ಸಿಎಂ ಯಡಿಯೂರಪ್ಪಗೆ ತಟ್ಟಿದ ದಲಿತ ಸಂಘಟನೆಗಳ ಪ್ರತಿಭಟನೆಯ ಬಿಸಿ! - Mahanayaka
8:20 AM Thursday 12 - December 2024

ಸಿಎಂ ಯಡಿಯೂರಪ್ಪಗೆ ತಟ್ಟಿದ ದಲಿತ ಸಂಘಟನೆಗಳ ಪ್ರತಿಭಟನೆಯ ಬಿಸಿ!

yediyurappa
05/04/2021

ಬೆಂಗಳೂರು: ದಲಿತರ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ರಾಜ್ಯ ಸರ್ಕಾರ ತೀವ್ರ ನಿರ್ಲಕ್ಷ್ಯ ವಹಿಸಿದೆ ಎಂದು ದಲಿತ ಸಂಘಟನೆಗಳು ಮುಖ್ಯಮಂತ್ರಿ ಯಡಿಯೂರಪ್ಪ ಎದುರಲ್ಲೇ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಮಾಜಿ ಉಪಪ್ರಧಾನಿ ಡಾ.ಜಗಜೀವನರಾಮ್ ಅವರ ಜನ್ಮ ದಿನಾಚರಣೆ ಪ್ರಯುಕ್ತ ಪ್ರತಿಮೆಗೆ ಮಾಲಾರ್ಪಣೆ ಮಾಡಲು ಬಂದಿದ್ದ ಸಂದರ್ಭದಲ್ಲಿ ಅವರಿಗೆ ದಲಿತ ಸಂಘಟನೆಗಳ ಪ್ರತಿಭಟನೆಯ ಬಿಸಿ ತಟ್ಟಿದೆ.

ಡಾ.ಬಾಬುಜಗಜೀವನ್ ರಾಮ್ ಅವರ 114ನೇ ಜನ್ಮ ದಿನಾಚರಣೆ ಪ್ರಯುಕ್ತ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಬೆಳಗ್ಗೆ 10 ಗಂಟೆಗೆ ವಿಧಾನಸೌಧದ ಪಶ್ಚಿಮ ದ್ವಾರದಲ್ಲಿರುವ ಪ್ರತಿಮೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಇತರ ಅಧಿಕಾರಿಗಳು ಮಾಲಾರ್ಪಣೆ ಮಾಡಲು ಬಂದಿದ್ದರು. ಈ ವೇಳೆ ಅನಿರೀಕ್ಷಿತ ಪ್ರತಿಭಟನೆ ನಡೆದಿದೆ. ಇದರಿಂದಾಗಿ ಸಿಎಂ  ಕೆಲಕಾಲ ಗೊಂದಲ ಹಾಗೂ ಮುಜಗರಕ್ಕೊಳಗಾಗಿದ್ದಾರೆ.

ರಾಮನಗರ ಮತ್ತು ಮಾಗಡಿ ತಾಲ್ಲೂಕಿನ ಕೆಲವು ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿದ್ದು, ಮಾಗಡಿ ತಾಲ್ಲೂಕಿನಲ್ಲಿ ಜಗಜೀವನರಾಮ್ ಭವನ ನಿರ್ಮಾಣ ಕಾಮಗಾರಿ ಸರಿಯಾಗಿ ನಡೆಯುತ್ತಿಲ್ಲ. ಕಾಡುಗೋಡಿ ದಲಿತರ ಮೇಲಿನ ದೌರ್ಜನ್ಯ ಪ್ರಕರಣದಲ್ಲೂ ಇಲಾಖೆ ನಿರ್ಲಕ್ಷ್ಯ ವಹಿಸಿದೆ ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆಯೇ ಸಮಾಜ ಕಲ್ಯಾಣ ಇಲಾಖೆ ಸಚಿವ ಶ್ರೀರಾಮುಲು ಸ್ಥಳಕ್ಕಾಗಮಿಸಿ ಪ್ರತಿಭಟನಾನಿರತರಿಂದ ಮನವಿ ಸ್ವೀಕರಿಸಿದರು. ಬಳಿಕ ಮಾತನಾಡಿದ ಅವರು,  ನಮ್ಮ ಸರ್ಕಾರ ದಲಿತರು, ಹಿಂದುಳಿದವರ ಬಗ್ಗೆ ಅಪಾರ ಕಾಳಜಿ ಇಟ್ಟುಕೊಂಡಿದೆ. ನಿಮ್ಮ ಬೇಡಿಕೆಗಳನ್ನು ಸಕಾರಾತ್ಮಕವಾಗಿ ಪರಿಗಣಿಸಲಾಗುವುದು. ಈ ಬಗ್ಗೆ ಯಾರಿಗೂ ಅನುಮಾನ ಬೇಡ ಎಂದು ಮನವೊಲಿಸಿದ್ದರಿಂದ ದಲಿತ ಸಂಘಟನೆಗಳು ತಮ್ಮ ಪ್ರತಿಭಟನೆಯನ್ನು ಹಿಂಪಡೆದರು. ಈ ಬೆಳವಣಿಗೆಯಿಂದಾಗಿ ಕೆಲಕಾಲ ಸ್ಥಳದಲ್ಲಿ ಗೊಂದಲದ ಪರಿಸ್ಥಿತಿ ನಿರ್ಮಾಣವಾಗಿತ್ತು.

ಇತ್ತೀಚಿನ ಸುದ್ದಿ