ವಿಜ್ಞಾನ ಲೋಕಕ್ಕೆ ಜೀವನವನ್ನು ಸವೆಸಿದ ಕುಟುಂಬ "ಮೇರಿ ಕ್ಯೂರಿ"ಯದು - Mahanayaka
10:46 AM Friday 28 - February 2025

ವಿಜ್ಞಾನ ಲೋಕಕ್ಕೆ ಜೀವನವನ್ನು ಸವೆಸಿದ ಕುಟುಂಬ “ಮೇರಿ ಕ್ಯೂರಿ”ಯದು

marie curie
28/02/2025

National Science Day– ರಾಷ್ಟ್ರೀಯ ವಿಜ್ಞಾನ ದಿನದ ನೆನಪಿಗಾಗಿ:

ಗಡಿಯಾರದ ಸಂಖ್ಯೆಗಳು, ಸ್ವಿಚ್ ಮತ್ತು ಶರಟಿನ ಗುಂಡಿಗಳು ಇವುಗಳಲ್ಲಿ ಕೆಲವು ರಾತ್ರಿ ವೇಳೆಯಲ್ಲೂ ಹೊಳೆಯುತ್ತವೆ. ಇದಕ್ಕೆ ಕಾರಣ ರೇಡಿಯಂ ಸಂಯುಕ್ತ ಹೊಂದಿರುವ ಬಣ್ಣವನ್ನು ಅವುಗಳಿಗೆ ಬಳಿದಿರುವುದು. ಈ ರೇಡಿಯಂ ಮೂಲ ವಸ್ತುವನ್ನು ಪತ್ತೆ ಹಚ್ಚಿದವರು ದಂಪತಿಗಳಾದ ಮೇರಿ ಕ್ಯೂರಿ ಮತ್ತು ಪಿಯರ್ ಕ್ಯೂರಿ.

ಮೇರಿ ಕ್ಯೂರಿ 1867 ರ ನವೆಂಬರ್ 7ರಂದು ಪೋಲೆಂಡಿನಲ್ಲಿ ಜನಿಸಿದಳು. ತಂದೆ ಪ್ರೌಢಶಾಲೆಯ ಶಿಕ್ಷಕ. ತಾಯಿ ವಿದ್ಯಾರ್ಥಿನಿಯರ ಒಂದು ಶಾಲೆಯನ್ನು ನಡೆಸುತ್ತಿದ್ದಳು. ಮೇರಿಗೆ 11 ವರ್ಷ ಆಗಿದ್ದಾಗಲೇ ತಾಯಿ ಕ್ಷಯದಿಂದ ಮೃತಪಟ್ಟಳು. ಆಗ ಪೋಲೆಂಡನ್ನು ಆಳುತ್ತಿದ್ದ ರಷ್ಯನ್ ಆಳರಸರ ಅವಕೃಪೆಗೆ ಮೇರಿಯ ತಂದೆ ಗುರಿಯಾಗಿ ಕೆಲಸ ಕಳೆದುಕೊಂಡರು. ಮೇರಿಗೆ ಲಭಿಸಿದ ಶಿಕ್ಷಣ ಪ್ರೌಢಶಾಲೆಯವರಿಗೆ ಮಾತ್ರ. ಪ್ಯಾರಿಸ್ಸಿಗೆ ತೆರಳಿ ವೈದ್ಯವಿಜ್ಞಾನ ಕಲಿಯುವ ಆಸೆ ಮೇರಿಗೆ ಇತ್ತು ಆದರೆ ಅಣ್ಣ ಮತ್ತು ಅಕ್ಕ ಕೂಡ ವಿದ್ಯಾಭ್ಯಾಸಕ್ಕಾಗಿ ಪ್ಯಾರಿಸಿಗೆ ತೆರಳುವ ಆತುರದಲ್ಲಿದ್ದರು. ಇದನ್ನು ತಿಳಿದು ಮೇರಿ ತಾನು ದುಡಿದು ಸಂಪಾದಿಸಿ ಅವರಿಗೆ ನೆರವಾಗಿ ಅನಂತರ ಕಲಿಯುವುದಾಗಿ ನಿಶ್ಚಯಿಸಿದಳು.

