ಚುನಾವಣೆಯ ಬಳಿಕ ಕೇರಳದ ವಿವಿಧೆಡೆ ಹಿಂಸಾತ್ಮಕ ಕೃತ್ಯ: ಮುಸ್ಲಿಮ್ ಲೀಗ್ ಕಾರ್ಯಕರ್ತನ ಬರ್ಬರ ಹತ್ಯೆ - Mahanayaka
6:20 AM Thursday 12 - December 2024

ಚುನಾವಣೆಯ ಬಳಿಕ ಕೇರಳದ ವಿವಿಧೆಡೆ ಹಿಂಸಾತ್ಮಕ ಕೃತ್ಯ: ಮುಸ್ಲಿಮ್ ಲೀಗ್ ಕಾರ್ಯಕರ್ತನ ಬರ್ಬರ ಹತ್ಯೆ

muslim league worker
07/04/2021

ತಿರುವನಂತಪುರಂ: ಕೇರಳ ವಿಧಾನಸಭಾ ಚುನಾವಣೆಯ ಬಳಿಕ ಕೇರಳ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಹಿಂಸಾಚಾರಗಳು ವರದಿಯಾಗಿದ್ದು, ಇಂಡಿಯನ್ ಯೂನಿಯನ್ ಮುಸ್ಲಿಮ್ ಲೀಗ್ (ಐಯುಎಂಎಲ್) ಕಾರ್ಯಕರ್ತನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ಕೇರಳ ರಾಜ್ಯದಲ್ಲಿ ಮೂರು ಪ್ರಮುಖ ಹಿಂಸಾಚಾರಗಳು ನಡೆದಿದೆ. ಕಣ್ಣೂರಿನ ಕುತ್ತುಪರಂಬಾದಲ್ಲಿ 21 ವರ್ಷ ವಯಸ್ಸಿನ ಮನ್ಸೂರ್ ಎಂಬಾತನನ್ನು ಸಿಪಿಎಂ ಪರ ಗೂಂಡಾಗಳ ಗ್ಯಾಂಗ್ ವೊಂದು ಬರ್ಬರವಾಗಿ ಹತ್ಯೆ ಮಾಡಿದೆ. ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ಪರಾಲ್ ಪ್ರದೇಶದಲ್ಲಿ ಈ ಘರ್ಷಣೆ ಸಂಭವಿಸಿದೆ ಎಂದು ಪಿಟಿಐ ವರದಿ ಮಾಡಿದೆ. ಇನ್ನೂ ಘಟನೆ ಸಂದರ್ಭದಲ್ಲಿ ಮೃತ ಮನ್ಸೂರ್ ಸಹೋದರ ಮುಹಾಸಿನ್ ಮೇಲೆ ಕೂಡ ದಾಳಿ ನಡೆಸಲಾಗಿದ್ದು, ಆತನ ಸ್ಥಿತಿ ಗಂಭೀರವಾಗಿದೆ.

ನಕಲಿ ಮತದಾನದ ಆರೋಪದಲ್ಲಿ ಸಹೋದರರ ಮೇಲೆ ದಾಳಿ ನಡೆಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಓರ್ವ ಸಿಪಿಎಂ ಗೂಂಡಾನನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.

ರಾಜ್ಯದ ಉತ್ತರ ಜಿಲ್ಲೆಯಾಗಿರುವ ಕಾಸರಗೋಡಿನಲ್ಲಿ ಬಿಜೆಪಿ ಯುವ ಮೋರ್ಚಾ ಗೂಂಡಾಗಳ ಗುಂಪೊಂದು ಕಳೆದ ರಾತ್ರಿ ಎಡ ಬೆಂಬಲಿಗರ ಕುಟುಂಬದ ಮೇಲೆ ದಾಳಿ ನಡೆಸಿದೆ. ಘಟನೆಯಲ್ಲಿ ಓಮನಾ ಎಂಬ ಮಹಿಳೆ ಹಾಗೂ ಅವರ ಪತಿ ಮತ್ತು ಮಗ ಗಾಯಗೊಂಡಿದ್ದು, ಕಣ್ಣೂರಿನ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಅವರು ದಾಖಲಾಗಿದ್ದಾರೆ. ಸಿಪಿಎಂ ಪರವಾಗಿದ್ದ ಈ ಕುಟುಂಬವು ಬಿಜೆಪಿ ಪ್ರಾಬಲ್ಯ ಇರುವ ಸ್ಥಳದಲ್ಲಿ ವಾಸಿಸುತ್ತಿತ್ತು ಎಂದು ಹೇಳಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಯುವ ಮೋರ್ಚಾ ನಾಯಕ ಶ್ರೀಜಿತ್ ಪರ ಪರಕ್ಕಲಾಯ್ ಸೇರಿದಂತೆ ಆರು ಜನರ ವಿರುದ್ಧ ದೂರು ನೀಡಲಾಗಿದೆ.

ದಕ್ಷಿಣ-ಮಧ್ಯ ಕೇರಳದ ಆಲಪ್ಪುಳ ಜಿಲ್ಲೆಯ ಕಾಯಂಕುಲಂ ಪಟ್ಟಣದಲ್ಲಿ, ಎಡ ಡೆಮಾಕ್ರಟಿಕ್ ಫ್ರಂಟ್ ಗೂಂಡಾಗಳ ಗುಂಪೊಂದು ಇಬ್ಬರು ಯುಡಿಎಫ್ ಕಾರ್ಯಕರ್ತರ ಮೇಲೆ ಕಲ್ಲು ಮತ್ತು ಕೋಲುಗಳಿಂದ ಹಲ್ಲೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಯುಡಿಎಫ್ ಕಾರ್ಯಕರ್ತರ ದೂರಿನನ್ವಯ ಪ್ರಕರಣ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ.

ಇತ್ತೀಚಿನ ಸುದ್ದಿ