ಓಂ ಪ್ರಕಾಶ್ ಹತ್ಯೆ ಕೇಸ್: ಪತ್ನಿ ಜೊತೆ ಕೈ ಜೋಡಿದ್ರಾ ಮಗಳು?: ವೃತ್ತಿಪರ ಕೊಲೆಗಾರರ ಮಾದರಿಯಲ್ಲಿ ಹತ್ಯೆ! - Mahanayaka

ಓಂ ಪ್ರಕಾಶ್ ಹತ್ಯೆ ಕೇಸ್: ಪತ್ನಿ ಜೊತೆ ಕೈ ಜೋಡಿದ್ರಾ ಮಗಳು?: ವೃತ್ತಿಪರ ಕೊಲೆಗಾರರ ಮಾದರಿಯಲ್ಲಿ ಹತ್ಯೆ!

d g om prakash
21/04/2025

ಬೆಂಗಳೂರು: ಮಾಜಿ ಡಿಜಿ ಓಂ ಪ್ರಕಾಶ್ ಹತ್ಯೆ ಕೇಸ್ ಗೆ ಸಂಬಂಧಿಸಿದಂತೆ ಮತ್ತಷ್ಟು ಡೀಟೈಲ್ಸ್ ಲಭ್ಯವಾಗಿದೆ. ಪತಿಯನ್ನ ನಾನೇ ಹತ್ಯೆ ಮಾಡಿದೆ ಅಂತ ಹೇಳಿಕೊಂಡಿರುವ ಪತ್ನಿ ಪಲ್ಲವಿ, ಹಲವು ಅನುಮಾನಗಳನ್ನ ಹುಟ್ಟು ಹಾಕಿದ್ದಾರೆ. ಇದರ ಜೊತೆಗೆ ಈ ಕೇಸ್ ನಲ್ಲಿ ಮಗಳು ಶಾಮೀಲಾಗಿರುವ ಶಂಕೆ ಕೂಡ ವ್ಯಕ್ತವಾಗಿದೆ.


Provided by

ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದಾರೆ ಎನ್ನಲಾದ ಪಲ್ಲವಿ ಅವರು ಮಗಳ ಜತೆ ಸೇರಿ ಸಂಚು ರೂಪಿಸಿ ಮಾನಸಿಕ ಸ್ಥಿಮಿತ ಕಳೆದುಕೊಂಡು ಓಂಪ್ರಕಾಶ್‌ ರನ್ನು ಕೊಲೆ ಮಾಡಿರುವ ಶಂಕೆ ಮೂಡಿದೆ. ಪೊಲೀಸರು ಅವರಿಬ್ಬರನ್ನೂ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ಮಾನಸಿಕ ಕಾಯಿಲೆಗೆ ಸುಮಾರು 12 ವರ್ಷಗಳಿಂದ ಪಲ್ಲವಿ ಚಿಕಿತ್ಸೆ ಪಡೆಯುತ್ತಿದ್ದರು. ಅವರು ಸ್ಕಿಜೋಫ್ರೇನಿಯ ಖಿನ್ನತೆಯಿಂದ ಬಳಲುತ್ತಿದ್ದಾರೆ ಎನ್ನಲಾಗಿದ್ದು, ಇಂಥ ವ್ಯಕ್ತಿಗಳು ಸದಾ ಭ್ರಮೆಯ ಸ್ಥಿತಿಯಲ್ಲಿರುತ್ತಾರೆ. ಯಾವುದೋ ವಿಚಾರ ಕಲ್ಪಿಸಿಕೊಂಡು ಆತಂಕ ಪಡುತ್ತಿರುತ್ತಾರೆ. ಅದೇ ರೀತಿ ಪತಿ ಓಂಪ್ರಕಾಶ್‌ ಮೇಲೆ ಇಲ್ಲಸಲ್ಲದ ಊಹೆ ಮಾಡಿಕೊಂಡು ಜಗಳವಾಡುತ್ತಿದ್ದರು ಎನ್ನಲಾಗಿದೆ.

ಪತಿಯು ನನಗೆ ಮತ್ತು ಮಗಳು ಕೃತಿಗೆ ಚಿತ್ರಹಿಂಸೆ ಕೊಡುತ್ತಿದ್ದಾರೆ. ಮನೆಯಲ್ಲಿ ಸದಾ ಗನ್‌ ಹಿಡಿದುಕೊಂಡು ಓಡಾಡುತ್ತಿದ್ದಾರೆ. ಶೂಟ್‌ ಮಾಡಿ ಕೊಲೆ ಮಾಡುತ್ತೇನೆ ಎಂದು ಭಯಪಡಿಸುತ್ತಿದ್ದಾರೆ. ಹೀಗಾಗಿ, ಪತಿ ವಿರುದ್ಧ ಸುಮೊಟೋ ಕೇಸ್‌ ದಾಖಲಿಸಿ ಅಂತ ಮೂರು ದಿನಗಳ ಹಿಂದೆ ಐಪಿಎಸ್‌ ಅಧಿಕಾರಿಗಳ ಫ್ಯಾಮಿಲಿ ವಾಟ್ಸಪ್‌ ಗ್ರೂಪ್‌ ನಲ್ಲಿ ಪಲ್ಲವಿ ವಾಟ್ಸಾಪ್ ಸಂದೇಶ ಹಾಕಿದ್ದರು ಎನ್ನಲಾಗುತ್ತಿದೆ.

