Pahalgam Terror Attack: ಪಹಲ್ಗಾಮ್ ಉಗ್ರರ ದಾಳಿ: ಇಬ್ಬರು ವಿದೇಶಿಗರ ಸಹಿತ 26 ಪ್ರವಾಸಿಗರು ಸಾವು

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಈ ದಾಳಿಯಲ್ಲಿ ಇಬ್ಬರು ವಿದೇಶಿಗರು ಸೇರಿದಂತೆ ಒಟ್ಟು 26 ಮಂದಿ ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಅತ್ಯಂತ ಭೀಕರ ದಾಳಿಗಳಲ್ಲಿ ಈ ಭಯೋತ್ಪಾದಕ ದಾಳಿ ಕೂಡ ಒಂದಾಗಿದೆ. ಮಂಗಳವಾರ ಮಧ್ಯಾಹ್ನ 2:30ರ ಸುಮಾರಿಗೆ ಪಹಲ್ಗಾಮ್ ನ ಬೈಸರನ್ ಹುಲ್ಲುಗಾವಲು ಪ್ರದೇಶದಲ್ಲಿ ಸಮವಸ್ತ್ರ ಧರಿಸಿದ ಭಯೋತ್ಪಾದಕರ ಗುಂಪು ಪ್ರವಾಸಿಗರ ಮೇಲೆ ಗುಂಡು ಹಾರಿಸಿತು.
ದಾಳಿ ನಡೆದ ಸ್ಥಳದಲ್ಲಿ ಮೃತದೇಹಗಳು ಬಿದ್ದಿರುವುದು ಮತ್ತು ಸ್ಥಳೀಯರು ಓಡಿ ಬಂದಾಗ ಮಹಿಳೆಯರು ದುಃಖದಿಂದ, ಆತಂಕದಿಂದ ಅಳುತ್ತಿರುವ ದೃಶ್ಯ ಕಂಡು ಬಂತು. ಗುಂಡಿನ ಶಬ್ದ ಕೇಳುತ್ತಿದ್ದಂತೆಯೇ ಪ್ರವಾಸಿಗರು ಓಡಿ ಹೋಗಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಆದರೆ ಈ ಸ್ಥಳ ವಿಶಾಲವಾದ ತೆರೆದ ಪ್ರದೇಶವಾಗಿದೆ. ಹೀಗಾಗಿ ಅಡಗಿಕೊಳ್ಳಲು ಯಾವುದೇ ಸ್ಥಳಗಳು ಇರಲಿಲ್ಲ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.
ಬೈಸರನ್ ಹುಲ್ಲುಗಾವಲು ಪಹಲ್ಗಾಮ್ ಗಿರಿಧಾಮದಿಂದ ಸುಮಾರು 5 ಕಿ.ಮೀ ದೂರದಲ್ಲಿದೆ ಮತ್ತು ಕಾಲ್ನಡಿಗೆಯಲ್ಲಿ ಅಥವಾ ಕುದುರೆಗಳ ಮೂಲಕ ಮಾತ್ರ ಇಲ್ಲಿಗೆ ಪ್ರವೇಶಿಸಬಹುದು. ‘ಮಿನಿ ಸ್ವಿಟ್ಜರ್ಲೆಂಡ್’ ಎಂದು ಕರೆಯಲ್ಪಡುವ ಹುಲ್ಲುಗಾವಲು ಪ್ರದೇಶದಲ್ಲಿ ಪ್ರಕೃತಿಯ ಸೌಂದರ್ಯ ಆಸ್ವಾದಿಸುತ್ತಾ, ತಮ್ಮ ಕುಟುಂಬದ ಜೊತೆಗೆ ತಿಂಡಿ ತಿನ್ನುತ್ತಾ, ಕುದುರೆ ಸವಾರಿ ಮಾಡುತ್ತಾ ಪ್ರವಾಸಿಗರು ಸಂತೋಷದಿಂದ ಕಾಲ ಕಳೆಯುತ್ತಿದ್ದರು. ಇದೇ ವೇಳೆ ಏಕಾಏಕಿ ಶಸ್ತ್ರಸಜ್ಜಿತ ಭಯೋತ್ಪಾದಕರು ಏಕಾಏಕಿ ನುಗ್ಗಿದ್ದಾರೆ. ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿದೆ. ಸಂತೋಷದ ಗೂಡಾಗಿದ್ದ ಆ ಪ್ರದೇಶದಲ್ಲಿ ಕೆಲವೇ ಕ್ಷಣಗಳಲ್ಲಿ ಸಾಲು ಸಾಲು ಶವಗಳು ಬಿದ್ದಿವೆ.
ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪು ಲಷ್ಕರ್–ಎ–ತೈಬಾದ ಸ್ಥಳೀಯ ಶಾಖೆಯಾದ ರೆಸಿಸ್ಟೆನ್ಸ್ ಫ್ರಂಟ್ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ.
ಉಗ್ರರನ್ನು ಪ್ರಾಣಿಗಳು ಎಂದು ಕರೆದ ಒಮರ್ ಅಬ್ದುಲ್ಲಾ:
ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಈ ದಾಳಿಯನ್ನು ಖಂಡಿಸಿ X ನಲ್ಲಿ ಬರೆದುಕೊಂಡಿದ್ದು, ನನಗೆ ನಂಬಲಾಗದಷ್ಟು ಆಘಾತವಾಗಿದೆ. ಪ್ರವಾಸಿಗರ ಮೇಲಿನ ಈ ದಾಳಿಯು ಅಸಹ್ಯಕರವಾಗಿದೆ. ಈ ದಾಳಿಯ ಅಪರಾಧಿಗಳು ಪ್ರಾಣಿಗಳು, ಅಮಾನವೀಯ ಮತ್ತು ತಿರಸ್ಕಾರಕ್ಕೆ ಅರ್ಹರು ಎಂದಿದ್ದಾರೆ. ನಾನು ನನ್ನ ಸಹೋದ್ಯೋಗಿ @sakinaitoo ಅವರೊಂದಿಗೆ ಮಾತನಾಡಿದ್ದೇನೆ ಮತ್ತು ಅವರು ಗಾಯಾಳುಗಳಿಗೆ ವ್ಯವಸ್ಥೆಗಳನ್ನು ನೋಡಿಕೊಳ್ಳಲು ಆಸ್ಪತ್ರೆಗೆ ತೆರಳಿದ್ದಾರೆ. ನಾನು ತಕ್ಷಣ ಶ್ರೀನಗರಕ್ಕೆ ಹಿಂತಿರುಗುತ್ತೇನೆ ಎಂದಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD