ಮತದಾರರ ಪಟ್ಟಿಯಲ್ಲಿದ್ದದ್ದು 90 ಜನ, ಆದರೆ ಮತ ಚಲಾಯಿಸಿದ್ದು 171 ಜನರು!

ದಿಸ್ಪುರ್: ಮತದಾರರ ಪಟ್ಟಿಯಲ್ಲಿ ಇದ್ದರ ಜನರ ಸಂಖ್ಯೆಗಿಂತಲೂ ಹೆಚ್ಚು ಜನ ಮತಚಲಾಯಿಸಿದ ಘಟನೆ ಅಸ್ಸಾಂನಲ್ಲಿ ನಡೆದಿದ್ದು, 90 ಹೆಸರುಗಳು ಪಟ್ಟಿಯಲ್ಲಿದ್ದರೆ, 171 ಜನರು ಮತಚಲಾಯಿಸಿರುವುದು ವರದಿಯಾಗಿದೆ.
ಅಸ್ಸಾಂನಲ್ಲಿ ಎರಡನೇ ಹಂತದ ಮತದಾನದ ವೇಳೆ ಈ ಘಟನೆ ನಡೆದಿದೆ. ಇಲ್ಲಿನ ಹಸಾಓ ಜಿಲ್ಲೆಯ ಹಾಫಲೋಂಗ್ ವಿಧಾನಸಭಾ ಕ್ಷೇತ್ರದಲ್ಲಿ ಈ ಘಟನೆ ನಡೆದಿದ್ದು, ಸೋಮವಾರ ಘಟನೆ ಬೆಳಕಿಗೆ ಬಂದಿದೆ.
ಏಪ್ರಿಲ್ 1ರಂದು 39 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು. ಈ ವೇಳೆ ಗ್ರಾಮದ ಕೆಲವು ಮುಖಂಡರು ತಮ್ಮದೇ ಮತದಾರರ ಪಟ್ಟಿಯೊಂದನ್ನು ತಂದು, ಈ ಹೆಸರಿನ ಪ್ರಕಾರವೇ ವೋಟಿಂಗ್ ನಡೆಯಬೇಕು ಎಂದು ಗಲಾಟೆ ನಡೆಸಿದ್ದಾರೆನ್ನಲಾಗಿದೆ.
ಚುನಾವಣಾ ಆಯೋಗ ನೀಡಿರುವ ಪಟ್ಟಿಯಲ್ಲಿ 90 ಜನರ ಹೆಸರಿದ್ದರೆ, ಗ್ರಾಮದ ಮುಖಂಡರು ನೀಡಿದ್ದ ಪಟ್ಟಿಯಲ್ಲಿ 171 ಮತದಾರರಿದ್ದರು. ಮುಖಂಡರ ಗಲಾಟೆಯಿಂದಾಗಿ ಕೊನೆಗೆ ಅಧಿಕಾರಿಗಳು ಗ್ರಾಮಸ್ಥರು ಹೇಳಿದಂತೆ ಕೇಳಿದ್ದಾರೆ ಎಂದು ಹೇಳಲಾಗಿದೆ.
ಘಟನೆ ಸಂಬಂಧ ಐವರು ಚುನಾವಣಾಧಿಕಾರಿಗಳನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ. ಜೊತೆಗೆ ಚುನಾವಣಾ ಆಯೋಗವು ಈ ಪ್ರಕರಣವನ್ನು ಉನ್ನತ ಮಟ್ಟದಲ್ಲಿ ತನಿಖೆ ನಡೆಸುವಂತೆ ಆದೇಶ ನೀಡಿದೆ.