ಉದ್ಯೋಗ ಹಿಡಿದಾಗ ಮೇರಿಗೆ 18 ವರ್ಷ ವಯಸ್ಸು ಶ್ರೀಮಂತ ಮನೆತನವೊಂದರ ಕಿರಿಯರಿಗೆ ಪಾಠ ಹೇಳುವುದು ಆಕೆಯ ಕೆಲಸ. ಆಕೆ ಕೆಲಸ ಮಾಡುತ್ತಿದ್ದ ಮನೆಯ ಹಿರಿಯ ಮಗ ಮತ್ತು ಮೇರಿ ಇವರ ನಡುವೆ ಪ್ರೇಮ ಅಂಕುರಿಸಿತು. ಆದರೆ ಹೆತ್ತವರಿಗೆ ತಮ್ಮ ಮಗ ಬಡ ಹುಡುಗಿಯನ್ನು ಮದುವೆಯಾಗುವುದು ಇಷ್ಟವಿರಲಿಲ್ಲ. ಅಡ್ಡ ಬಂದರು. ಮೇರಿ ಹತಾಶಳಾಗಿ ತಂದೆ ಬಳಿ ಮರಳಿದಳು. ಪೋಲೆಂಡಿನಲ್ಲಿ ಶಾಲ ಶಿಕ್ಷಕಿಯಾದಳು.

1891ರಲ್ಲಿ ಮೇರಿ ಪ್ಯಾರಿಸ್ ಗೆ ತೆರಳಿದಳು. ಬಡತನ, ಹಸಿವು ಇವೆ ಅವಳ ಸಂಗಾತಿಗಳಾದರೂ ಓದನ್ನು ಮುಂದುವರಿಸಿದಳು. ಸೊರ್ಬಾನ್ ವಿಶ್ವವಿದ್ಯಾನಿಲಯದ ಪರೀಕ್ಷೆಯಲ್ಲಿ ಮೊದಲಿಗಳಾಗಿ ಉತ್ತೀರ್ಣಳಾದಳು. ಮೊದಲ ಎರಡು ವರ್ಷ ಆಕೆ ಓದಿದ್ದು ಭೌತವಿಜ್ಞಾನ. ಮುಂದಿನ ಎರಡು ವರ್ಷ ಕಲಿತದ್ದು ಗಣಿತ.

ಪಪಲೆಂಡಿನ ಒಬ್ಬ ವಿಜ್ಞಾನಿ ಮಿತ್ರನ ಮೂಲಕ ಮೇರಿಗೆ ವಿಜ್ಞಾನಿ ಪಿಯರ್ ಕ್ಯೂರಿಯ ಪರಿಚಯವಾಯಿತು. ಪೀಯರ್ ಕ್ಯೂರಿಯ ಜನನ 1859ರ ಮೇ 15 ರಂದು ಪ್ಯಾರಿಸ್ ನಲ್ಲಿ. ತಂದೆ ಒಬ್ಬ ವೈದ್ಯ. ಪಿಯರನಿಗೆ ಬಾಲ್ಯದಿಂದಲೂ ಗಣಿತದಲ್ಲಿ ಬಹಳ ಆಸಕ್ತಿ. 18ನೆಯ ವಯಸ್ಸಿಗೆ ವಿದ್ಯಾಭ್ಯಾಸ ಮುಗಿಸಿ ಒಂದು ಪ್ರಯೋಗಾಲಯದಲ್ಲಿ ಸಹಾಯಕನಾಗಿ ವೃತ್ತಿ ಕೈಗೊಂಡ. ತನ್ನ ಅಣ್ಣನ ಜೊತೆಗೂಡಿ ಪಿಜೋವಿದ್ಯುತ್ ವಿದ್ಯಾಮಾನವನ್ನು ಪತ್ತೆಹಚ್ಚಿದ. ಒತ್ತಡವನ್ನು ಹೇರುವುದರಿಂದ ಸ್ಫಟಿಕದಲ್ಲಿ ವಿದ್ಯುತ್ ವಿಭವ ಕಾಣಿಸಿಕೊಳ್ಳುತ್ತದೆ ಎನ್ನುವುದೇ ಈ ವಿದ್ಯಮಾನ. ಮಹಿಳೆಯರೊಂದಿಗೆ ಹೆಚ್ಚು ಬೆರೆಯದವ ಪಿಯರ್ ಸಂಶೋಧನೆಯಲ್ಲಿ ಮಾತ್ರ ಅವನಿಗೆ ಅತೀವ ಆಸಕ್ತಿ, ಶ್ರದ್ಧೆ. ಆದರೆ ಭೌತ, ಗಣಿತ ಸಮಸ್ಯೆಗಳನ್ನು ಸರಾಗವಾಗಿ ಚರ್ಚಿಸುತ್ತಿದ್ದ ರೂಪವತಿ ಮೇರಿ ಅವನ ಕಲ್ಪನೆಯ ಆದರ್ಶ ಮಹಿಳೆಯಾದಳು. ಪಿಯರ್ ಮೇರಿಯನ್ನು 1895 ರಲ್ಲಿ ವಿವಾಹವಾದ. ಮೇರಿ ಮತ್ತು ಪಿಯರ್ ಇಬ್ಬರ ವಿಜ್ಞಾನ ಕ್ಷೇತ್ರದ ಜೀವನವೂ ಒಂದೇ ಆಯಿತು.

ಕಾಂತವಸ್ತುವನ್ನು ನಿರ್ದಿಷ್ಟ ಉಷ್ಣತೆಗಿಂತ ಹೆಚ್ಚಿಗೆ ಕಾಯಿಸಿದರೆ ಅದರ ಕಾಂತತೆ ನಾಶವಾಗುತ್ತದೆ. (ಈ ಉಷ್ಣತೆ “ಕ್ಯೂರಿ ಬಿಂದು” ಎನಿಸಿಕೊಂಡಿದೆ) ಎಂಬ ಪಿಯರ್ ನ ಶೋಧನೆಗೆ ಮದುವೆಯಾದ ವರ್ಷವೇ ಡಾಕ್ಟರೇಟ್ ಪದವಿ ಬಂತು.

1895 ರಲ್ಲಿ ಜರ್ಮನ್ ವಿಜ್ಞಾನಿ ವಿಲ್ ಹೆಲ್ಮ್ ರಾಂಟ್ ಜೆನ್ ಕ್ಷ- ಕಿರಣಗಳನ್ನು ಕಂಡುಹಿಡಿದ. ಮುಂದಿನ ವರ್ಷ ಫ್ರೆಂಚ್ ವಿಜ್ಞಾನಿ ಹೆನ್ರಿ ಬೆಕೆರಲ್ ಯುರೇನಿಯಂ ಲವಣಗಳು ತಾವಾಗಿ ವಿಕಿರಣ ಸೂಸುವುದನ್ನು ಪತ್ತೆಹಚ್ಚಿದ. ಈ ಸಂಶೋಧನೆಗಳ ಬಗೆಗೆ ಕ್ಯೂರಿ ದಂಪತಿಗಳು ಆಸಕ್ತರಾದರು. ಯುರೇನಿಯಂ ಲವಣವು ಆಲ್ಫಾ, ಬೀಟಾ ಮತ್ತು ಗಾಮಾ ಎಂಬ ಮೂರು ಬಗೆಯ ವಿಕಿರಣಗಳನ್ನು ಚೆಲ್ಲುವುದೆಂದು ಮೇರಿ ಕಂಡುಹಿಡಿದಳು. ಈ ಗುಣವನ್ನು “ವಿಕಿರಣಶೀಲತೆ” ಎಂದು ಕರೆದಳು. ಥೋರಿಯಂ ಮೂಲವಸ್ತುವೂ ವಿಕಿರಣಶೀಲವೆಂಬುದನ್ನು ಕಂಡುಕೊಂಡಳು.

