ಕ್ಯಾಥೋಲಿಕ್ ಪರಮೋಚ್ಚ ಧರ್ಮಗುರು ಪೋಪ್ ಫ್ರಾನ್ಸಿಸ್ ಇನ್ನಿಲ್ಲ

ನವದೆಹಲಿ: ಕ್ಯಾಥೋಲಿಕ್ ಪರಮೋಚ್ಚ ಧರ್ಮಗುರು ಪೋಪ್ ಫ್ರಾನ್ಸಿಸ್ ವ್ಯಾಟಿಕನ್ ನಗರದಲ್ಲಿ ನಿಧನರಾಗಿದ್ದಾರೆ. ಅವರಿಗೆ 88 ವರ್ಷ ವಯಸ್ಸಾಗಿತ್ತು.
ದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಫ್ರಾನ್ಸಿಸ್ ಅವರನ್ನು ಇತ್ತೀಚೆಗೆ ನ್ಯುಮೋನಿಯಾದಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಬೆಳಿಗ್ಗೆ 7:35 ಕ್ಕೆ ಫ್ರಾನ್ಸಿಸ್ ಇಹಲೋಕ ತ್ಯಜಿಸಿದ್ದಾರೆ.
ಪೋಪ್ ಫ್ರಾನ್ಸಿಸ್ ಕಳೆದೊಂದು ವಾರದಿಂದ ಶ್ವಾಸಕೋಶ ಸಂಬಂಧಿತ ಸೋಂಕಿನಿಂದ ಬಳಲುತ್ತಿದ್ದರು. ಫೆಬ್ರವರಿ 14 ರಂದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಅವರು ತೀವ್ರವಾದ ನ್ಯುಮೋನಿಯಾದಿಂದ ಬಳಲುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದರು. ಪೋಪ್ ಸ್ಥಿತಿ ಗಂಭೀರವಾಗಿದೆ ಎಂದು ಶನಿವಾರ ಸಂಜೆ ವ್ಯಾಟಿಕನ್ ಪ್ರಕಟಣೆ ತಿಳಿಸಿತ್ತು.
ಪೋಪ್ ಫ್ರಾನ್ಸಿಸ್ ಅವರ ನಿಧನ ವಾರ್ತೆಯನ್ನು ವ್ಯಾಟಿಕನ್ನ ಕ್ಯಾಮರ್ಲೆಂಗೊ ಕಾರ್ಡಿನಲ್, ಕೆವಿನ್ ಫಾರೆಲ್ ಘೋಷಿಸಿದರು.
ಈಸ್ಟರ್ ಸಂದರ್ಭದಲ್ಲಿ ಬೆಸಿಲಿಕಾದಲ್ಲಿ ಭಾನುವಾರ ಮಾಡಿದ್ದ ಭಾಷಣದಲ್ಲಿ ಅವರು ಧಾರ್ಮಿಕ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಪ್ರಸ್ತಾಪಿಸಿದ್ದರು. ಧಾರ್ಮಿಕ ಸ್ವಾತಂತ್ರ್ಯ ಬಹಳ ಮುಖ್ಯ. ಜೊತೆ ಇತರ ಅಭಿಪ್ರಾಯಗಳನ್ನು ಗೌರವಿಸುವ ಮನಸ್ಸಿರಬೇಕು. ಇವೆರಡು ಇಲ್ಲದಿದ್ದರೆ ಜಗತ್ತಿನಲ್ಲಿ ಶಾಂತಿ ಸ್ಥಾಪನೆ ಸಾಧ್ಯವಿಲ್ಲ ಎಂದು ಈಸ್ಟರ್ ಸಂದೇಶದಲ್ಲಿ ಪೋಪ್ ತಿಳಿಸಿದ್ದರು.
ಪ್ರಧಾನಿ ಮೋದಿ ಸಂತಾಪ:
ಪವಿತ್ರ ಪೋಪ್ ಫ್ರಾನ್ಸಿಸ್ ಅವರ ನಿಧನದಿಂದ ತೀವ್ರ ನೋವಾಗಿದೆ. ಈ ದುಃಖ ಮತ್ತು ಸ್ಮರಣೆಯ ಘಳಿಗೆಯಲ್ಲಿ, ಜಾಗತಿಕ ಕ್ಯಾಥೋಲಿಕ್ ಸಮುದಾಯಕ್ಕೆ ನನ್ನ ಹೃತ್ಪೂರ್ವಕ ಸಂತಾಪಗಳು. ಪೋಪ್ ಫ್ರಾನ್ಸಿಸ್ ಅವರನ್ನು ಪ್ರಪಂಚದಾದ್ಯಂತ ಲಕ್ಷಾಂತರ ಜನರು ಕರುಣೆ, ನಮ್ರತೆ ಮತ್ತು ಆಧ್ಯಾತ್ಮಿಕ ಧೈರ್ಯದ ದೀಪಸ್ತಂಭವಾಗಿ ಯಾವಾಗಲೂ ಸ್ಮರಿಸುತ್ತಾರೆ. ಚಿಕ್ಕ ವಯಸ್ಸಿನಿಂದಲೂ, ಅವರು ಭಗವಂತ ಕ್ರಿಸ್ತನ ಆದರ್ಶಗಳನ್ನು ಅರಿತುಕೊಳ್ಳಲು ತಮ್ಮನ್ನು ತಾವು ಅರ್ಪಿಸಿಕೊಂಡರು. ಅವರು ಬಡವರು ಮತ್ತು ದೀನದಲಿತರಿಗೆ ಶ್ರದ್ಧೆಯಿಂದ ಸೇವೆ ಸಲ್ಲಿಸಿದರು. ಬಳಲುತ್ತಿರುವವರಿಗೆ, ಅವರು ಭರವಸೆಯ ಮನೋಭಾವವನ್ನು ಬೆಳಗಿಸಿದರು.
ನಾನು ಅವರೊಂದಿಗಿನ ನನ್ನ ಭೇಟಿಗಳನ್ನು ಪ್ರೀತಿಯಿಂದ ನೆನಪಿಸಿಕೊಳ್ಳುತ್ತೇನೆ ಮತ್ತು ಸಮಗ್ರ ಮತ್ತು ಸರ್ವತೋಮುಖ ಅಭಿವೃದ್ಧಿಗೆ ಅವರ ಬದ್ಧತೆಯಿಂದ ಹೆಚ್ಚು ಪ್ರೇರಿತನಾಗಿದ್ದೆ. ಭಾರತದ ಜನರ ಮೇಲಿನ ಅವರ ವಾತ್ಸಲ್ಯ ಯಾವಾಗಲೂ ಪಾಲಿಸಲ್ಪಡುತ್ತದೆ. ಅವರ ಆತ್ಮವು ದೇವರ ಅಪ್ಪುಗೆಯಲ್ಲಿ ಶಾಶ್ವತ ಶಾಂತಿಯನ್ನು ಪಡೆಯಲಿ ಎಂದು ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD