಾಮಾನ ಬದಲಾವಣೆಯಿಂದ ಜೀವ ವೈವಿಧ್ಯಕ್ಕೆ ಉಂಟಾಗುವ ಅಪಾಯವನ್ನು ತಡೆಯಲು ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂಬುದನ್ನು ಈ ಚಿಟ್ಟೆಗಳ ಓಡಾಟವೇ ಸಾರಿ ಹೇಳುತ್ತಿದೆ ಎಂದು ವಿವರಿಸುತ್ತಾರೆ.
ರಿವರ್ ಮುಸ್ಟ್ ನಲ್ಲಿ ಪರಿಸರ ಪಾಠ:
ಮಧುಗುಂಡಿಯಲ್ಲಿರುವ ರಿವರ್ ಮಿಸ್ಟ್ ರೆಸಾರ್ಟ್ ಅತಿಥಿಗಳಿಗೆ ಮೋಜಿನ ತಾಣವಾಗದೆ ಪರಿಸರ ಅಧ್ಯಯನದ ಕೇಂದ್ರವಾಗಿ ಕೆಲಸ ಮಾಡುತ್ತಿದೆ.
ರೆಸಾರ್ಟ್‌ನಲ್ಲಿ ಕಾಡಿನ ದರ್ಶನ, ನದಿಯ ಹರಿವು ಅವುಗಳ ಮಹತ್ವವನ್ನು ಅತಿಥಿಗಳಿಗೆ ನಿತ್ಯ ಪಾಠ ಮಾಡಲಾಗುತ್ತಿದೆ. ಸುತ್ತಮುತ್ತಲ ಪರಿಸರದಲ್ಲಿ ಮನುಷ್ಯನಷ್ಟೇ ಅಲ್ಲದೇ ವನ್ಯಜೀವಿಗಳು ಇರುವಿಕೆಯನ್ನು ಅವುಗಳ ಶಬ್ಧ ಆಲಿಸುವ ಮೂಲಕ ತಿಳಿಸಲಾಗುತ್ತದೆ. ಕಪ್ಪೆ, ಜೇಡ ಆದಿಯಾಗಿ ಸಣ್ಣಪುಟ್ಟ ವನ್ಯಜೀವಿಗಳು ಪರಿಸರಕ್ಕೆ ಎಷ್ಟು ಮುಖ್ಯ. ಅವುಗಳ ಜೀವನ ಚಕ್ರ ಹೇಗಿರುತ್ತದೆ ಎಂಬುದನ್ನು ಅಜಿತ್ ಪಡಿಯಾರ್ ಅಧ್ಯಯನ ಮಾಡುವ ಜತೆಗೆ ರೆಸಾರ್ಟ್ ಗೆ ಬರುವ ಪ್ರವಾಸಿಗರಿಗೂ ತಿಳಿಸುತ್ತಿದ್ದಾರೆ.
ಜನರು ಈ ಭಾಗಕ್ಕೆ ಪಶ್ವಿಮಘಟ್ಟದ ಪರಿಸರವನ್ನು ಸವಿಯಲು ಬರುತ್ತಾರೆ. ಅವರಿಗೆ ಈ ಭಾಗದ ಜೀವ ವೈವಿಧ್ಯತೆಯ ಪ್ರಾಮುಖ್ಯತೆ ತಿಳಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ.
— ಶ್ರೀಜಿತ್, ರಿವರ್ ಮಿಸ್ಟ್ ರೆಸಾರ್ಟ್ ಮಾಲೀಕ
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: