ಟ್ರಾಫಿಕ್ ಪೊಲೀಸರಿಗೆ ಹಲ್ಲೆಗೆ ಮುಂದಾದ ಸಾರ್ವಜನಿಕರು | ಮೈಸೂರು ಬಳಿಕ ಮತ್ತೊಂದು ಜಿಲ್ಲೆಯಲ್ಲಿ ಘಟನೆ
ಬಳ್ಳಾರಿ: ಪೊಲೀಸರು ಫೈನ್ ಹಾಕುತ್ತಾರೆ ಎಂಬ ಭಯದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಬೈಕ್ ಸವಾರ ಹಾಗೂ ಆತನ ತಾಯಿ ಇದ್ದ ಬೈಕ್ ಸ್ಕಿಡ್ ಆಗಿದ್ದು, ಇದು ಪೊಲೀಸರದ್ದೇ ತಪ್ಪಿನಿಂದ ನಡೆದ ಘಟನೆ ಎಂದು ತಪ್ಪು ತಿಳಿದ ಸಾರ್ವಜನಿಕರು ಟ್ರಾಫಿಕ್ ಪೊಲೀಸರ ಮೇಲೆ ಹಲ್ಲೆ ನಡೆಸಲು ಮುಂದಾಗಿರುವ ಘಟನೆ ಬಳ್ಳಾರಿ ನಗರದ ಸಂಗಮ್ ಸರ್ಕಲ್ ಬಳಿ ನಡೆದಿದೆ.
ಹೆಲ್ಮೆಟ್ ಹಾಕದೇ ತಾಯಿ ಮಗ ಬೈಕ್ ನಲ್ಲಿ ಬಂದಿದ್ದರು. ಪೊಲೀಸರ ಕೈಗೆ ಸಿಕ್ಕಿದರೆ ಫೈನ್ ಕಟ್ಟಬೇಕಾಗುತ್ತದೆ ಎಂದು ಹೆದರಿ ಒಂದೇ ಬಾರಿಗೆ ಬೈಕ್ ಸವಾರ ಬೈಕ್ ನ್ನು ವಿರುದ್ಧ ದಿಕ್ಕಿಗೆ ತಿರುಗಿಸಲು ಯತ್ನಿಸಿದ್ದು, ಈ ವೇಳೆ ಬೈಕ್ ಸ್ಕಿಡ್ ಆಗಿ ತಾಯಿ ಮಗ ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ.
ಮೇಲ್ನೋಟಕ್ಕೆ ಇದನ್ನು ಗಮನಿಸಿದಾಗ ಇದು ಪೊಲೀಸರದ್ದೇ ತಪ್ಪು ಎಂದು ಕಂಡು ಬಂದಿದ್ದರಿಂದ ಸಾರ್ವಜನಿಕರು ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದು, ವಾಗ್ಯುದ್ಧ ನಡೆದಿದೆ. ಇದೇ ಸಂದರ್ಭದಲ್ಲಿ ಹೆಚ್ಚಿನ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
ಇತ್ತೀಚೆಗಷ್ಟೇ ಮೈಸೂರಿನಲ್ಲಿಯೂ ಇಂತಹದ್ದೇ ಘಟನೆ ನಡೆದಿತ್ತು. ಪೊಲೀಸರು ಅಡ್ಡಗಟ್ಟಿದ ವೇಳೆ ವ್ಯಕ್ತಿಯೋರ್ವ ಬೈಕ್ ಸ್ಕಿಡ್ ಆಗಿ ಬಿದ್ದಿದ್ದು, ಈ ವೇಳೆ ಹಿಂದಿನಿಂದ ಬರುತ್ತಿದ್ದ ವಾಹನದ ಅಡಿಗೆ ಸವಾರ ಸಿಲುಕಿ ಸಾವನ್ನಪ್ಪಿದ್ದ. ಇದರಿಂದ ಆಕ್ರೋಶಗೊಂಡ ಸಾರ್ವಜನಿಕರು ಪೊಲೀಸರಿಗೆ ಹಿಗ್ಗಾಮುಗ್ಗಾ ಥಳಿಸಿದ್ದರು.