ಮಹಾನಾಯಕ ಫಲಶ್ರುತಿ: ಗ್ರಾ.ಪಂ.ಉಪಾಧ್ಯಕ್ಷನ ಹೋರಾಟಕ್ಕೆ ಜಯ: ಹಕ್ಕುಪತ್ರ ವಿತರಣೆಗೆ ಚಾಲನೆ

ಕೊಟ್ಟಿಗೆಹಾರ: ಮೂಡಿಗೆರೆ ತಾಲ್ಲೂಕಿನ ಬಾಳೂರು ಹೋಬಳಿಯ ನಿಡುವಾಳೆ ಗ್ರಾಮಪಂಚಾಯಿತಿ ವ್ಯಾಪ್ತಿಯ ಮರ್ಕಲ್ ಗ್ರಾಮದ ಜನತೆಗೆ ಮನೆ ಜಾಗದ ಹಕ್ಕುಪತ್ರ ವಿತರಣೆಯು ಪ್ರಾರಂಭವಾಗಿದೆ. ಈ ಪ್ರಗತಿಯ ಹಿಂದಿನ ಪ್ರಮುಖ ಕಾರಣ ಗ್ರಾಮಪಂಚಾಯತ್ ಉಪಾಧ್ಯಕ್ಷ ನವೀನ್ ಹಾವಳಿ ಅವರ ಸತತ ಹೋರಾಟ.
ನಿಡುವಾಳೆ ವ್ಯಾಪ್ತಿಯ ಗ್ರಾಮಸ್ಥರಿಗೆ ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ, ನವೀನ್ ಹಾವಳಿ ಅವರು ಜಾಗದ ಮಣ್ಣನ್ನು ಹೊತ್ತು ಕಾಲ್ನಡಿಗೆ ಮೂಲಕ ಮೂಡಿಗೆರೆ ತಾಲ್ಲೂಕು ಕಚೇರಿಗೆ ಹೋಗಿ ಗಮನ ಸೆಳೆದಿದ್ದರು. ಈ ಬಗ್ಗೆ ಮಹಾನಾಯಕ ವರದಿ ಮಾಡಿತ್ತು. ಇದೀಗ ಅವರ ಈ ಕಠಿಣ ಪ್ರಯತ್ನಕ್ಕೆ ಫಲ ಸಿಕ್ಕಿದ್ದು, ತಹಸೀಲ್ದಾರ್ ರಾಜಶೇಖರ ಮೂರ್ತಿಯವರು ಕೆಲವು ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿದ್ದಾರೆ.
ಮರ್ಕಲ್ ಗ್ರಾಮದ ಸರ್ವೆ ನಂಬರ್ 3 ನಲ್ಲಿ ಸಲ್ಲಿಸಿದ 94/C ಅರ್ಜಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಆಗಿದೆ. ಇನ್ನುಳಿದ ಸರ್ವೆ ನಂಬರ್ 111 ವಾಟೇಖಾನ್, ಸರ್ವೆ ನಂಬರ್ 9 ಸಂಪಿಗೆಖಾನ್, ಗ್ರೂಪ್ ಹೌಸ್ ಉರ್ವಿಖಾನ್, ಸರ್ವೆ ನಂಬರ್ 41 ನಿಡುವಾಳೆ ಭಗತ್ ಸಿಂಗ್ ನಗರ ಮತ್ತು ಸರ್ವೆ ನಂಬರ್ 77 ಅರೆಕುಡಿಗೆ ಮೆಕ್ಕಿಮನೆ ಮರ್ಕಲ್ ಪ್ರದೇಶದ 50 ಕುಟುಂಬಗಳಿಗೆ ಅರಣ್ಯ ಒಪ್ಪಿಗೆ ಪತ್ರ ಸಿಕ್ಕ ತಕ್ಷಣ ಹಕ್ಕುಪತ್ರ ನೀಡುವುದಾಗಿ ತಹಸೀಲ್ದಾರ್ ತಿಳಿಸಿದ್ದಾರೆ.
ಹಕ್ಕುಪತ್ರ ವಿತರಣೆಗೆ ಸ್ಪಂದಿಸಿದ ತಹಸೀಲ್ದಾರ್, ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ನೌಕರರಿಗೆ ನವೀನ್ ಹಾವಳಿ ಕೃತಜ್ಞತೆ ಸಲ್ಲಿಸಿದ್ದಾರೆ. ಉಳಿದ ಫಲಾನುಭವಿಗಳಿಗೆ ಕೂಡಾ ಆದಷ್ಟು ಬೇಗ ಹಕ್ಕುಪತ್ರ ಸಿಗಬೇಕು ಎಂಬ ಬೇಡಿಕೆಯನ್ನು ಅವರು ಮುಂದಿಟ್ಟಿದ್ದಾರೆ.
ಈ ಹೋರಾಟ ಮತ್ತು ಫಲಿತಾಂಶವು ಇನ್ನಷ್ಟು ಗ್ರಾಮಸ್ಥರಿಗೆ ನ್ಯಾಯ ಒದಗಿಸಲಿದೆ ಎಂಬ ನಿರೀಕ್ಷೆಯಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: