ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ನಲ್ಲಿ ದಲಿತ, ಕ್ರೈಸ್ತ, ಮುಸ್ಲಿಮರು ಇದ್ದಾರೆಯೇ? | ಸಿದ್ದರಾಮಯ್ಯ ಪ್ರಶ್ನೆ
ಬಸವಕಲ್ಯಾಣ: ಬಿಜೆಪಿಯ ಸಬ್ ಕಾ ಸಾಥ್ ನಲ್ಲಿ ಮುಸ್ಲಿಮರು, ಕ್ರೈಸ್ತರು, ದಲಿತರು ಇದ್ದಾರಾ? ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದು, ಬಿಜೆಪಿಯು ಕೇವಲ ಸಿರಿವಂತರ ಪರವಾಗಿರುವ ಪಕ್ಷವಾಗಿದ್ದು, ಬಡವರ ವಿರೋಧಿಯಾಗಿದೆ ಎಂದು ಹೇಳಿದ್ದಾರೆ.
ಸಸ್ತಾಪುರ ಗ್ರಾಮದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬಡವರಿಗಾಗಿ ಜಾರಿಗೆ ತಂದಿದ್ದ ಯೋಜನೆಗಳನ್ನು ಬಿಜೆಪಿ ಸರ್ಕಾರ ರದ್ದು ಮಾಡಿದೆ. ನೀವು ಸ್ವಾಭಿಮಾನಿಯಾಗಿದ್ದರೆ, ಬಿಜೆಪಿಗೆ ಈ ಚುನಾವಣೆಯಲ್ಲಿ ಬುದ್ಧಿ ಕಲಿಸಿ ಎಂದು ಮತದಾರರಿಗೆ ಕರೆ ನೀಡಿದರು.
ಬಿಜೆಪಿಯು ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ದಲಿತರ ಏಳಿಗೆಯನ್ನು ಸಹಿಸುವುದಿಲ್ಲ ಎಂದು ಹೇಳಿದ ಸಿದ್ದರಾಮಯ್ಯ, ಬಿಜೆಪಿಯು ಕೇವಲ ಒಂದು ಜಾತಿಯ ಏಳಿಗೆಗೆ ಶ್ರಮಿಸುತ್ತಿದೆ ಎಂದು ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ಬಡವರನ್ನು ಶೋಷಿತರನ್ನು ನಿರ್ಲಕ್ಷಿಸುತ್ತಿರುವ ಇಂತಹ ಬಿಜೆಪಿ ಪಕ್ಷ ಅಧಿಕಾರದಲ್ಲಿರಬಾರದು. ಇವರನ್ನು ಅಧಿಕಾರದಿಂದ ಕೆಳಗಿಳಿಸುತ್ತೇವೆ ಎನ್ನುವುದಕ್ಕೆ ಉಪ ಚುನಾವಣೆಯ ಫಲಿತಾಂಶ ಪೂರಕವಾಗಿರಲಿ ಎಂದು ಮತದಾರರಿಗೆ ಸಿದ್ದರಾಮಯ್ಯ ಕರೆ ನೀಡಿದರು.