ಕೊಲೆಯ ನಂತರ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದರು. ಈ ವೇಳೆ ಮನೆಯೊಳಗೆ ಹೋಗಲು ಪತ್ನಿ ಪಲ್ಲವಿ ಹಾಗೂ ಮಗಳು ಕೃತಿ ಪೊಲೀಸರಿಗೆ ಅವಕಾಶ ನೀಡಿರಲಿಲ್ಲ. ಸುಮಾರು ಅರ್ಧ ಗಂಟೆಗೂ ಅಧಿಕ ಕಾಲ ಪೊಲೀಸರನ್ನು ಸತಾಯಿಸಿದ್ದರು. ಬಳಿಕ ಹಿರಿಯ ಪೊಲೀಸ್‌ ಅಧಿಕಾರಿಗಳು ಸ್ಥಳಕ್ಕೆ ಬಂದು ಪಲ್ಲವಿ ಮತ್ತು ಕೃತಿ ಅವರ ಮನವೊಲಿಸಿ ಬಾಗಿಲು ತೆರೆಸಿದರು. ನಂತರ ಪೊಲೀಸರು ಮನೆಯನ್ನು ಪ್ರವೇಶಿಸಿ ಮಹಜರು ಪ್ರಕ್ರಿಯೆ ನಡೆಸಿದರು ಎನ್ನಲಾಗಿದೆ.

ವೃತ್ತಿಪರ ಕೊಲೆಗಾರರ ಮಾದರಿಯಲ್ಲಿ ಓಂಪ್ರಕಾಶ್‌ ರನ್ನು ಕೊಲೆ ಮಾಡಲಾಗಿದೆ. ಮುಖ, ಮೂಗು, ಕಣ್ಣು ಹೀಗೆ ಸಿಕ್ಕಸಿಕ್ಕ ಕಡೆಗೆ ಚಾಕುವಿನಿಂದ ಇರಿಯಲಾಗಿದೆ. ಕೊಲೆ ನಡೆದ ಸ್ಥಳದ ತುಂಬೆಲ್ಲಾ ಕಾರದ ಪುಡಿ ಚೆಲ್ಲಾಡಿತ್ತು. ಹಾಲ್‌ನಲ್ಲಿ ಎರಡು ಚಾಕು ಮತ್ತು ಬಾಟಲಿ ಸಿಕ್ಕಿವೆ. ಕೃತ್ಯಕ್ಕೆ ಬಳಸಿದ ಚಾಕು ಬೆಡ್ ಶೀಟ್ ನಲ್ಲಿ ಸುತ್ತಿ ಇಡಲಾಗಿತ್ತು.

ಓಂಪ್ರಕಾಶ್‌ ಅವರಿಗೆ ಬೆಂಗಳೂರಿನಲ್ಲಿ ಎರಡು ಮನೆಗಳಿವೆ. ಕಾವೇರಿ ಜಂಕ್ಷನ್‌ ಬಳಿಯ ಪ್ರೆಸ್ಟೀಜ್‌ ಅಪಾರ್ಟ್‌ಮೆಂಟ್‌ನಲ್ಲಿ ಫ್ಲ್ಯಾಟ್‌ ಮತ್ತು ಎಚ್‌ ಎಸ್‌ ಆರ್‌ ಲೇಔಟ್‌ನ ಐಪಿಎಸ್‌ ಕ್ವಾರ್ಟರ್ಸ್‌ನಲ್ಲಿ ಮನೆ ಇದೆ. ಐಪಿಎಸ್‌ ಕ್ವಾರ್ಟರ್ಸ್‌ನ ಕಟ್ಟಡದ ಕೆಳ ಮಹಡಿಯಲ್ಲಿ ಓಂಪ್ರಕಾಶ್‌ ಮತ್ತು ಪಲ್ಲವಿ ವಾಸವಾಗಿದ್ದರು. ದಂಪತಿಯ ಮಗ ಕಾರ್ತಿಕೇಶ್‌ ಪತ್ನಿಯೊಂದಿಗೆ ಅದೇ ಕಟ್ಟಡದ ಮೂರನೇ ಮಹಡಿಯಲ್ಲಿ ಹಾಗೂ ಓಂಪ್ರಕಾಶ್‌ರ ಮಗಳು ಎರಡನೇ ಮಹಡಿಯಲ್ಲಿ ವಾಸವಾಗಿದ್ದಾರೆ. ಪತ್ನಿಯ ಜತೆ ಜಗಳವಾದಾಗ ಓಂಪ್ರಕಾಶ್‌, ಪ್ರೆಸ್ಟೀಜ್‌ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ನಲ್ಲಿ ವಾಸವಿರುತ್ತಿದ್ದರು ಎಂದು ತಿಳಿದು ಬಂದಿದೆ. ಇನ್ನೂ ಆಸ್ತಿಯ ಸಂಬಂಧ ಓಂಪ್ರಕಾಶ್‌ ಮತ್ತು ಮಕ್ಕಳ ನಡುವೆಯೂ ಭಿನ್ನಾಭಿಪ್ರಾಯವಿತ್ತು. ಜತೆಗೆ, ದಂಪತಿ ಮಧ್ಯೆ ಹಲವು ವರ್ಷಗಳಿಂದ ಕೌಟುಂಬಿಕ ಕಲಹವಿತ್ತು ಎನ್ನಲಾಗಿದೆ.

ಹತ್ಯೆ ನಡೆಸಿರುವ ಪಲ್ಲವಿ, ಕೆಲವು ತಿಂಗಳ ಹಿಂದೆ ತಮ್ಮ ಮನೆ ಮುಂದೆಯೇ ಪತಿಯ ವಿರುದ್ಧ ಧರಣಿ ಮಾಡಿದ್ದರು. ಈ ಸಂಬಂಧ ಎಚ್‌ ಎಸ್‌ ಆರ್‌ ಲೇಔಟ್‌ ಠಾಣೆಯಲ್ಲಿದೂರು ಸಹ ದಾಖಲಾಗಿತ್ತು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