ಪಿಯರ್ ಪಾಠ ಹೇಳುತ್ತಿದ್ದ ಶಾಲೆಯಲ್ಲಿ ಬಗೆಬಗೆಯ ಅದಿರು ಶಿಲೆಗಳನ್ನು ಇಟ್ಟಿದ್ದರು. ಮೇರಿ ಅವನೆಲ್ಲ ಪರೀಕ್ಷಿಸಿದಳು. ಪಿಯರ್ ಕೂಡ ಅವಳ ಶೋಧನೆಯಲ್ಲಿ ಕೂಡಿಕೊಂಡ. ಯಾವುದೇ ವಿಕಿರಣಶೀಲ ವಸ್ತುವಿನಲ್ಲೂ ಯುರೇನಿಯಂ ಅಥವಾ ಥೋರಿಯಂ ಇರುತ್ತಿತ್ತು. ಆದರೆ ಪಿಚ್ ಬ್ಲೆಂಡ್ ಎಂಬ ಯುರೇನಿಯಂ ಅದಿರು, ಯುರೇನಿಯಂಗಿಂತಲೂ ಹೆಚ್ಚು ವಿಕಿರಣಶೀಲವಾಗಿತ್ತು. ಇದು ಮೇರಿಯ ಕುತೂಹಲವನ್ನು ಕೆರಳಿಸಿತು.

1898ರ ಜುಲೈ ಹೊತ್ತಿಗೆ ಯುರೇನಿಯಂಗಿಂತ ನೂರಾರು ಪಟ್ಟು ವಿಕಿರಣಶೀಲವಾಗಿದ್ದ ಹೊಸ ಮೂಲವಸ್ತು ಪಿಚ್ ಬ್ಲೆಂಡಿನಲ್ಲಿ ಸಿಕ್ಕಿತು. ತನ್ನ ತಾಯಿನಾಡು ಪೋಲೆಂಡಿನ ಮಮತೆಯಿಂದ ಮೇರಿ ಅದಕ್ಕೆ “ಪೋಲೋನಿಯಂ” ಎಂಬ ಹೆಸರಿಟ್ಟಳು.

ಡಿಸೆಂಬರ್ 1898ರಲ್ಲಿ ಯುರೇನಿಯಂಗಿಂತ 10 ಲಕ್ಷಪಟ್ಟು ವಿಕಿರಣಶೀಲವಾಗಿದ್ದ ರೇಡಿಯಂ ಎಂಬ ಮೂಲವಸ್ತುವನ್ನು ಪಿಚ್ ಬ್ಲೆಂಡ್ ಅದಿರಿನಿಂದ ಕ್ಯೂರಿ ದಂಪತಿಗಳು ಬೇರ್ಪಡಿಸಿದರು. ರೇಡಿಯಂ ಗುಣಲಕ್ಷಣಗಳನ್ನು ಅಳೆಯಬೇಕಾದರೆ ತಕ್ಕ ಪ್ರಮಾಣದಲ್ಲಿ ಶುದ್ಧ ರೂಪದ ರೇಡಿಯಂ ಅಗತ್ಯವಾಗಿತ್ತು. ಜಕೊಸ್ಲೊವಾಕಿಯಾದ ಒಂದು ಗಣಿಯ ಬಳಿ ಅಗತ್ಯವಾಗಿದ್ದ ಪಿಚ್ ಬ್ಲೆಂಡ್ ಅದಿರು ರಾಶಿ ರಾಶಿಯಾಗಿ ಗುಡ್ಡೆ ಬಿದ್ದಿತ್ತು. ಅದನ್ನು ಬಯಸಿದ ವಿಜ್ಞಾನಿಗಳ ಮರಳುತನಕ್ಕೆ ಆಶ್ಚರ್ಯಪಟ್ಟ ಗಣಿ ಮಾಲೀಕ ಸಾಗಿಸಿಕೊಂಡು ಹೋಗುವುದಾದರೆ ಅದಿರನು ಪುಕ್ಕಟೆ ನೀಡಲು ಒಪ್ಪಿದ.

ಕ್ಯೂರಿ ದಂಪತಿಗಳು ಒಂದು ಹಳೆಯ ಶೆಡ್ಡಿನಲ್ಲಿ ಟನ್ ಗಟ್ಟಲೆ ಪಿಚ್ ಬ್ಲೆಂಡನ್ನು ಕಡಾಯಿಗಳಲ್ಲಿ ಕಾಯಿಸಿ ಮತ್ತೆ ಸಂಸ್ಕರಿಸಿದರು. ಸತತವಾಗಿ ನಾಲ್ಕು ವರ್ಷ ಕೆಟ್ಟ ವಾಸನೆಯ ಅನಿಲ ಧೂಮಗಳನ್ನು ಸಹಿಸಿ ದುಡಿದ ಮೇಲೆ ದೊರಕಿದ್ದು 1/10 ಗ್ರಾಂ ರೇಡಿಯಂ.

1897ರಲ್ಲಿ ಕ್ಯೂರಿ ದಂಪತಿಗಳಿಗೆ ಐರೀನ್ ಎಂಬ ಮಗಳು ಜನಿಸಿದಳು. ರೇಡಿಯಂ ಬೇರ್ಪಡೆಯ ಕೆಲಸದ ಜೊತೆಯಲ್ಲಿ ಮಗಳ ಪೋಷಣೆಯೂ ನಡೆಯಿತು. 1898 ಅಕ್ಟೋಬರ್ 17 ರಲ್ಲಿ ತನ್ನ ದಿನಚರಿಯಲ್ಲಿ ಮೇರಿ ಬರೆದಿದ್ದಳು; ‘ಅಂಬೆಗಾಲಿಡುತ್ತಿದ್ದ ಐರೀನ್ ಚೆನ್ನಾಗಿ ನಡೆಯುತ್ತಿದ್ದಾಳೆ’ 1899ಜನವರಿ 6 ರಲ್ಲಿ ಹೀಗೆ ಬರೆದಿದ್ದಳು- ‘ಐರೀನ್ ಗೆ 15ನೇ ಹಲ್ಲು ಬಂದಿದೆ’ ಈ ಎರಡು ಬರಹಗಳ ಮಧ್ಯೆ ಮತ್ತೊಂದು ದಿನ ಬರೆದಿದ್ದಳು- “ಹೊಸ ವಿಕಿರಣಶೀಲ ಮೂಲವಸ್ತುವಿಗೆ ರೇಡಿಯಂ ಎಂಬ ಹೆಸರಿಡಬೇಕೆಂದು ನಮ್ಮ ಆಸೆ”. ತಾಯ್ತನ, ವಿಜ್ಞಾನ ಅಭಿರುಚಿಗಳೆರಡು ಮೇರಿಗೆ ಸ್ವಾಭಾವಿಕವಾಗಿದ್ದವು. 1904ರಲ್ಲಿ ಇನ್ನೊಂದು ಹೆಣ್ಣು ಮಗು ಈವ್ ಜನಿಸಿದಳು.

1903ರಲ್ಲಿ ಕ್ಯೂರಿ ದಂಪತಿಗಳು ಮತ್ತು ಯುರೇನಿಯಂ ಬಗ್ಗೆ ಮುಂಚೆ ಶೋಧ ಮಾಡಿದ್ದ ಬೆಕರೆಲ್ ಇವರೆಲ್ಲರಿಗೂ ಕೂಡಿ ವಿಕಿರಣಶೀಲತೆ ಕಂಡುಹಿಡಿದಿದ್ದಕ್ಕಾಗಿ ನೊಬೆಲ್ ಬಹುಮಾನ ದೊರೆಯಿತು.

1906ರಲ್ಲಿ ಪಿಯರ್ ಕುದುರೆ ಬಂಡಿಯೊಂದಕ್ಕೆ ಸಿಕ್ಕಿ ಮೃತಪಟ್ಟ. ಮುಂದೆ ಸಂಶೋಧನೆಯ ಭಾರವನ್ನು ಮೇರಿಯೊಬ್ಬಳೇ ಹೊತ್ತಳು. ಪ್ಯಾರಿಸಿನ ಸೊರ್ಬಾನ್ ವಿಶ್ವವಿದ್ಯಾನಿಲಯದ ಅಧ್ಯಾಪಕ ಹುದ್ದೆ ಇವಳಿಗೆ ಬಂತು. ಕ್ಯೂರಿ ದಂಪತಿಗಳು ರೇಡಿಯಂ ಬೇರ್ಪಡಿಸುದುದಕ್ಕಾಗಿ 1911 ರಲ್ಲಿ ರಾಸಾಯನ ವಿಜ್ಞಾನದ ನೊಬೆಲ್ ಬಹುಮಾನ ದಂಪತಿಗಳಿಗೆ ದೊರೆಯಿತು. ಅದನ್ನು ಮೇರಿ ಸ್ವೀಕರಿಸಿದಳು. ವಿಜ್ಞಾನ ಕ್ಷೇತ್ರದಲ್ಲಿ ಎರಡು ಬಾರಿ ನೊಬೆಲ್ ಬಹುಮಾನ ಪಡೆದವಳು ಈಕೆಯೊಬ್ಬಳೇ.

ಪ್ರಥಮ ಮಹಾಯುದ್ಧದಲ್ಲಿ ಮೇರಿ ಗಾಯಾಳುಗಳ ಸೇವೆಗೆ ಧಾವಿಸಿದಳು. ಕಡೆಯ ದಿನಗಳಲ್ಲಿ ತಾನೇ ಸ್ಥಾಪಿಸಿದ್ದ ಪ್ಯಾರಿಸ್ ನ ರೇಡಿಯಂ ಇನ್ ಸ್ಟಿಟ್ಯೂಷನ್ ನ ಉಸ್ತುವಾರಿಯಲ್ಲಿ ನಿರತಳಾದಳು. ತಾಯಿಯ ಸಹವಾಸದಲ್ಲಿ ಮಗಳು ಐರೀನ್ ಕೂಡ ಸಮರ್ಥ ವಿಜ್ಞಾನಿಯಾದಳು. ಮೇರಿಗೆ ಸಹಾಯಕನಾಗಿ ಬಂದ ಯುವ ವಿಜ್ಞಾನಿ ಜೊಲಿಯೋನನ್ನು ಐರೀನ್ 1926 ರಲ್ಲಿ ವಿವಾಹವಾದಳು.

ಐರೀನ್ ಕ್ಯೂರಿ ಮತ್ತು ಜೋಲಿಯೋ ಇವರು ಕೃತಕ ವಿಕಿರಣಶೀಲತೆಯನ್ನು ಕಂಡುಹಿಡಿದು ಕೃತಕ ವಿಕಿರಣಶೀಲ ಐಸೋಟೋಪುಗಳನ್ನು ರೂಪಿಸಿದರು. ಅವರ ಶೋಧಕ್ಕೆ 1935 ರಲ್ಲಿ ನೊಬೆಲ್ ಬಹುಮಾನ ಸಂದಿತು. ಈ ವೇಳೆಗೆ ಲ್ಯುಕೇಮಿಯಾದಿಂದ ಮೇರಿ 1934 ಜುಲೈ 4ರಂದು ತೀರಿಕೊಂಡಳು. ಮೇರಿ ಕ್ಯೂರಿಯ ದೇಹ ದೀರ್ಘಕಾಲದ ತನಕ ಅಪಾಯಕಾರಿ ವಿಕಿರಣಗಳ ದಾಳಿಗೆ ಒಳಗಾಗಿತ್ತು. ವಿಜ್ಞಾನಕ್ಕೆ ತನ್ನ ಕುಟುಂಬದ ಜೀವನವನ್ನು ಸೇವೆಸಿ ಆಕೆಯು ಕೀರ್ತಿಶೇಷಳಾದಳು.

ಉದಂತ ಶಿವಕುಮಾರ್


 

ಇತ್ತೀಚಿನ ಸುದ್ದಿ